ADVERTISEMENT

ಕರ್ನಾಟಕಕ್ಕೆ ವಿಜಯ್ ಹಜಾರೆ ಟ್ರೋಫಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2025, 16:35 IST
Last Updated 18 ಜನವರಿ 2025, 16:35 IST
<div class="paragraphs"><p>ವಿಜಯ್‌ ಹಜಾರೆ ಟ್ರೋಫಿ ಗೆದ್ದ ಕರ್ನಾಟಕ ತಂಡದ ಆಟಗಾರರ ಸಂಭ್ರಮ</p></div>

ವಿಜಯ್‌ ಹಜಾರೆ ಟ್ರೋಫಿ ಗೆದ್ದ ಕರ್ನಾಟಕ ತಂಡದ ಆಟಗಾರರ ಸಂಭ್ರಮ

   

ಬಿಸಿಸಿಐ ಡೊಮೆಸ್ಟಿಕ್‌ ಎಕ್ಸ್‌ ಚಿತ್ರ

ಸ್ಮರಣ್ ಶತಕ ಅವಿಸ್ಮರಣೀಯ; ಕರುಣ್ ಕಟ್ಟಿಹಾಕಿದ ಪ್ರಸಿದ್ಧ; ಕರ್ನಾಟಕಕ್ಕೆ ಐದನೇ ಟ್ರೋಫಿ

ವಡೋದರಾ: ಕರ್ನಾಟಕ ತಂಡವು ದೇಶಿ ಏಕದಿನ ಕ್ರಿಕೆಟ್‌ನ ಸಾರ್ವಭೌಮರನ್ನು ನಿರ್ಧರಿಸುವ ವಿಜಯ್ ಹಜಾರೆ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಶನಿವಾರ ಕೋತಂಬಿ ಕ್ರೀಡಾಂಗಣದಲ್ಲಿ ನಡೆದ ರೋಚಕ ಫೈನಲ್‌ ಹಣಾಹಣಿಯಲ್ಲಿ ಮಯಂಕ್ ಅಗರವಾಲ್ ನಾಯಕತ್ವದ ಕರ್ನಾಟಕ ತಂಡ 36 ರನ್‌ಗಳಿಂದ ವಿದರ್ಭ ತಂಡದ ಮೇಲೆ ಜಯಭೇರಿ ಬಾರಿಸಿತು.

ADVERTISEMENT

ರಾಜ್ಯ ತಂಡಕ್ಕೆ ಒಲಿದ ಐದನೇ ಟ್ರೋಫಿ ಇದಾಗಿದೆ. ಇಡೀ ಟೂರ್ನಿಯಲ್ಲಿ ಕರ್ನಾಟಕ ಬಳಗವು ತೋರಿದ ತಂಡ ಸ್ಫೂರ್ತಿ ಈ ಪಂದ್ಯದಲ್ಲಿ ಗಾಢವಾಗಿ ಗೋಚರಿಸಿತು. ಅದರಿಂದಾಗಿಯೇ ಕನ್ನಡಿಗ ಕರುಣ್ ನಾಯರ್ ನಾಯಕತ್ವದ ವಿದರ್ಭ ತಂಡವನ್ನು ಸೋಲಿಸಲು ಕರ್ನಾಟಕ ತಂಡಕ್ಕೆ ಸಾಧ್ಯವಾಯಿತು. 

ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ನಿರಾಶಾದಾಯಕವಾಗಿ ಆಡಿದ್ದ ಮಯಂಕ್ ಬಳಗವು ಇಲ್ಲಿ ಪುಟಿದೆದ್ದ ರೀತಿ ಅನನ್ಯವಾದದ್ದು. ಟಾಸ್ ಗೆದ್ದ ವಿದರ್ಭ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮಧ್ಯಮ ಕ್ರಮಾಂಕದ ಉದಯೋನ್ಮುಖ ಪ್ರತಿಭೆಗಳಾದ ರವಿಚಂದ್ರನ್‌ ಸ್ಮರಣ್ (101; 92ಎ), ಕೆ.ಎಲ್. ಶ್ರೀಜಿತ್ (78; 74ಎ) ಮತ್ತು ಅಭಿನವ್ ಮನೋಹರ್ (79; 42ಎ) ಅವರ ಅಮೋಘ ಬ್ಯಾಟಿಂಗ್ ಬಲದಿಂದ ಕರ್ನಾಟಕ 50 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 349 ರನ್ ಗಳಿಸಿತು. ವಿದರ್ಭ ತಂಡ ಕೊನೆಯಲ್ಲಿ ಹೋರಾಟ ತೋರಿದರೂ 48.2 ಓವರ್‌ಗಳಲ್ಲಿ 312 ರನ್ ಗಳಿಸಿ ಸವಾಲು ಮುಗಿಸಿತು.

ಆದರೆ ಟೂರ್ನಿಯಲ್ಲಿ ಐದು ಶತಕಗಳ ಸಹಿತ 752 ರನ್‌ ಗಳಿಸಿರುವ ಕರುಣ್ ನಾಯರ್, ಕಳೆದೆರಡೂ ಪಂದ್ಯಗಳಲ್ಲಿ ಶತಕ ಗಳಿಸಿದ್ದ ಧ್ರುವ ಶೋರೆ ಮತ್ತು ಸೆಮಿಫೈನಲ್‌ನಲ್ಲಿ ಶತಕ ಹೊಡೆದಿದ್ದ ಯಶ್ ರಾಥೋಡ್ ಅವರ ಅಮೋಘ ಲಯದ ಮುಂದೆ ಈ ಮೊತ್ತ ಅಸಾಧ್ಯವಲ್ಲ ಎಂಬ ಭಾವನೆಯು ಅಭಿಮಾನಿಗಳ ಮನದಲ್ಲಿ ಮೂಡಿತ್ತು. ಇದರಲ್ಲಿ ಧ್ರುವ ಶೋರೆ (110 ರನ್) ಅವರೊಬ್ಬರೇ ಶತಕ ಗಳಿಸುವಲ್ಲಿ ಯಶಸ್ವಿಯಾದರು.  

