
ಬೆಂಗಳೂರು: ನಾಯಕಿ ರಚಿತಾ ಹತ್ವಾರ್ ಅವರ ಶತಕದ ಬಲದಿಂದ ಕರ್ನಾಟಕ ತಂಡವು ಬಿಸಿಸಿಐ 19 ವರ್ಷದೊಳಗಿನ ಮಹಿಳೆಯರ ಏಕದಿನ ಟ್ರೋಫಿ ಎಲೀಟ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಶನಿವಾರ 29 ರನ್‌ಗಳಿಂದ ವಿದರ್ಭ ತಂಡವನ್ನು ಮಣಿಸಿತು.
ಹೈದರಾಬಾದ್‌ನ ಎನ್‌ಎಫ್‌ಸಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕರ್ನಾಟಕ ತಂಡಕ್ಕೆ ರಚಿತಾ (156; 154ಎ; 4x21) ಹಾಗೂ ಲಿಯಾಂಕಾ ಶೆಟ್ಟಿ (27; 32ಎ; 4x4) ಉತ್ತಮ ಆರಂಭ ಒದಗಿಸಿದರು. ಈ ಜೋಡಿಯು 10 ಓವರ್‌ಗಳಲ್ಲಿ 65 ರನ್ ಗಳಿಸಿತು. ನಂತರ ಶ್ರೇಯಾ ಎಸ್. ಚವಣ್ (57; 69ಎ; 4x6) ಅವರೊಂದಿಗೆ ಜವಾಬ್ದಾರಿಯುತ ಇನಿಂಗ್ಸ್ ಕಟ್ಟಿದ ರಚಿತಾ ಅವರು ಶತಕ ಗಳಿಸಿ ಸಂಭ್ರಮಿಸಿದರು. ರಚಿತಾ–ಶ್ರೇಯಾ ಜೊತೆಯಾಟದಲ್ಲಿ 148 ರನ್ ಕೂಡಿಬಂತು. ನಂತರ ಬಂದ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಹೀಗಾಗಿ, ರಾಜ್ಯ ತಂಡವು ನಿಗದಿತ ಓವರ್‌ಗಳಲ್ಲಿ 7 ವಿಕೆಟ್‌ಗೆ 284 ರನ್ ಗಳಿಸಿತು.
ಸವಾಲಿನ ಗುರಿ ಬೆನ್ನಟ್ಟಿದ ವಿದರ್ಭ ತಂಡವನ್ನು ವಂದಿತಾ ರಾವ್ (49ಕ್ಕೆ4) ಹಾಗೂ ದೀಕ್ಷಾ ಜೆ. (53ಕ್ಕೆ4) ಅವರು ಪರಿಣಾಮಕಾರಿ ದಾಳಿಯೊಂದಿಗೆ ಕಟ್ಟಿಹಾಕಿದರು. ಶ್ರದ್ಧಾ ಎನ್. (71; 80ಎ; 4x4; 6x1) ಹಾಗೂ ಅಕ್ಷರಾ (72; 74ಎ; 4x7) ಅವರು ಅರ್ಧಶತಕ ಗಳಿಸಿ ಹೋರಾಟ ತೋರಿದರಾದರೂ ಉಳಿದವರಿಂದ ಬೆಂಬಲ ದೊರೆಯಲಿಲ್ಲ. ಅಂತಿಮವಾಗಿ ತಂಡವು 48.1 ಓವರ್‌ಗಳಲ್ಲಿ 255 ರನ್‌ಗಳಿಗೆ ಆಲೌಟ್ ಆಯಿತು.
ಸಂಕ್ಷಿಪ್ತ ಸ್ಕೋರು: ಕರ್ನಾಟಕ: 50 ಓವರ್‌ಗಳಲ್ಲಿ 7 ವಿಕೆಟ್‌ಗೆ 284 (ರಚಿತಾ ಹತ್ವಾರ್ 156, ಶ್ರೇಯಾ ಎಸ್. ಚವಣ್ 57; ಧನಶ್ರೀ ಜಿ. 46ಕ್ಕೆ2); ವಿದರ್ಭ: 48.1 ಓವರ್‌ಗಳಲ್ಲಿ 255 (ಶ್ರದ್ಧಾ ಎನ್. 71, ಅಕ್ಷರಾ 72; ವಂದಿತಾ ರಾವ್ 49ಕ್ಕೆ4, ದೀಕ್ಷಾ ಜೆ. 53ಕ್ಕೆ4).
ಫಲಿತಾಂಶ: ಕರ್ನಾಟಕ ತಂಡಕ್ಕೆ 29 ರನ್‌ಗಳ ಜಯ.