ADVERTISEMENT

ರಣಜಿ ಟ್ರೋಫಿ ಫೈನಲ್: ಕರುಣ್ ನಾಯರ್ ಅಜೇಯ ಶತಕ; ಕೇರಳ ವಿರುದ್ಧ ವಿದರ್ಭ ಹಿಡಿತ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2025, 14:41 IST
Last Updated 1 ಮಾರ್ಚ್ 2025, 14:41 IST
ನಾಗ್ಪುರದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್ ಪಂದ್ಯದ ನಾಲ್ಕನೇ ದಿನವಾದ ಶನಿವಾರ ಶತಕ ಪೂರೈಸಿದ ವಿದರ್ಭ ತಂಡದ ಕರುಣ್ ನಾಯರ್ ಅವರನ್ನು ಕೇರಳ ತಂಡದ ನಾಯಕ ಸಚಿನ್ ಬೇಬಿ ಅಭಿನಂದಿಸಿದ್ದು ಹೀಗೆ....
ನಾಗ್ಪುರದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್ ಪಂದ್ಯದ ನಾಲ್ಕನೇ ದಿನವಾದ ಶನಿವಾರ ಶತಕ ಪೂರೈಸಿದ ವಿದರ್ಭ ತಂಡದ ಕರುಣ್ ನಾಯರ್ ಅವರನ್ನು ಕೇರಳ ತಂಡದ ನಾಯಕ ಸಚಿನ್ ಬೇಬಿ ಅಭಿನಂದಿಸಿದ್ದು ಹೀಗೆ....    

ನಾಗ್ಪುರ: ಆರಂಭದಲ್ಲಿ ದೊರೆತ ಜೀವದಾನದ ಲಾಭ ಪಡೆದ ಕರುಣ್ ನಾಯರ್ ಅಜೇಯ ಶತಕ ಬಾರಿಸಿ, ವಿದರ್ಭ ತಂಡದ ಸ್ಥಿತಿಯನ್ನು ಬಲಪಡಿಸಿದರು. ಕೇರಳ ವಿರುದ್ಧ ರಣಜಿ ಟ್ರೋಫಿ ಪಂದ್ಯದ ನಾಲ್ಕನೇ ದಿನವಾದ ಶನಿವಾರ ವಿದರ್ಭ ಎರಡನೇ ಇನಿಂಗ್ಸ್‌ನಲ್ಲಿ 4 ವಿಕೆಟ್‌ಗೆ 249 ರನ್ ಬಾರಿಸಿದ್ದು, ಒಟ್ಟಾರೆ 286 ರನ್ ಮುನ್ನಡೆ ಕಟ್ಟಿಕೊಂಡಿದೆ.

ರಣಜಿಯಲ್ಲಿ ನಾಯರ್ ಈ ಋತುವಿನಲ್ಲಿ ನಾಲ್ಕನೇ ಶತಕ ಬಾರಿಸಿದರು. ವಿಜಯ್ ಹಜಾರೆ ಟ್ರೋಫಿಯಲ್ಲಿ ಅವರು ಐದು ಶತಕ ಬಾರಿಸಿದ್ದರು. ದಿನದಾಟ ಮುಗಿದಾಗ ಅವರು 280 ಎಸೆತಗಳ ಇನಿಂಗ್ಸ್‌ನಲ್ಲಿ ಔಟಾಗದೇ 132 ರನ್ ಬಾರಿಸಿದ್ದಾರೆ. ಇದರಲ್ಲಿ ಎರಡು ಸಿಕ್ಸರ್‌, ಹತ್ತು ಬೌಂಡರಿಗಳಿವೆ. ವಿದರ್ಭ ಮೊದಲ ಇನಿಂಗ್ಸ್‌ನಲ್ಲಿ 37 ರನ್‌ಗಳ ಮುನ್ನಡೆ ಪಡೆದಿತ್ತು.

ಐದು ದಿನಗಳ ಪಂದ್ಯದಲ್ಲಿ ಒಂದು ದಿನವಷ್ಟೇ ಉಳಿದಿದ್ದು, ಸುಭದ್ರ ಸ್ಥಿತಿಯಲ್ಲಿರುವ ಆತಿಥೇಯರು ಮೂರನೇ ಬಾರಿ ಟ್ರೋಫಿ ಎತ್ತಿ ಹಿಡಿಯಲು ಸಜ್ಜಾಗಿದ್ದಾರೆ. 

