
ಜೋಫ್ರಾ ಆರ್ಚರ್
ಮೆಲ್ಬರ್ನ್: ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೋಫ್ರಾ ಆರ್ಚರ್ ಅವರು ಪಕ್ಕೆಲುಬಿನ ನೋವಿನಿಂದಾಗಿ ಆ್ಯಷಸ್ ಸರಣಿಯ ಉಳಿದ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ ಎಂದು ತಂಡದ ಸಿಬ್ಬಂದಿ ದೃಢಪಡಿಸಿದ್ದಾರೆ.
ಸುಮಾರು ನಾಲ್ಕು ವರ್ಷಗಳಿಂದ ಒಂದಲ್ಲ, ಒಂದು ಕಾರಣದಿಂದ ಫಿಟ್ನೆಸ್ ಸಮಸ್ಯೆ ಎದುರಿಸುತ್ತಾ ಬಂದಿದ್ದಾರೆ. ಭಾರತ ಎದುರು ಪುನರಾಗಮನ ಮಾಡಿದ್ದ ನಂತರ, 30 ವರ್ಷದ ವೇಗಿ ಉತ್ತಮ ಲಯದಲ್ಲಿದ್ದರು. ಮೊದಲ ಮೂರು ಟೆಸ್ಟ್‌ಗಳಲ್ಲಿ 27.11 ಸರಾಸರಿಯಲ್ಲಿ 9 ವಿಕೆಟ್‌ಗಳನ್ನು ಪಡೆದಿದ್ದರು. ಮೂರನೇ ಟೆಸ್ಟ್‌ನಲ್ಲಿ ಮೊದಲ ಇನಿಂಗ್ಸ್‌ನಲ್ಲಿ 53 ರನ್ನಿಗೆ 5 ವಿಕೆಟ್ ಪಡೆದಿದ್ದ ಅವರು, 51 ರನ್ ಗಳಿಸಿದ್ದರು.
ಜೋಫ್ರಾ ಬದಲು, ಗಸ್ ಅಟ್ಕಿನ್ಸನ್ ಅವರು ಇಂಗ್ಲೆಂಡ್ ತಂಡದ 11ರಲ್ಲಿ ಸ್ಥಾನ ಪಡೆದಿದ್ದಾರೆ. ಓಲಿ ಪೋಪ್ ಬದಲು ಮೂರನೇ ಕ್ರಮಾಂಕದಲ್ಲಿ ಜೇಕಬ್ ಬೆಥೆಲ್ ಆಡಲಿದ್ದಾರೆ.
ನಾಲ್ಕನೇ ಟೆಸ್ಟ್ ಮೆಲ್ಬರ್ನ್‌ನಲ್ಲಿ ಇದೇ ಶುಕ್ರವಾರ ಆರಂಭವಾಗಲಿದೆ. ಕೊನೆಯ ಟೆಸ್ಟ್ ಜನವರಿ 4ರಂದು ಸಿಡ್ನಿಯಲ್ಲಿ ಶುರುವಾಗಲಿದೆ. ಆಸ್ಟ್ರೇಲಿಯಾ ಸರಣಿಯಲ್ಲಿ 3–0 ಮುನ್ನಡೆ ಸಾಧಿಸಿದೆ.
ಎರಡು ಮತ್ತು ಮೂರನೇ ಟೆಸ್ಟ್‌ನ ವಿರಾಮದ ಅವಧಿಯಲ್ಲಿ ಬೆನ್ ಡಕೆಟ್ ಅವರು ಮದ್ಯಸೇವಿಸಿ ನಶೆಯಲ್ಲಿದ್ದರೆನ್ನಲಾದ ವಿಡಿಯೊ ಇತ್ತೀಚೆಗೆ ಹರಿದಾಡಿತ್ತು. ಅವರು ಮೂರು ಟೆಸ್ಟ್ ಪಂದ್ಯಗಳಲ್ಲಿ ಕೇವಲ 16ರ ಸರಾಸರಿಯಲ್ಲಿ ರನ್ ಗಳಿಸಿದ್ದರೂ ಸ್ಥಾನ ಉಳಿಸಿಕೊಂಡಿದ್ದಾರೆ.
ಇಂಗ್ಲೆಂಡ್ ತಂಡ: ಜಾಕ್ ಕ್ರಾಲಿ, ಬೆನ್ ಡಕೆಟ್, ಜೇಕಬ್ ಬೆಥೆಲ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೇಮಿ ಸ್ಮಿತ್, ವಿಲ್ ಜಾಕ್ಸ್, ಗಸ್ ಅಟ್ಕಿನ್ಸನ್, ಬ್ರೈಡನ್ ಕಾರ್ಸ್, ಜೋಶ್ ಟಂಗ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.