ಕರುಣ್ ನಾಯರ್
(ಪಿಟಿಐ ಚಿತ್ರ)
ಜೈಪುರ: 'ಈ ಕರೆಗಾಗಿ ಕಾತರದಿಂದ ಕಾಯುತ್ತಿದ್ದೆ' ಎಂದು ಎಂಟು ವರ್ಷಗಳ ಬಳಿಕ ಭಾರತ ಟೆಸ್ಟ್ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವ ಕನ್ನಡಿಗ ಕರುಣ್ ನಾಯರ್ ಹರ್ಷ ವ್ಯಕ್ತಪಡಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪ್ರವಾಸಿ ಭಾರತ ತಂಡದಲ್ಲಿ ಕರುಣ್ ನಾಯರ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇದರೊಂದಿಗೆ ದೇಶೀಯ ಕ್ರಿಕೆಟ್‌ನಲ್ಲಿ ಕರುಣ್ ನೀಡಿರುವ ಅಮೋಘ ನಿರ್ವಹಣೆಗೆ ಮನ್ನಣೆ ದೊರಕಿದಂತಾಗಿದೆ.
'ಭಾರತೀಯ ಕ್ರಿಕೆಟ್ ತಂಡದಲ್ಲಿ ಮಗದೊಮ್ಮೆ ಅವಕಾಶ ಸಿಕ್ಕಿರುವುದಕ್ಕೆ ಹಮ್ಮೆಯಿದೆ' ಎಂದು ಕರುಣ್ ಪ್ರತಿಕ್ರಿಯಿಸಿದ್ದಾರೆ.
33 ವರ್ಷದ ಕರುಣ್ ಕೊನೆಯದಾಗಿ 2017ರಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದರು. ವೀರೇಂದ್ರ ಸೆಹ್ವಾಗ್ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಗಳಿಸಿದ ಭಾರತದ ಎರಡನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಕರುಣ್ ನಾಯರ್ ಭಾಜನರಾಗಿದ್ದರು.
'ತುಂಬಾನೇ ಖುಷಿಯಾಗಿದ್ದೇನೆ. ಕಳೆದ 12-16 ತಿಂಗಳುಗಳಿಂದ ಉತ್ತಮವಾಗಿ ಆಡುತ್ತಿದ್ದೇನೆ. ಇತರೆ ವಿಷಯಗಳತ್ತ ಗಮನ ಕೊಡದೆ ಉತ್ತಮ ಪ್ರದರ್ಶನ ಮುಂದುವರಿಸುವುದರತ್ತ ಗಮನ ಕೇಂದ್ರಿಕರಿಸಿದ್ದೆ. ಇದು ನನ್ನ ಪಾಲಿಗೆ ಉತ್ತಮವಾಗಿ ಪರಿಣಮಿಸಿದೆ ಎಂದು ಹೇಳಿದ್ದಾರೆ.
2024-25ರ ಸಾಲಿನಲ್ಲಿ ವಿದರ್ಭ ರಣಜಿ ಟ್ರೋಫಿ ಗೆಲ್ಲುವಲ್ಲಿ ಕರುಣ್ ಮಹತ್ವದ ಪಾತ್ರ ವಹಿಸಿದ್ದರು. ಒಂಬತ್ತು ಪಂದ್ಯಗಳಲ್ಲಿ ನಾಲ್ಕು ಶತಕ ಸೇರಿದಂತೆ 863 ರನ್ ಗಳಿಸಿದ್ದರು. ಇನ್ನು ವಿಜಯ್ ಹಜಾರೆ ಟ್ರೋಫಿಯಲ್ಲಿ ಎಂಟು ಪಂದ್ಯಗಳಲ್ಲಿ ಐದು ಶತಕ ಸೇರಿದಂತೆ 779 ರನ್ ಪೇರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.