ಲಖನೌ: ಕೆ.ಎಲ್.ರಾಹುಲ್ (ಅಜೇಯ 176) ಹಾಗೂ ಸಾಯಿ ಸುದರ್ಶನ್ (100) ಅವರ ಶತಕಗಳ ಬಲದಿಂದ ಭಾರತ ಎ ತಂಡವು ಎರಡನೇ ‘ಟೆಸ್ಟ್’ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಆಸ್ಟ್ರೇಲಿಯಾ ಎ ತಂಡವನ್ನು ಸುಲಭವಾಗಿ ಮಣಿಸಿತು. ಅದರೊಂದಿಗೆ, ಎರಡು ಪಂದ್ಯಗಳ ಸರಣಿಯನ್ನು 1–0ಯಿಂದ ಜಯಿಸಿತು.
ಮೊದಲ ಇನಿಂಗ್ಸ್‌ನಲ್ಲಿ 226 ರನ್ ಹಿನ್ನಡೆ ಅನುಭವಿಸಿದ್ದ ಧ್ರುವ್ ಜುರೇಲ್ ಪಡೆಯು ರಾಹುಲ್ ಹಾಗೂ ಸುದರ್ಶನ್ ಅವರ ಬ್ಯಾಟಿಂಗ್ ಬಲದಿಂದ ಎರಡನೇ ಇನಿಂಗ್ಸ್‌ನಲ್ಲಿ ಪಾರಮ್ಯ ಮೆರೆಯಿತು. ಆಸ್ಟ್ರೇಲಿಯಾ ಎ ತಂಡ ನೀಡಿದ್ದ 413 ರನ್‌ಗಳ ಬೃಹತ್ ಗುರಿಯನ್ನು ನಾಲ್ಕನೇ ಹಾಗೂ ಅಂತಿಮ ದಿನವಾದ ಶುಕ್ರವಾರ ನಿರಾಯಾಸವಾಗಿ ತಲುಪಿತು.
ಗುರುವಾರ 2 ವಿಕೆಟ್‌ಗೆ 169 ರನ್ ಗಳಿಸಿದ್ದ ಭಾರತ ತಂಡವು ಶುಕ್ರವಾರ ಮಾನವ್ ಸುತಾರ್ (5) ಅವರ ವಿಕೆಟ್ ಬೇಗ ಕಳೆದುಕೊಂಡಿತು. ಆಗ, ಸುದರ್ಶನ್ ಅವರು ನಾಯಕ ಜುರೇಲ್ (56) ಜೊತೆಗೂಡಿ ನಾಲ್ಕನೇ ವಿಕೆಟ್‌ಗೆ 78 ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರು.
ಶತಕ ಸಿಡಿಸಿದ ಬೆನ್ನಲ್ಲೇ ಸುದರ್ಶನ್ ಅವರು ಸ್ಪಿನ್ನರ್ ಕೊರಿ ರೊಚಿಚಿಯೊಲಿ ಬೌಲಿಂಗ್‌ನಲ್ಲಿ ಜಾಕ್ ಎಡ್ವರ್ಡ್ಸ್ ಅವರಿಗೆ ಕ್ಯಾಚಿತ್ತು ನಿರ್ಗಮಿಸಿದರು. ಗುರುವಾರ ಗಾಯಗೊಂಡು ನಿವೃತ್ತರಾಗಿದ್ದ ರಾಹುಲ್ ಮತ್ತೆ ಬ್ಯಾಟಿಂಗ್‌ಗೆ ಇಳಿದರು. ಐದನೇ ವಿಕೆಟ್‌ಗೆ ಜುರೇಲ್ ಅವರೊಂದಿಗೆ 115 ರನ್ ಜೊತೆಯಾಟವಾಡಿದರು.
ಸಮಯೋಚಿತವಾಗಿ ಆಡಿದ ರಾಹುಲ್ 136 ಎಸೆತಗಳಲ್ಲಿ ಶತಕ ದಾಖಲಿಸಿದರು. ಮುಂದಿನ 74 ಎಸೆತಗಳಲ್ಲಿ 76 ರನ್ ದೋಚಿದರು. ಜುರೇಲ್ ನಿರ್ಗಮಿಸಿದ ಬಳಿಕ ನಿತೀಶ್ ಕುಮಾರ್ ರೆಡ್ಡಿ (ಔಟಾಗದೇ 16) ಜೊತೆಗೂಡಿ ಚಹಾ ವಿರಾಮಕ್ಕೂ ಮೊದಲೇ ತಂಡವನ್ನು ಗೆಲುವಿನ ದಡ ಸೇರಿಸಿದರು.
ರಾಹುಲ್ ಅವರ ಸೊಗಸಾದ ಇನಿಂಗ್ಸ್‌ನಲ್ಲಿ 16 ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳಿದ್ದವು. ಅದರೊಂದಿಗೆ, ರಾಹುಲ್ ಅವರು ಮುಂಬರುವ ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್ ಸರಣಿಗೆ ಭರ್ಜರಿ ಸಿದ್ಧತೆಯನ್ನೇ ಮಾಡಿಕೊಂಡರು.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಆಸ್ಟ್ರೇಲಿಯಾ ಎ: 92.7 ಓವರ್‌ಗಳಲ್ಲಿ 420. ಭಾರತ ಎ: 52.5 ಓವರುಗಳಲ್ಲಿ 194. ಎರಡನೇ ಇನಿಂಗ್ಸ್: ಆಸ್ಟ್ರೇಲಿಯಾ ಎ: 46.5 ಓವರ್‌ಗಳಲ್ಲಿ 185. ಭಾರತ ಎ: 91.3 ಓವರ್‌ಗಳಲ್ಲಿ 5 ವಿಕೆಟ್‌ಗೆ 413 (ಸಾಯಿ ಸುದರ್ಶನ್ 100, ಕೆ.ಎಲ್.ರಾಹುಲ್ ಔಟಾಗದೇ 176, ಧ್ರುವ್ ಜುರೇಲ್ 56, ಟಾಡ್ ಮುರ್ಫಿ 114ಕ್ಕೆ3, ಕೊರಿ ರೊಚಿಚಿಯೊಲಿ 84ಕ್ಕೆ2).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.