ADVERTISEMENT

ಕ್ರಿಕೆಟ್‌ ಟೂರ್ನಿ: ಕ್ವಾರ್ಟರ್‌ಫೈನಲ್‌ಗೆ ರಾಜ್ಯ ವನಿತೆಯರು

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 20:52 IST
Last Updated 18 ಫೆಬ್ರುವರಿ 2026, 20:52 IST
   

ಬೆಂಗಳೂರು: ಶುಭಾ ಸತೀಶ್ ನಾಯಕತ್ವದ ಕರ್ನಾಟಕ ತಂಡವು ಬಿಸಿಸಿಐ ಸೀನಿಯರ್‌ ಮಹಳಾ ಏಕದಿನ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಬುಧವಾರ 46 ರನ್‌ಗಳಿಂದ ಪುದುಚ್ಚೆರಿ ತಂಡಕ್ಕೆ ಮಣಿಯಿತು. ಆದರೂ, ಎ ಗುಂಪಿನಿಂದ ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಮುಂಬೈ ಎದುರು ಸೋಮವಾರ ಸೋತಿದ್ದ ಶುಭಾ ಪಡೆಯು ಗುಂಪು ಹಂತದ ತನ್ನ ಕೊನೆಯ ಪಂದ್ಯದಲ್ಲಿ ಗೆಲುವಿನ ಹಳಿಗೆ ಮರಳುವ ವಿಶ್ವಾಸದಲ್ಲಿತ್ತು. ಆದರೆ, ಆಲ್‌ರೌಂಡ್‌ ಪ್ರದರ್ಶನ ತೋರಿದ ಪುದುಚ್ಚೆರಿ ತಂಡವು ಗೆಲುವಿನೊಂದಿಗೆ ಅಭಿಯಾನ ಮುಗಿಸಿತು. ಎ ಗುಂಪಿನಲ್ಲಿ ಕರ್ನಾಟಕ ಹಾಗೂ ಉತ್ತರ ಪ್ರದೇಶ ತಂಡಗಳು ತಲಾ 20 ಅಂಕ ಹೊಂದಿದ್ದರೂ, ನೆಟ್‌ ರನ್‌ರೇಟ್‌ ಆಧಾರದಲ್ಲಿ ಶುಭಾ ಪಡೆ ಎಂಟರ ಘಟ್ಟ ಪ್ರವೇಶಿಸಿತು.

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪುದುಚ್ಚೆರಿ ತಂಡಕ್ಕೆ ಆರಂಭ ಆಟಗಾರ್ತಿ ಯುವಶ್ರೀ (85; 96ಎ) ಹಾಗೂ ಮೂರನೇ ಕ್ರಮಾಂಕದ ಆಟಗಾರ್ತಿ ದಿವ್ಯಾ ಜ್ಞಾನಾನಂದ (65; 87ಎ) ಆಸರೆಯಾದರು. ಇವರಿಬ್ಬರ ಅರ್ಧಶತಕಗಳ ಬಲದಿಂದ ಪುದುಚ್ಚೆರಿ ತಂಡವು 50 ಓವರ್‌ಗಳಲ್ಲಿ 6 ವಿಕೆಟ್‌ಗೆ 253 ರನ್‌ ಪೇರಿಸಿತು.

ADVERTISEMENT

ಸವಾಲಿನ ಗುರಿ ಬೆನ್ನಟ್ಟಿದ ರಾಜ್ಯ ತಂಡವು ನಿಯಮಿತವಾಗಿ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿಕೊಂಡಿತು. ಕೊನೆಯಲ್ಲಿ ಶ್ರೇಯಾ ಎಸ್‌. ಚವನ್‌ (ಔಟಾಗದೇ 54) ಹೋರಾಟ ತೋರಿದರಾದರೂ, ಅವರಿಗೆ ಉತ್ತಮ ಜೊತೆ ಸಿಗಲಿಲ್ಲ. ಅಂತಿಮವಾಗಿ ಕರ್ನಾಟಕ ತಂಡವು 47.2 ಓವರ್‌ಗಳಲ್ಲಿ 207 ರನ್‌ ಗಳಿಸಿ ಹೋರಾಟ ಮುಗಿಸಿತು.

ಶುಭಾ ಪಡೆಯು ಮೊಹಾಲಿಯಲ್ಲಿ ಇದೇ 23ರಂದು ನಡೆಯಲಿರುವ ಕ್ವಾರ್ಟರ್‌ ಫೈನಲ್‌ನಲ್ಲಿ ಸಿ ಗುಂಪಿನ ಅಗ್ರಸ್ಥಾನಿ ರೈಲ್ವೇಸ್‌ ಜೊತೆಗೆ ಸೆಣಸಲಿದೆ.

ಸಂಕ್ಷಿಪ್ತ ಸ್ಕೋರು: ಪುದುಚ್ಚೆರಿ: 50 ಓವರ್‌ಗಳಲ್ಲಿ 6 ವಿಕೆಟ್‌ಗೆ 253 (ಯುವಶ್ರೀ 85, ದಿವ್ಯಾ ಜ್ಞಾನಾನಂದ 65, ಮೋನಿಕಾ ಸಿ. ಪಟೇಲ್‌ 42ಕ್ಕೆ2). ಕರ್ನಾಟಕ: 47.2 ಓವರ್‌ಗಳಲ್ಲಿ 207 (ಸೌಮ್ಯಾ ವರ್ಮಾ 39, ಶ್ರೇಯಾ ಎಸ್‌. ಚವನ್‌ ಔಟಾಗದೇ 54; ಎಂ.ರೇವತಿ 36ಕ್ಕೆ2).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.