ADVERTISEMENT

ನನ್ನ ಫಾರ್ಮ್‌ ಬಗ್ಗೆ ಚಿಂತೆ ಇಲ್ಲ: ಕರುಣ್ ನಾಯರ್

ಮೈದಾನದಲ್ಲಿ ಜನ್ಮದಿನದ ಕೇಕ್ ಕತ್ತರಿಸಿದ ಕರುಣ್

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2019, 18:27 IST
Last Updated 6 ಡಿಸೆಂಬರ್ 2019, 18:27 IST
ರಣಜಿ ತಂಡದ ನಾಯಕ ಕರುಣ್ ನಾಯರ್ ಅವರಿಗೆ ಸಹ ಆಟಗಾರ ಮಯಂಕ್ ಅಗರವಾಲ್ ಕೇಕ್ ತಿನ್ನಿಸಿ ಶುಭ ಹಾರೈಸಿದರು –ಪ್ರಜಾವಾಣಿ ಚಿತ್ರ
ರಣಜಿ ತಂಡದ ನಾಯಕ ಕರುಣ್ ನಾಯರ್ ಅವರಿಗೆ ಸಹ ಆಟಗಾರ ಮಯಂಕ್ ಅಗರವಾಲ್ ಕೇಕ್ ತಿನ್ನಿಸಿ ಶುಭ ಹಾರೈಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಪ್ರಸ್ತುತ ನನ್ನ ಫಾರ್ಮ್‌ನ ಬಗ್ಗೆ ಚಿಂತೆ ಇಲ್ಲ. ಚೆನ್ನಾಗಿಯೇ ಆಡು ತ್ತಿದ್ದೇನೆ. ಆದರೆ ಕಳೆದ ಎರಡು ಟೂರ್ನಿ ಗಳಲ್ಲಿ ನನಗೆ ಬ್ಯಾಟಿಂಗ್‌ ಮಾಡಲು ಹೆಚ್ಚು ಅವಕಾಶ ಸಿಕ್ಕಿಲ್ಲ. ಆರಂಭಿಕ ಬ್ಯಾಟ್ಸ್‌ಮನ್‌ಗಳು ಚೆನ್ನಾಗಿ ಆಡುತ್ತಿದ್ದಾರೆ. ಅದರಿಂದಾಗಿ ತಂಡವು ಜಯಿಸುತ್ತಿದೆ. ಎಲ್ಲರೂ ಸಂತಸದಿಂದ ಇದ್ದೇವೆ’ ಎಂದು ಕರ್ನಾಟಕ ರಣಜಿ ಕ್ರಿಕೆಟ್ ತಂಡದ ನಾಯಕ, ‘ಬರ್ತಡೆ ಬಾಯ್’ ಕರುಣ್ ನಾಯರ್ ಹೇಳಿದರು.

ಆರ್‌.ಎಸ್‌.ಐ ಮೈದಾನದಲ್ಲಿ ಅಭ್ಯಾಸ ಪಂದ್ಯ ಆಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕರುಣ್, ‘ನಿಗದಿತ ಓವರ್‌ಗಳ ಟೂರ್ನಿಗಳಲ್ಲಿಯೂ ಹೆಚ್ಚು ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿಲ್ಲ. ಇದೀಗ ರಣಜಿ ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಸಿಕ್ಕರೆ ಕ್ರೀಸ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತೇನೆ. ದುಲೀಪ್ ಟ್ರೋಫಿ ಮತ್ತು ತಿಮ್ಮಪ್ಪಯ್ಯ ಟೂರ್ನಿಗಳಲ್ಲಿ ಉತ್ತಮವಾಗಿಯೇ ಆಡಿದ್ದೆ. ನನ್ನ ಬ್ಯಾಟಿಂಗ್‌ ಬಗ್ಗೆ ನನಗೆ ತೃಪ್ತಿ ಇದೆ’ ಎಂದರು.

28 ವಸಂತಗಳನ್ನು ಪೂರೈಸಿದ ಕರುಣ್, ‘ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ತ್ರಿಶತಕ ಗಳಿಸಿ ಮೂರು ವರ್ಷಗಳಾಗಿವೆ. ಅದು ಅವಿಸ್ಮರಣೀಯ. ಆದರೆ ಅದರ ಒತ್ತಡವೇನಿಲ್ಲ. ಜನರು ನೆನಪು ಮಾಡಿ ದಾಗಲಷ್ಟೇ ಅದರ ಬಗ್ಗೆ ಪುಳಕಿತನಾಗು ತ್ತೇನೆ. ಮತ್ತೇನೂ ವಿಶೇಷವಿಲ್ಲ’ ಎಂದರು.

ADVERTISEMENT

‘ತಂಡದಲ್ಲಿ ಪ್ರಸಿದ್ಧ ಕೃಷ್ಣ ಮತ್ತು ಅಭಿಮನ್ಯು ಮಿಥುನ್ ಅವರು ಲಭ್ಯರಿಲ್ಲ. ಅವರ ಬದಲಿಗೆ ಸ್ಥಾನ ಪಡೆದಿರುವ ಯುವ ಆಟಗಾರರೂ ಪ್ರತಿಭಾನ್ವಿತರಾಗಿದ್ದಾರೆ. ಉತ್ತಮವಾಗಿ ಆಡುತ್ತಾರೆ. ತಂಡದಲ್ಲಿ ಆರೋಗ್ಯಕರ ಪೈಪೋಟಿ ಇರುವುದರಿಂದ ತಮ್ಮ ಸ್ಥಾನಗಳನ್ನು ಗಟ್ಟಿಗೊಳಿಸಿಕೊಳ್ಳಲು ಎಲ್ಲರೂ ಚೆನ್ನಾಗಿ ಆಡಲೇಬೇಕು. ರೋನಿತ್ ಮೋರೆ ಉತ್ತಮ ಬೌಲರ್‌. ಅವರಿಗೆ ತಕ್ಕಮಟ್ಟಿಗೆ ಅನುಭವವೂ ಇದೆ. ಕೌಶಿಕ್, ಡೇವಿಡ್ ಮಥಾಯಿಸ್ ಮತ್ತು ಹೊಸ ಹುಡುಗ ದೇವಯ್ಯ ಅವರೂ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸುವ ವಿಶ್ವಾಸವಿದೆ. ಅವಕಾಶ ಕೊಟ್ಟಾಗ ಮಾತ್ರ ಯುವ ಆಟ ಗಾರರ ಸಾಮರ್ಥ್ಯ ಬೆಳಕಿಗೆ ಬರುತ್ತದೆ. ತಮಿಳುನಾಡು ತಂಡವು ಬಲಿಷ್ಠವಾಗಿದೆ ನಿಜ. ಆದರೆ ದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ಯಾವ ತಂಡವನ್ನೂ ಹಗುರವಾಗಿ ಪರಿಗಣಿಸುವಂತಿಲ್ಲ. ’ ಎಂದು ಕರುಣ್ ಹೇಳಿದರು.

ಕರ್ನಾಟಕ ತಂಡವು ಶನಿವಾರ ಮಧುರೈಗೆ ತೆರಳಲಿದೆ. ಸೋಮವಾರ ದಿಂದ ದಿಂಡಿಗಲ್‌ನಲ್ಲಿ ತಮಿಳುನಾಡು ವಿರುದ್ಧ ಪಂದ್ಯ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.