
ಅಹಮದಾಬಾದ್: ಹಾಲಿ ಚಾಂಪಿಯನ್ ಕರ್ನಾಟಕ ತಂಡವು ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಎ ಗುಂಪಿನಲ್ಲಿ ಕಣಕ್ಕಿಳಿಯಲಿದೆ.
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬುಧವಾರ ನಡೆಯಲಿರುವ ಪಂದ್ಯದಲ್ಲಿ ಮಯಂಕ್ ಅಗರವಾಲ್ ಬಳಗವು ಇಶಾನ್ ಕಿಶನ್ ನಾಯಕತ್ವದ ಜಾರ್ಖಂಡ್ ತಂಡವನ್ನು ಎದುರಿಸಲಿದೆ.
ಈಚೆಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಜಾರ್ಖಂಡ್ ಚಾಂಪಿಯನ್ ಆಗಿತ್ತು. ಆದರೆ ಕರ್ನಾಟಕ ತಂಡವು ನಿರಾಶಾದಾಯಕ ಪ್ರದರ್ಶನ ನೀಡಿತ್ತು. ಏಕದಿನ ಮಾದರಿಯಲ್ಲಿ ಪುಟಿದೇಳುವ ಹುಮ್ಮಸ್ಸಿನಲ್ಲಿದೆ.
ಟೂರ್ನಿಯ ಮೂರು ಮತ್ತು ನಾಲ್ಕನೇ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಅವರು ಆಡುವ ನಿರೀಕ್ಷೆ ಇದೆ. ಮೊದಲೆರಡು ಪಂದ್ಯಗಳಲ್ಲಿ ಅನುಭವಿ ದೇವದತ್ತ ಪಡಿಕ್ಕಲ್, ಕರುಣ್ ನಾಯರ್, ಯುವ ಆಟಗಾರ ಸ್ಮರಣ್ ರವಿಚಂದ್ರನ್, ಅಭಿನವ್ ಮನೋಹರ್ ಅವರ ಆಟದ ಮೇಲೆಯೇ ಬ್ಯಾಟಿಂಗ್ ವಿಭಾಗವು ಅವಲಂಬಿತವಾಗಿದೆ. ಬೌಲಿಂಗ್ ಹೊಣೆಯು ವೈಶಾಖ ವಿಜಯಕುಮಾರ್, ಅಭಿಲಾಷ್ ಶೆಟ್ಟಿ ಅವರ ಮೇಲೆ ಇದೆ. ಸ್ಪಿನ್ ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಅವರು ಉತ್ತಮ ಲಯದಲ್ಲಿದ್ದಾರೆ. ಯುವ ಆಟಗಾರರಾದ ಎಲ್. ಮನ್ವಂತ್ ಕುಮಾರ್, ಶ್ರೀಶಾ ಆಚಾರ್ ಅವರಿಗೂ ಕಣಕ್ಕಿಳಿಯುವ ಅವಕಾಶ ಸಿಗಬಹುದು.
ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡುವ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಇಶಾನ್ ಕಿಶನ್ ಅಪಾರ ಆತ್ಮವಿಶ್ವಾಸದಲ್ಲಿದ್ದಾರೆ. ಬ್ಯಾಟಿಂಗ್‌ನಲ್ಲಿಯೂ ಉತ್ತಮ ಫಾರ್ಮ್‌ನಲ್ಲಿರುವ ಅವರ ತಂಡದಲ್ಲಿ ಪ್ರತಿಭಾನ್ವಿತ ಆಟಗಾರರಿದ್ದಾರೆ. ಕರ್ನಾಟಕ ತಂಡಕ್ಕೆ ಕಠಿಣ ಸವಾಲೊಡ್ಡಲು ಸಿದ್ಧರಾಗಿದ್ದಾರೆ.
ಪಂದ್ಯ ಆರಂಭ: ಬೆಳಿಗ್ಗೆ 9ರಿಂದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.