ಯಶ್ ಅವರನ್ನು ಎಡಗೈ ವೇಗಿ ಅಭಿಲಾಷ್ ಶೆಟ್ಟಿ ಕಟ್ಟಿಹಾಕಿದರೆ, ಪ್ರಸಿದ್ಧಕೃಷ್ಣ ತಮ್ಮ ಗೆಳೆಯ ಕರುಣ್ ಅವರ ವಿಕೆಟ್ ಕಿತ್ತರು. ನಂತರದ ಆಟದಲ್ಲಿ ಬಹುತೇಕ ಕರ್ನಾಟಕ ಪ್ರಾಬಲ್ಯ ಮೆರೆದಂತೆ ಕಂಡಿತು. ಆದರೆ ಎಂಟನೇ ಕ್ರಮಾಂಕದ ಬ್ಯಾಟರ್ ಹರ್ಷ ದುಬೆ 30 ಎಸೆತಗಳಲ್ಲಿ 63 ರನ್‌ ಸಿಡಿಸುವ ಮೂಲಕ ವಿದರ್ಭ ತಂಡದಲ್ಲಿ ಗೆಲುವಿನ ಆಸೆ ಚಿಗುರಿಸಿದರು.  

ಅವರ ಬೀಸಾಟ ಒಂದೆಡೆಯಾದರೆ, ಇನ್ನೊಂದೆಡೆ ಬೇರೆ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ನಿಲ್ಲದಂತೆ ಬೌಲರ್‌ಗಳು ನೋಡಿಕೊಂಡರು. ಅದರಲ್ಲೂ ವಾಸುಕಿ ಕೌಶಿಕ್ (47ಕ್ಕೆ3) ಚಾಣಾಕ್ಷ ಬೌಲಿಂಗ್ ಪ್ರದರ್ಶಿಸಿದರು. ಜಿತೇಶ್ ಶರ್ಮಾ, ಅಪೂರ್ವ ವಾಂಖೆಡೆ ಮತ್ತು ನಚಿಕೇತ್ ಭೂತೆ ಅವರ ವಿಕೆಟ್‌ಗಳನ್ನು ಗಳಿಸಿದರು. ಎಡಗೈ ವೇಗಿ ಅಭಿಲಾಷ್ ಶೆಟ್ಟಿ ಮತ್ತು ಪ್ರಸಿದ್ಧ ಕೂಡ ತಲಾ ಮೂರು ವಿಕೆಟ್ ಗಳಿಸಿದರು. ಅಭಿಲಾಷ್‌ ಹಾಕಿದ 49ನೇ ಓವರ್‌ನಲ್ಲಿ ದುಬೆಯ ಕ್ಯಾಚ್ ಪಡೆದ ಮಯಂಕ್ ಅಗರವಾಲ್ ಅವರ ಹರ್ಷ ಮುಗಿಲುಮುಟ್ಟಿತು. 

ಸಂಕ್ಷಿಪ್ತ ಸ್ಕೋರ್‌:

ಕರ್ನಾಟಕ: 50 ಓವರ್‌ಗಳಲ್ಲಿ 6ಕ್ಕೆ 348 (ಮಯಂಕ್‌ ಅಗರವಾಲ್‌ 32, ಅನೀಶ್‌ ಕೆ.ವಿ 23, ಆರ್‌.ಸ್ಮರಣ್‌ 101, ಕೃಷ್ಣನ್‌ ಶ್ರೀಜಿತ್‌ 78, ಅಭಿನವ್‌ ಮನೋಹರ್‌ 79; ದರ್ಶನ್ ನಲ್ಕಂಡೆ 67ಕ್ಕೆ 2, ನಚಿಕೇತ್‌ ಭೂತೆ 70ಕ್ಕೆ2).

ವಿದರ್ಭ: 48.3 ಓವರ್‌ಗಳಲ್ಲಿ 312 (ಧ್ರುವ್‌ ಶೋರೆ 110, ಯಶ್‌ ರಾಥೋಡ್ 22, ಕರುಣ್‌ ನಾಯರ್‌ 27, ಜಿತೇಶ್‌ ಶರ್ಮಾ 34, ಹರ್ಷ ದುಬೆ 68; ವಾಸುಕಿ ಕೌಶಿಕ್‌ 47ಕ್ಕೆ 3, ಪ್ರಸಿದ್ಧ ಕೃಷ್ಣ 84ಕ್ಕೆ3, ಅಭಿಲಾಷ್‌ ಶೆಟ್ಟಿ 58ಕ್ಕೆ 3).

ಫಲಿತಾಂಶ: ಕರ್ನಾಟಕಕ್ಕೆ 36 ರನ್‌ಗಳ ಜಯ.

ಪಂದ್ಯದ ಆಟಗಾರ: ಆರ್‌.ಸ್ಮರಣ್‌,

ಸರಣಿಯ ಆಟಗಾರ: ಕರುಣ್‌ ನಾಯರ್‌
(ಮಾಹಿತಿ : ಬಿಸಿಸಿಐ ಡಾಟ್ ಟಿವಿ ಮತ್ತಿತರ ವೆಬ್‌ಸೈಟ್‌ಗಳು)


 (ಮಾಹಿತಿ : ಬಿಸಿಸಿಐ ಡಾಟ್ ಟಿವಿ ಮತ್ತಿತರ ವೆಬ್‌ಸೈಟ್‌ಗಳು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.