ADVERTISEMENT

KAR vs TN | ರೋಚಕ ಪಂದ್ಯದಲ್ಲಿ 8 ವಿಕೆಟ್ ಪಡೆದ ಗೌತಮ್; ಕರ್ನಾಟಕಕ್ಕೆ ಗೆಲುವು

ತಮಿಳುನಾಡು ವಿರುದ್ಧ 26 ರನ್‌ ಅಂತರದ ಗೆಲುವು

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 12:11 IST
Last Updated 12 ಡಿಸೆಂಬರ್ 2019, 12:11 IST
ಆಲ್ರೌಂಡರ್‌ ಕೆ.ಗೌತಮ್‌
ಆಲ್ರೌಂಡರ್‌ ಕೆ.ಗೌತಮ್‌    

ದಿಂಡಿಗಲ್:ರೋಚಕ ಹೋರಾಟಕ್ಕೆ ಸಾಕ್ಷಿಯಾದ ಪಂದ್ಯದಲ್ಲಿ ಶ್ರೇಷ್ಠ ನಿರ್ವಹಣೆ ತೋರಿದ ಕೆ.ಗೌತಮ್‌ ಕರ್ನಾಟಕ ತಂಡಕ್ಕೆ ಆತಿಥೇಯ ತಮಿಳುನಾಡು ವಿರುದ್ಧ 26ರನ್ ಗಳ ಗೆಲುವು ತಂದುಕೊಟ್ಟರು. ಆ ಮೂಲಕ ಕ್ರಿಕೆಟ್‌ನಲ್ಲಿ ಏನುಬೇಕಾದರೂ ಆಗಬಹುದು ಎಂಬುದು ಮತ್ತೊಮ್ಮೆ ಸಾಭೀತಾಯಿತು.

ಇಲ್ಲಿನಎನ್‌.ಪಿ.ಆರ್. ಕಾಲೇಜು ನಡೆದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 29 ರನ್‌ಗಳ ಅಲ್ಪ ಮುನ್ನಡೆ ಗಳಿಸಿದ್ದ ಕರ್ನಾಟಕ, ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತ್ತು. ಕೇವಲ 151 ರನ್‌ಗಳಿಗೆ ಸರ್ವಪತನ ಕಂಡು ತಮಿಳುನಾಡು ತಂಡದ ಗೆಲುವಿಗೆ 181 ರನ್‌ಗಳ ಅಲ್ಪ ಗುರಿ ನೀಡಿತ್ತು.ಹೀಗಾಗಿವಿಜಯ ಶಂಕರ್‌ ಪಡೆ ಟೂರ್ನಿಯಲ್ಲಿ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿತ್ತು.

ಆದರೆ ಅದಕ್ಕೆ ಗೌತಮ್‌ ಅವಕಾಶ ನೀಡಲಿಲ್ಲ. 30.3 ಓವರ್‌ ಬೌಲ್‌ ಮಾಡಿದ ಗೌತಮ್‌ 60 ರನ್‌ ನೀಡಿ ಎಂಟು ವಿಕೆಟ್ ಕಿತ್ತರು.ಮೊದಲ ಇನಿಂಗ್ಸ್‌ನಲ್ಲಿಯೂ ಪ್ರಮುಖ ಆರುವಿಕೆಟ್‌ಗಳನ್ನು ಕಬಳಿಸಿದ್ದ ಗೌತಮ್‌ ಇನಿಂಗ್ಸ್‌ ಮುನ್ನಡೆ ತಂದುಕೊಟ್ಟಿದ್ದರು.

ADVERTISEMENT

ಒಂದು ಹಂತದಲ್ಲಿ ವಿಕೆಟ್‌ ನಷ್ಟವಿಲ್ಲದೆ 49ರನ್‌ ಗಳಿಸಿದ್ದ ತಮಿಳುನಾಡು, ಸುಲಭ ಜಯ ಸಾಧಿಸುವ ಲೆಕ್ಕಾಚಾರದಲ್ಲಿತ್ತು. ಉತ್ತಮವಾಗಿ ಆಡುತ್ತಿದ್ದ ಮುರುಳಿ ವಿಜಯ್‌ (15) ರನೌಟ್‌ ಆಗುವುದರೊಂದಿಗೆ ಪಂದ್ಯ ತಿರುವು ಪಡೆಯಿತು. ನಂತರ ಸತತ ಐದು ವಿಕೆಟ್‌ ಪಡೆದ ಗೌತಮ್‌ ಪಂದ್ಯವನ್ನು ಕರ್ನಾಟಕದತ್ತ ವಾಲಿಸಿದರು.

ವಿ. ಕೌಶಿಕ್‌ಗೆ ವಿಕೆಟ್‌ ಒಪ್ಪಿಸಿದಎನ್‌. ಜಗದೀಶನ್‌ ಹೊರತುಪಡಿಸಿ ಉಳಿದೆಲ್ಲ ಆಟಗಾರರೂ ಗೌತಮ್‌ ಸ್ಪಿನ್‌ ಮೋಡಿಗೊಳಗಾದರು. ಕೊನೆಯಲ್ಲಿ ಮುರುಗನ್‌ ಅಶ್ವಿನ್‌ ಹಾಗೂಮಣಿಮಾರನ್ ಸಿದ್ದಾರ್ಥ್ ಹೋರಾಟ ನಡೆಸಿದರಾದರೂ ತಮ್ಮ ತಂಡಕ್ಕೆ ಸೋಲು ತಪ್ಪಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ತಮಿಳುನಾಡು ತಂಡ ಎಲ್ಲ ವಿಕೆಟ್‌ ಕಳೆದುಕೊಂಡು 154 ರನ್‌ ಗಳಿಸಲಷ್ಟೇ ಶಕ್ತವಾಯಿತು.

77 ಎಸೆತಗಳಲ್ಲಿ 22 ರನ್‌ ಗಳಿಸಿ ಜಿಗುಟುತನದ ಬ್ಯಾಟಿಂಗ್‌ ಮಾಡುತ್ತಿದ್ದ ಅಶ್ವಿನ್‌ ಔಟಾಗದೆ ಉಳಿದರು.

ಕರ್ನಾಟಕ ಮುಂದಿನ ಪಂದ್ಯದಲ್ಲಿ ಉತ್ತರ ಪ್ರದೇಶವನ್ನು ಎದುರಿಸಲಿದೆ. ಪಂದ್ಯವು ಡಿಸೆಂಬರ್‌ 17ರಿಂದ 20ರವರೆಗೆ ಹುಬ್ಬಳ್ಳಿಯಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.