ADVERTISEMENT

‘ಕಾಮನ್‌ವೆಲ್ತ್‌ನಲ್ಲಿ ಮಹಿಳಾ ಕ್ರಿಕೆಟ್‌ ಸೇರಿಸಿದ್ದು ಖುಷಿ ತಂದಿದೆ’

ದಕ್ಷಿಣ ಆಫ್ರಿಕಾದ ಹಿರಿಯ ಕ್ರಿಕೆಟಿಗ ಜಾಕ್‌ ಕಾಲಿಸ್‌ ಅನಿಸಿಕೆ

ಪಿಟಿಐ
Published 29 ಜೂನ್ 2019, 19:30 IST
Last Updated 29 ಜೂನ್ 2019, 19:30 IST
ಜಾಕ್‌ ಕಾಲಿಸ್‌
ಜಾಕ್‌ ಕಾಲಿಸ್‌   

ಲಂಡನ್‌ (ಪಿಟಿಐ): ‘ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಮಹಿಳಾ ಕ್ರಿಕೆಟ್‌ ಸೇರ್ಪಡೆ ಮಾಡಿರುವ ಸುದ್ದಿ ತಿಳಿದು ತುಂಬಾ ಆನಂದವಾಯಿತು. ಇದು ಸ್ವಾಗತಾರ್ಹ ನಿರ್ಧಾರ. ಇದರಿಂದ ಆಟಗಾರ್ತಿಯರಿಗೆ ಹೆಚ್ಚಿನ ‍ಮನ್ನಣೆ ದೊರೆಯುವುದರ ಜೊತೆಗೆ ಮಹಿಳಾ ಕ್ರಿಕೆಟ್‌ಗೂ ಹೊಸ ಮೆರುಗು ಸಿಗಲಿದೆ’ ಎಂದು ದಕ್ಷಿಣ ಆಫ್ರಿಕಾದ ಹಿರಿಯ ಆಟಗಾರ ಜಾಕ್‌ ಕಾಲಿಸ್‌ ತಿಳಿಸಿದ್ದಾರೆ.

2022ರಲ್ಲಿ ಬರ್ಮಿಂಗಂನಲ್ಲಿ ನಡೆಯುವ ಕೂಟದಲ್ಲಿ ಮಹಿಳಾ ಕ್ರಿಕೆಟ್‌ ಸೇರಿಸಲು ಕಾಮನ್‌ವೆಲ್ತ್ ಗೇಮ್ಸ್‌ ಫೆಡರೇಷನ್‌ನ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ.

‘ಕಾಮನ್‌ವೆಲ್ತ್‌ನಲ್ಲಿ ಮಹಿಳಾ ಟ್ವೆಂಟಿ–20 ಕ್ರಿಕೆಟ್‌ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಕ್ಕಿದೆ. ಇದು ಖುಷಿಯ ಸಂಗತಿ. ಕಾಮನ್‌ವೆಲ್ತ್‌ ದೇಶಗಳಲ್ಲಿ ಕ್ರಿಕೆಟ್‌ ಹೆಚ್ಚು ಜನಪ್ರಿಯವಾಗಿದೆ. ಅಭಿಮಾನಿಗಳು ಪಂದ್ಯಗಳನ್ನು ವೀಕ್ಷಿಸಲು ಕಾತರರಾಗಿದ್ದಾರೆ’ ಎಂದಿದ್ದಾರೆ.

ADVERTISEMENT

1998ರಲ್ಲಿ ಕ್ವಾಲಾಲಂಪುರದಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ನಲ್ಲಿ ಪುರುಷರ ಕ್ರಿಕೆಟ್‌ ಸೇರ್ಪಡೆಮಾಡಲಾಗಿತ್ತು. ಏಕದಿನ ಮಾದರಿಯಲ್ಲಿ ನಡೆದಿದ್ದ ಟೂರ್ನಿಯಲ್ಲಿ 16 ತಂಡಗಳು ಭಾಗವಹಿಸಿದ್ದವು. ಆಗ ದಕ್ಷಿಣ ಆಫ್ರಿಕಾ ಚಿನ್ನ ಗೆದ್ದಿತ್ತು. ಆಸ್ಟ್ರೇಲಿಯಾ ಬೆಳ್ಳಿಗೆ ತೃಪ್ತಿ ಪಟ್ಟಿತ್ತು. ನ್ಯೂಜಿಲೆಂಡ್‌ ತಂಡ ಕಂಚಿನ ಪದಕ ಪಡೆದಿತ್ತು.

‘1998ರ ಟೂರ್ನಿಯಲ್ಲಿ ನಾನು ಆಡಿದ್ದೆ. ಆಗ ಶಾನ್‌ ಪೊಲಾಕ್‌ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಿದ್ದರು. ಮಾರ್ಕ್ ಬೌಷರ್‌, ಹರ್ಷಲ್‌ ಗಿಬ್ಸ್‌ ಮತ್ತು ಮಕಾಯ್‌ ಎನ್‌ಟಿನಿ ಅವರೂ ತಂಡದಲ್ಲಿದ್ದರು. ಆ ಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದೆವು. ಅದು ಎಂದೂ ಮರೆಯಲಾರದಂತಹದ್ದು’ ಎಂದು ನೆನಪಿನ ಪುಟ ತಿರುವಿ ಹಾಕಿದ್ದಾರೆ.

ಫೈನಲ್‌ನಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಸ್ಟೀವ್‌ ವಾ ನೇತೃತ್ವದ ಆಸ್ಟ್ರೇಲಿಯಾ 183ರನ್‌ ಗಳಿಸಿತ್ತು. ದಕ್ಷಿಣ ಆಫ್ರಿಕಾ 46 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು ಗುರಿ ಮುಟ್ಟಿತ್ತು. ಆ ಪಂದ್ಯದಲ್ಲಿ ಕಾಲಿಸ್‌ 96 ಎಸೆತಗಳಲ್ಲಿ 44ರನ್‌ ಗಳಿಸಿದ್ದರು.

ಈ ಕೂಟದಲ್ಲಿ ಭಾರತ ತಂಡವು ಒಂಬತ್ತನೇ ಸ್ಥಾನ ಗಳಿಸಿತ್ತು. ಅಜಯ್‌ ಜಡೇಜ ತಂಡವನ್ನು ಮುನ್ನಡೆಸಿದರೆ, ಅನಿಲ್‌ ಕುಂಬ್ಳೆ ಉಪನಾಯಕನ ಜವಾಬ್ದಾರಿ ನಿಭಾಯಿಸಿದ್ದರು. ಸಚಿನ್‌ ತೆಂಡೂಲ್ಕರ್‌, ವಿವಿಎಸ್‌ ಲಕ್ಷ್ಮಣ್‌, ಹರಭಜನ್‌ ಸಿಂಗ್‌ ಮತ್ತು ರಾಬಿನ್‌ ಸಿಂಗ್‌ ಅವರೂ ತಂಡದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.