
ಬೆಂಗಳೂರು: ಆಲ್‌ರೌಂಡ್ ಪ್ರದರ್ಶನ ತೋರಿದ ಕರ್ನಾಟಕ ತಂಡವು ಬಿಸಿಸಿಐ ಸೀನಿಯರ್ ಮಹಿಳಾ ಏಕದಿನ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಗುರುವಾರ 92 ರನ್‌ಗಳಿಂದ ಒಡಿಶಾ ತಂಡವನ್ನು ನಿರಾಯಾಸವಾಗಿ ಮಣಿಸಿತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕರ್ನಾಟಕ ತಂಡಕ್ಕೆ ನಾಯಕಿ ಶುಭ ಹಾಗೂ ನಿಕಿ ಪ್ರಸಾದ್ ಅವರು ಅರ್ಧಶತಕಗಳೊಂದಿಗೆ ಆಸರೆಯಾದರು. ಅಮೋಘ ಲಯದಲ್ಲಿರುವ ಶುಭ ಅವರು 101 ಎಸೆತಗಳಲ್ಲಿ 8 ಬೌಂಡಿಸಿ ಹಾಗೂ ಒಂದು ಸಿಕ್ಸರ್ ಸಹಿತ 90 ರನ್ ಹೊಡೆದರು. ಶಿಶಿರಾ ಎ. ಗೌಡ (49;75ಎ, 4x6) ಅವರೊಂದಿಗೆ ಮೊದಲ ವಿಕೆಟ್ ಜೊತೆಯಾಟದಲ್ಲಿ 112 ರನ್ ಸೇರಿಸಿ, ಭದ್ರ ಬುನಾದಿ ಹಾಕಿಕೊಟ್ಟರು. ನಂತರ, ನಿಕಿ (79; 52ಎ, 4x8, 6x2) ಅವರು ಬಿರುಸಿನ ಅರ್ಧಶತಕ ಸಿಡಿಸಿ ಮೊತ್ತವನ್ನು ಹಿಗ್ಗಿಸಿದರು. ರಾಜ್ಯ ತಂಡವು ನಿಗದಿತ ಓವರ್‌ಗಳಲ್ಲಿ 7 ವಿಕೆಟ್‌ಗೆ 326 ರನ್ ಪೇರಿಸಿತು.
ಕಠಿಣ ಗುರಿ ಬೆನ್ನಟ್ಟಿದ ಒಡಿಶಾ 9 ವಿಕೆಟ್‌ಗೆ 234 ರನ್ ಗಳಿಸಿ ಓವರ್ ಪೂರೈಸಿತು. ಮಾಧುರಿ ಮೆಹ್ತಾ (78; 102ಎ, 4x9) ಹಾಗೂ ಸರಿತಾ ಮೆಹರ್ (56; 66ಎ, 4x7) ಹೋರಾಟ ತೋರಿದ್ದು ಬಿಟ್ಟರೆ ಉಳಿದ ಬ್ಯಾಟರ್‌ಗಳಿಂದ ಅಗತ್ಯ ಆಟ ಮೂಡಿಬರಲಿಲ್ಲ. ರಾಜೇಶ್ವರಿ ಗಾಯಕ್ವಾಡ್ (29ಕ್ಕೆ3) ಹಾಗೂ ಬಿ.ಜಿ.ತೇಜಸ್ವಿನಿ (30ಕ್ಕೆ2) ಪರಿಣಾಮಕಾರಿ ಬೌಲಿಂಗ್ ದಾಳಿ ಮಾಡಿದರು.
ಕರ್ನಾಟಕ: 50 ಓವರ್‌ಗಳಲ್ಲಿ 7 ವಿಕೆಟ್‌ಗೆ 326 (ಶುಭ ಸತೀಶ್ 90, ಶಿಶಿರಾ ಎ. ಗೌಡ 49, ನಿಕಿ ಪ್ರಸಾದ್ 79, ಸೌಮ್ಯ ವರ್ಮಾ 58; ಜ್ಯೋತಿ ಕೆ. ಪ್ರಸಾದ್ 64ಕ್ಕೆ3).
ಒಡಿಶಾ: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 234 (ಮಾಧುರಿ ಮೆಹ್ತಾ 78, ಸರಿತಾ ಮೆಹೆರ್ 56; ರಾಜೇಶ್ವರಿ ಗಾಯಕವಾಡ್ 29ಕ್ಕೆ3, ಬಿ.ಜಿ.ತೇಜಸ್ವಿನಿ 30ಕ್ಕೆ2). ಪಂದ್ಯದ ಆಟಗಾರ್ತಿ: ನಿಕಿ ಪ್ರಸಾದ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.