ADVERTISEMENT

Joe Root: 39ನೇ ಟೆಸ್ಟ್ ಶತಕ;ಸಂಗಕ್ಕರ ಹಿಂದಿಕ್ಕಿದ ರೂಟ್‌ 4ನೇ ಸ್ಥಾನಕ್ಕೆ ಬಡ್ತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಆಗಸ್ಟ್ 2025, 2:11 IST
Last Updated 4 ಆಗಸ್ಟ್ 2025, 2:11 IST
<div class="paragraphs"><p>ಜೋ ರೂಟ್</p></div>

ಜೋ ರೂಟ್

   

(ರಾಯಿಟರ್ಸ್ ಚಿತ್ರ)

ಲಂಡನ್: ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ತಂಡದ ಅನುಭವಿ ಬ್ಯಾಟರ್ ಜೋ ರೂಟ್ 39ನೇ ಶತಕದ ಸಾಧನೆ ಮಾಡಿದ್ದಾರೆ. ತಮ್ಮ 158ನೇ ಟೆಸ್ಟ್ ಪಂದ್ಯದಲ್ಲಿ ರೂಟ್ ಈ ಸಾಧನೆ ಮಾಡಿದ್ದಾರೆ.

ADVERTISEMENT

152 ಎಸೆತಗಳಲ್ಲಿ ರೂಟ್ 12 ಬೌಂಡರಿಗಳ ನೆರವಿನಿಂದ 105 ರನ್ ಗಳಿಸಿದರು.

ಆ ಮೂಲಕ ಶ್ರೀಲಂಕಾದ ಕುಮಾರ ಸಂಗಕ್ಕರ ಅವರನ್ನು ಹಿಂದಿಕ್ಕಿರುವ ರೂಟ್, ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಸಾರ್ವಕಾಲಿಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ದಾಖಲೆ ಭಾರತದ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಹೆಸರಲ್ಲಿದೆ. ಸಚಿನ್ 200 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 51 ಶತಕಗಳನ್ನು ದಾಖಲಿಸಿದ್ದರು.

ಇನ್ನೂ ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾದ ಮಾಜಿ ಆಲ್‌ರೌಂಡರ್ ಜ್ಯಾಕ್ ಕಾಲಿಸ್ 45 (166 ಪಂದ್ಯ) ಮತ್ತು ಮೂರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ 41 ಶತಕಗಳನ್ನು (168 ಪಂದ್ಯ) ಗಳಿಸಿದ್ದರು.

ಐದನೇ ಸ್ಥಾನದಲ್ಲಿರುವ ಕುಮಾರ ಸಂಗಕ್ಕರ 134 ಪಂದ್ಯಗಳಲ್ಲಿ 38 ಶತಕಗಳನ್ನು ದಾಖಲಿಸಿದ್ದರು.

ಜೋ ರೂಟ್

WTC: 6,000 ರನ್ ಸಾಧನೆ...

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲೂ 6,000 ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೂ ರೂಟ್ ಪಾತ್ರರಾಗಿದ್ದಾರೆ. 69 ಟೆಸ್ಟ್ ಪಂದ್ಯಗಳಲ್ಲಿ ರೂಟ್ 52.86ರ ಸರಾಸರಿಯಲ್ಲಿ 6,080 ರನ್ ಗಳಿಸಿದ್ದಾರೆ.

ಪ್ರಸಕ್ತ ಭಾರತ ವಿರುದ್ಧ ಸಾಗುತ್ತಿರುವ ಟೆಸ್ಟ್ ಸರಣಿಯಲ್ಲಿ ರೂಟ್ 76.71ರ ಸರಾಸರಿಯಲ್ಲಿ ಒಟ್ಟು 537 ರನ್ ಪೇರಿಸಿದ್ದಾರೆ. ಅಲ್ಲದೆ ಭಾರತದ ವಿರುದ್ಧ ಮೂರನೇ ಸಲ ಈ ಸಾಧನೆ ಮಾಡಿದ್ದಾರೆ.

ಇನ್ನು ಒಟ್ಟಾರೆಯಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಸಾಲಿನಲ್ಲಿ ಸಚಿನ್ ತೆಂಡೂಲ್ಕರ್ ನಂತರದ ಸ್ಥಾನದಲ್ಲಿರುವ ರೂಟ್ ಒಟ್ಟು 13,543 ರನ್ ಗಳಿಸಿದ್ದಾರೆ. ಪ್ರಸಕ್ತ ಸಾಗುತ್ತಿರುವ ಸರಣಿಯಲ್ಲೇ ರಿಕಿ ಪಾಂಟಿಂಗ್ ಅವರನ್ನು ಹಿಂದಿಕ್ಕಿದ್ದ ರೂಟ್ ಎರಡನೇ ಸ್ಥಾನಕ್ಕೆ ತಲುಪಿದ್ದರು.

ಈ ಪಟ್ಟಿಯಲ್ಲೂ ಸಚಿನ್ ಅಗ್ರಸ್ಥಾನದಲ್ಲಿದ್ದು, ಒಟ್ಟು 15,921 ರನ್ ಪೇರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.