ADVERTISEMENT

ಜಮ್ತಾದ ವಿಸಿಎ ಕ್ರೀಡಾಂಗಣದಲ್ಲಿ ಶನಿವಾರ ಎರಡನೇ ಇನಿಂಗ್ಸ್‌ ಆರಂಭಿಸಿದ ವಿದರ್ಭ ತಂಡವು ಪಾರ್ಥ ರೇಖಡೆ (1) ಮತ್ತು ಧ್ರುವ್ ಶೋರೆ (5) ಅವರನ್ನು ಬೇಗನೇ ಕಳೆದುಕೊಂಡಿತ್ತು. ಕ್ರಮವಾಗಿ ಜಲಜ್ ಸಕ್ಸೇನಾ ಮತ್ತು ನಿಧೀಶ್ ಈ ವಿಕೆಟ್‌ ಪಡೆದಿದ್ದರು. ಆದರೆ ಕರುಣ್ ನಾಯರ್ ಮತ್ತು ದಾನಿಶ್ ಮಾಲೇವರ್ (73, 162 ಎಸೆತ, 4x5) ಮತ್ತೊಮ್ಮೆ ವಿದರ್ಭ ಪಾಲಿಗೆ ಆಪತ್ಬಾಂಧವರಾದರು.

19ನೇ ಓವರಿನಲ್ಲಿ ನಾಯರ್ ಜೀವದಾನ ಪಡೆದರು. 31 ರನ್‌ ಗಳಿಸಿದ್ದಾಗ, ವೇಗಿ ಏಡನ್ ಆಪಲ್ ಟೋಮ್ ಬೌಲಿಂಗ್‌ನಲ್ಲಿ ಎಗರಿದ ಎಸೆತವನ್ನು ಆಡಲು ಹೋದಾಗ ಬ್ಯಾಟಿಗೆ ತಾಗಿದ ಚೆಂಡನ್ನು ಸ್ಲಿಪ್‌ನಲ್ಲಿದ್ದ ಅಕ್ಷಯ್ ಚಂದ್ರನ್ ಕ್ಯಾಚ್‌ ಬಿಟ್ಟರು. ಆದರೆ ಈ ಜೀವದಾನ ದುಬಾರಿಯಾಯಿತು. ಮರುಹೋರಾಟದ ಕೇರಳದ ಆಸೆ ದೂರವಾಯಿತು. ನಾಯರ್‌– ಮಾಲೇವರ್ ಜೋಡಿ 182 ರನ್ ಜೊತೆಯಾಟದಲ್ಲಿ ಭಾಗಿಯಾಯಿತು.

ಕರುಣ್ ನಂತರ ಅವಕಾಶ ನೀಡಲಿಲ್ಲ. ರಾಥೋಡ್ ಜೊತೆ ನಾಲ್ಕನೇ ವಿಕೆಟ್‌ಗೆ 49 ರನ್ ಸೇರಿಸಿ ತಂಡದ ಸ್ಥಿತಿ ಉತ್ತಮಗೊಳಿಸಿದರು. ಕರ್ನಾಟಕದ ಮಾಜಿ ನಾಯಕ ಮೊದಲ ಇನಿಂಗ್ಸ್‌ನಲ್ಲಿ ರನೌಟ್‌ ಆಗಿ 14 ರನ್‌ಗಳಿಂದ ಅರ್ಹ ಶತಕ ಕಳೆದುಕೊಂಡಿದ್ದರು.

ಜಲಸ್‌ ಸಕ್ಸೇನಾ ತಮ್ಮ ಮೊದಲ (ತಂಡದ ಎರಡನೇ) ಓವರಿನಲ್ಲೇ ಪಾರ್ಥ ರೇಖಡೆ ಅವರನ್ನು ಬೌಲ್ಡ್‌ ಮಾಡಿದ್ದರು. ಮರು ಓವರಿನಲ್ಲಿ ನಿಧೀಶ್‌ ಬೌಲಿಂಗ್‌ನಲ್ಲಿ ಶೋರೆ ಆಫ್‌ ಸ್ಟಂಪ್‌ ಆಚೆಗಿನ ಎಸೆತವನ್ನು ಕೆಣಕಿ ವಿಕೆಟ್‌ ಕೀಪರ್‌ ಅಜರುದ್ದೀನ್‌ಗೆ ಕ್ಯಾಚ್‌ ನೀಡಿದರು.

ಸಂಕ್ಷಿಪ್ತ ಸ್ಕೋರು

ಮೊದಲ ಇನಿಂಗ್ಸ್‌: ವಿದರ್ಭ: 379; ಕೇರಳ: 342;

ಎರಡನೇ ಇನಿಂಗ್ಸ್: ವಿದರ್ಭ: 90 ಓವರುಗಳಲ್ಲಿ 4 ವಿಕೆಟ್‌ಗೆ 249 (ದಾನಿಶ್ ಮಾಲೇವರ್ 73, ಕರುಣ್‌ ನಾಯರ್‌ ಬ್ಯಾಟಿಂಗ್‌ 132, ಯಶ್ ರಾಥೋಡ್ 24; ನಿಧೀಶ್ 37ಕ್ಕೆ1, ಅಕ್ಷಯ್ ಚಂದ್ರನ್ 29ಕ್ಕೆ1).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.