ಬೆಂಗಳೂರು: ಸೌರಾಷ್ಟ್ರ ವಿರುದ್ಧ ಇದೇ 15 ರಿಂದ 18ರವರೆಗೆ ರಾಜಕೋಟ್‌ನಲ್ಲಿ ರಣಜಿ ಟ್ರೋಫಿ ಪಂದ್ಯ ಆಡಲಿರುವ ಕರ್ನಾಟಕ ತಂಡವನ್ನು ಬುಧವಾರ ಪ್ರಕಟಿಸಲಾಗಿದ್ದು, ಮಯಂಕ್ ಅಗರವಾಲ್ ಅವರು ನಾಯಕರಾಗಿ ಮುಂದುವರಿದಿದ್ದಾರೆ.
ಕಳೆದ ಎರಡು ಋತುವಿನಲ್ಲಿ ವಿದರ್ಭ ತಂಡಕ್ಕೆ ಆಡಿದ್ದ ಕರುಣ್ ನಾಯರ್ ಅವರು ರಾಜ್ಯ ತಂಡದಲ್ಲಿ ನಿರೀಕ್ಷೆಯಂತೆ ಸ್ಥಾನ ಪಡೆದಿದ್ದಾರೆ. 33 ವರ್ಷದ ಕರುಣ್ ಅವರು ಕಳೆದ ಋತುವಿನಲ್ಲಿ ವಿದರ್ಭ ತಂಡ ರಣಜಿ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಳೆದ ಆವೃತ್ತಿಯಲ್ಲಿ 53.93 ಸರಾಸರಿಯಲ್ಲಿ 863 ರನ್ ಗಳಿಸಿದ್ದರು.
20 ವರ್ಷ ವಯಸ್ಸಿನ ಎಡಗೈ ಸ್ಪಿನ್ನರ್ ಶಿಖರ್ ಶೆಟ್ಟಿ 15 ಆಟಗಾರರ ತಂಡಕ್ಕೆ ಆಯ್ಕೆಯಾಗಿರುವ ಏಕೈಕ ಹೊಸಮುಖ. ಅವರು ಕ್ಯಾಪ್ಟನ್ ತಿಮ್ಮಪ್ಪಯ್ಯ ಸ್ಮಾರಕ ಟ್ರೋಫಿ ಟೂರ್ನಿಯಲ್ಲಿ ಕೆಎಸ್‌ಸಿಎ ಕಾರ್ಯದರ್ಶಿ ಇಲೆವೆನ್ ತಂಡದಲ್ಲಿ ಮಿಂಚಿದ್ದರು. ಕಳೆದ ಋತುವಿನಲ್ಲಿ ಪದಾರ್ಪಣೆ ಮಾಡಿದ್ದ ಹಾರ್ದಿಕ್ ರಾಜ್ ಅವರಿಗೆ ಈ ಬಾರಿ ಅವಕಾಶ ದೊರೆತಿಲ್ಲ.
ದುಲೀಪ್ ಟ್ರೋಫಿ ಫೈನಲ್‌ನಲ್ಲಿ ದಕ್ಷಿಣ ವಲಯ ತಂಡದಲ್ಲಿ ದೇವದತ್ತ ಪಡಿಕ್ಕಲ್ ಬದಲಿಗೆ ಸ್ಥಾನ ಪಡೆದಿದ್ದ ಆರ್.ಸ್ಮರಣ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಯುವ ಪ್ರತಿಭೆಗಳಾದ ಕೆ.ವಿ.ಅನೀಶ್, ಅಭಿಲಾಷ್ ಶೆಟ್ಟಿ ಮತ್ತು ವಿಕೆಟ್ ಕೀಪರ್- ಬ್ಯಾಟರ್ ಕೆ.ಎಲ್. ಶ್ರೀಜಿತ್ ಅವರೂ ತಂಡದಲ್ಲಿದ್ದಾರೆ.
ಎಂಟು ಬಾರಿಯ ಚಾಂಪಿಯನ್ ಕರ್ನಾಟಕ ತಂಡಕ್ಕೆ ದಶಕದಿಂದ ರಣಜಿ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಮಯಂಕ್ ನಾಯಕತ್ವದ ತಂಡವು ಈ ಬಾರಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದೆ.
