ಅಹಮದಾಬಾದ್ (ಪಿಟಿಐ): ಜೋಸ್ ಬಟ್ಲರ್ ಅವರು ಮೂರು ರನ್‌ಗಳ ಅಂತರದಿಂದ ಶತಕ ಪೂರೈಸುವುದನ್ನು ತಪ್ಪಿಸಿಕೊಂಡರು. ಆದರೆ, ಗುಜರಾತ್ ಟೈಟನ್ಸ್ ತಂಡದ ಕೈಯಿಂದ ಗೆಲುವು ಕೈತಪ್ಪದಂತೆ ನೋಡಿಕೊಂಡರು.
ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಅಜೇಯ 97 ರನ್ ಗಳಿಸಿದ ಬಟ್ಲರ್ ಆಟದ ಬಲದಿಂದ ಗುಜರಾತ್ 7 ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಜಯಿಸಿತು. 204 ರನ್‌ಗಳ ಜಯದ ಗುರಿಯನ್ನು ಆತಿಥೇಯ ತಂಡವು 19.2 ಓವರ್‌ಗಳಲ್ಲಿ ಸಾಧಿಸಿತು.
ಬಟ್ಲರ್ 11 ಬೌಂಡರಿ ಮತ್ತು 4 ಸಿಕ್ಸರ್ ಬಾರಿಸಿದ ಬಟ್ಲರ್ ಅವರಿಗೆ ಶತಕ ಪೂರೈಸುವ ಅವಕಾಶವಿತ್ತು. ಒಂದೊಮ್ಮೆ ಅವರು 100 ರನ್ ಪೂರೈಸಿದ್ದರೆ, ವಿರಾಟ್ ಕೊಹ್ಲಿ ಅವರ ಎಂಟು ಶತಕಗಳ ದಾಖಲೆ ಸರಿಗಟ್ಟಬಹುದಿತ್ತು. ಇನಿಂಗ್ಸ್‌ನ ಕೊನೆ ಓವರ್‌ನಲ್ಲಿ ತಂಡಕ್ಕೆ 10 ರನ್‌ಗಳ ಜಯದ ಅಗತ್ಯವಿತ್ತು. ಆಗ ಬಟ್ಲರ್ ನಾನ್‌ಸ್ಟ್ರೈಕರ್‌ನಲ್ಲಿದ್ದರು. ಕ್ರೀಸ್‌ನಲ್ಲಿದ್ದ ರಾಹುಲ್ ತೆವಾಟಿಯಾಗೆ ಗೆಲುವಿನ ರನ್ ಹೊಡೆಯುವ ಅವಕಾಶ ಕೊಟ್ಟರು. ರಾಹುಲ್ ಅವರು ಮಿಚೆಲ್ ಸ್ಟಾರ್ಕ್ ಓವರ್‌ನಲ್ಲಿ ಒಂದು ಸಿಕ್ಸರ್ ಮತ್ತೊಂದು ಬೌಂಡರಿ ಹೊಡೆದರು.
ಬಟ್ಲರ್ ಮತ್ತು ಶೆರ್ಫೈನ್ ರುದರ್‌ಫೋರ್ಡ್ (43; 34ಎ, 4X1, 6X3) ಅವರು ಮೂರನೇ ವಿಕೆಟ್ ಜೊತೆಯಾಟದಲ್ಲಿ 119 ರನ್ ಗಳಿಸಿದರು. ಇದರಿಂದಾಗಿ ಗುಜರಾತ್ ತಂಡವು ಐಪಿಎಲ್‌ನಲ್ಲಿ ಇದೇ ಮೊದಲ ಬಾರಿ ದ್ವಿಶತಕದ ಮೊತ್ತದ ಗುರಿಯನ್ನು ಯಶಸ್ವಿಯಾಗಿ ಸಾಧಿಸಿತು.
ಕರುಣ್, ರಾಹುಲ್ ಮತ್ತು ಪ್ರಸಿದ್ಧ
ಈ ಪಂದ್ಯದಲ್ಲಿ ಕರ್ನಾಟಕದ ಆಟಗಾರರಾದ ಕರುಣ್ ನಾಯರ್, ಕೆ.ಎಲ್. ರಾಹುಲ್ ಮತ್ತು ವೇಗಿ ಪ್ರಸಿದ್ಧಕೃಷ್ಣ ಅವರ ಮುಖಾಮುಖಿ ಗಮನ ಸೆಳೆಯಿತು.
ಟಾಸ್ ಗೆದ್ದ ಗುಜರಾತ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಭಿಷೇಕ್ ಪೊರೆಲ್ (18; 9ಎ, 4X3, 6X1) ಮತ್ತು ಕರುಣ್ ನಾಯರ್ (31; 18ಎ, 4X2, 6X2) ಉತ್ತಮ ಆರಂಭ ನೀಡಿದರು. ಗುಜರಾತ್ ಬೌಲರ್ ಅರ್ಷದ್ ಖಾನ್ ಅವರು ಎರಡನೇ ಓವರ್‌ನಲ್ಲಿ ಪೊರೆಲ್ ವಿಕೆಟ್ ಗಳಿಸಿದರು. ಕರುಣ್ ಜೊತೆಗೂಡಿದ ರಾಹುಲ್ (28; 14ಎ, 4X4, 6X1) ಇನಿಂಗ್ಸ್‌ಗೆ ಬಲ ತುಂಬಲು ಪ್ರಯತ್ನಿಸಿದರು. 2ನೇ ವಿಕೆಟ್ ಜೊತೆಯಾಟದಲ್ಲಿ 35 ರನ್ ಸೇರಿಸಿದರು. ಪ್ರಸಿದ್ಧಕೃಷ್ಣ ಬೀಸಿದ ಎಲ್‌ಬಿಡಬ್ಲ್ಯು ಬಲೆಗೆ ರಾಹುಲ್ ಬಿದ್ದರು. ನಾಲ್ಕು ಓವರ್‌ಗಳ ನಂತರ ಕರುಣ್ ನಾಯರ್ ವಿಕೆಟ್ ಕೂಡ ಪ್ರಸಿದ್ಧ ಖಾತೆ ಸೇರಿತು.
ಪ್ರಸಿದ್ಧ ಅವರ ಸ್ವಿಂಗ್ ದಾಳಿಗೆ ಅಕ್ಷರ್ ಪಟೇಲ್ ಮತ್ತು ವಿಪ್ರಜ್ ನಿಗಮ್ ಕೂಡ ಶರಣಾದರು. ಇದರ ನಡುವೆಯೂ ಡೆಲ್ಲಿ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 203 ರನ್ ಗಳಿಸಿತು. ಅಗ್ರ ಆರು ಬ್ಯಾಟರ್‌ಗಳ ಪುಟ್ಟ ಪುಟ್ಟ ಕಾಣಿಕೆಗಳಿಂದ ಈ ಮೊತ್ತ ಸಾಧ್ಯವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.