ತಂಡ ಹೀಗಿದೆ: ಮಯಂಕ್ ಅಗರವಾಲ್ (ನಾಯಕ), ಕರುಣ್ ನಾಯರ್, ಸ್ಮರಣ್ ಆರ್, ಶ್ರೀಜಿತ್ ಕೆ.ಎಲ್. (ವಿಕೆಟ್ ಕೀಪರ್), ಶ್ರೇಯಸ್ ಗೋಪಾಲ್, ವೈಶಾಖ್ ವಿಜಯಕುಮಾರ್, ವಿದ್ವತ್ ಕಾವೇರಪ್ಪ, ಅಭಿಲಾಷ್ ಶೆಟ್ಟಿ, ವೆಂಕಟೇಶ್ ಎಂ., ಎಸ್.ಜೆ.ನಿಕಿನ್ ಜೋಸ್, ಅಭಿನವ್ ಮನೋಹರ್, ಕೃತಿಕ್ ಕೃಷ್ಣ (ವಿಕೆಟ್ ಕೀಪರ್), ಅನೀಶ್ ಕೆ.ವಿ., ಮೊಹ್ಸಿನ್ ಖಾನ್, ಶಿಖರ್ ಶೆಟ್ಟಿ.
ಕೋಚ್: ಯರೇಗೌಡ ಕೆ., ಬೌಲಿಂಗ್ ಕೋಚ್: ಮನ್ಸೂರ್ ಅಲಿ ಖಾನ್, ಫೀಲ್ಡಿಂಗ್ ಕೋಚ್: ಶಬರೀಶ್ ಮೋಹನ್, ಮ್ಯಾನೇಜರ್: ರಮೇಶ್ ರಾವ್.
ನಾಗ್ಪುರ (ಪಿಟಿಐ): ಹಾಲಿ ಚಾಂಪಿಯನ್ ವಿದರ್ಭ ತಂಡವು ರಣಜಿ ಟ್ರೋಫಿ ಟೂರ್ನಿಯ ನಾಗಾಲ್ಯಾಂಡ್ ವಿರುದ್ಧದ ಪಂದ್ಯಕ್ಕೆ 17 ಆಟಗಾರರ ತಂಡವನ್ನು ಸೋಮವಾರ ಪ್ರಕಟಿಸಿದ್ದು ಕರ್ನಾಟಕದ ರವಿಕುಮಾರ್ ಸಮರ್ಥ್ ಸ್ಥಾನ ಪಡೆದಿದ್ದಾರೆ.
ಇದೇ 15ರಿಂದ ಬೆಂಗಳೂರಿನ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ವಿದರ್ಭ ತಂಡವು ರಣಜಿ ಟ್ರೋಫಿ ಅಭಿಯಾನವನ್ನು ಆರಂಭಿಸಲಿದೆ. ತಂಡವನ್ನು ಅಕ್ಷಯ್ ವಾಡ್ಕರ್ ಮುನ್ನಡೆಸಲಿದ್ದಾರೆ. ಕಳೆದ ಆವೃತ್ತಿಯ ಫೈನಲ್‌ನಲ್ಲಿ ವಿದರ್ಭ ತಂಡವು ಕೇರಳ ತಂಡವನ್ನು ಮಣಿಸಿ ಪ್ರಶಸ್ತಿ ಗೆದ್ದಿತ್ತು.
ಅನುಭವಿ ಕರುಣ್ ನಾಯರ್ ಅವರ ಬದಲಿಗೆ ಕರ್ನಾಟಕದ ಮತ್ತೊಬ್ಬ ಬ್ಯಾಟರ್ ಸಮರ್ಥ್ ಅವರನ್ನು ಆಯ್ಕೆ ಮಾಡಲಾಗಿದೆ. ಉಸ್ಮಾನ್ ಘನಿ ತಂಡಕ್ಕೆ ಕೋಚ್ ಆಗಿ ಮುಂದುವರಿಯಲಿದ್ದು ಧರ್ಮೇಂದರ್ ಅಹ್ಲಾವತ್ ಸಹಾಯಕ ಕೋಚ್ ಆಗಿ ನೇಮಕಗೊಂಡಿದ್ದಾರೆ.
ತಂಡ ಹೀಗಿದೆ: ಅಕ್ಷರ್ ವಾಡ್ಕರ್ (ನಾಯಕ ವಿಕೆಟ್ ಕೀಪರ್) ಅಥರ್ವ ತೈಡೆ ಅಮನ್ ಮೊಖಡೆ ಡ್ಯಾನಿಶ್ ಮಾಲೆವಾರ್ ಯಶ್ ರಾಥೋಡ್ (ವಿಕೆಟ್ ಕೀಪರ್) ಹರ್ಷ್ ದುಬೆ ಪಾರ್ಥ್ ರೇಖಾಡೆ ಯಶ್ ಠಾಕೂರ್ ನಚಿಕೇತ್ ಭೂತೆ ದರ್ಶನ್ ನಲ್ಕಂಡೆ ಆದಿತ್ಯ ಠಾಕ್ರೆ ಯಶ್ ಕದಂ ಶಿವಂ ದೇಶಮುಖ್ (ವಿಕೆಟ್ ಕೀಪರ್) ಪ್ರಫುಲ್ ಹಿಂಗೆ ಅಕ್ಷಯ್ ಕರ್ನೇವರ್ ಧ್ರುವ ಶೋರೆ ಆರ್. ಸಮರ್ಥ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.