ADVERTISEMENT

ಕೊಹ್ಲಿ, ರೋಹಿತ್ ಅಲ್ಲ, ಈ ಕನ್ನಡಿಗ ಆಟಗಾರನೇ ನನ್ನ ಫೇವರಿಟ್ ನಾಯಕ ಎಂದ ಶ್ರೇಯಸ್

ಪಿಟಿಐ
Published 21 ಮಾರ್ಚ್ 2022, 11:22 IST
Last Updated 21 ಮಾರ್ಚ್ 2022, 11:22 IST
ಶ್ರೇಯಸ್ ಅಯ್ಯರ್
ಶ್ರೇಯಸ್ ಅಯ್ಯರ್   

ನವದೆಹಲಿ: ಕನ್ನಡಿಗ ಕೆ.ಎಲ್. ರಾಹುಲ್ ನನ್ನ ನೆಚ್ಚಿನ ಕಪ್ತಾನ ಎಂದು ಬಲಗೈ ಬ್ಯಾಟರ್ ಶ್ರೇಯರ್ ಅಯ್ಯರ್ ಹೇಳಿದ್ದಾರೆ.

ಟೀಮ್ ಇಂಡಿಯಾ ಆಟಗಾರರಾದ ರಾಹುಲ್ ಹಾಗೂ ಶ್ರೇಯಸ್, ಇಂಡಿಯನ್ ಪ್ರೀಮಿಯರ್ ಲೀಗ್ 2022ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಎರಡು ವಿಭಿನ್ನ ಫ್ರಾಂಚೈಸ್‌ಗಳನ್ನು ಮುನ್ನಡೆಸುತ್ತಿದ್ದಾರೆ.

ರಾಹುಲ್ ನೂತನ ಲಖನೌ ಸೂಪರ್‌ಜೈಂಟ್ಸ್ ಹಾಗೂ ಅಯ್ಯರ್, ಕೋಲ್ಕತ್ತ ನೈಟ್ ರೈಡರ್ಸ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ರಾಹುಲ್ ನಾಯಕತ್ವದಡಿಯಲ್ಲಿ ಅಯ್ಯರ್ ಆಡಿದ್ದರು. ಅಲ್ಲದೆ ರಾಹುಲ್ ಅವರ ಸಹಜ ಹಾಗೂ ಶಾಂತಚಿತ್ತದ ನಾಯಕತ್ವ ಶೈಲಿಯನ್ನು ಅಯ್ಯರ್ ಹೊಗಳಿದ್ದಾರೆ.

'ರಾಹುಲ್ ನಾಯಕತ್ವದಲ್ಲಿ ಆಡುವುದು ತುಂಬಾ ಸಂತೋಷದ ವಿಚಾರ. ಮೊದಲನೆಯದಾಗಿ ಅವರು ಅತ್ಯುತ್ತಮ ಆಟಗಾರ. ಮೈದಾನದಲ್ಲಿ ತಂಡದ ಆಟಗಾರರಿಗೆ ಒದಗಿಸುತ್ತಿರುವ ಬೆಂಬಲವು ಅತ್ಯುತ್ತಮ' ಎಂದು ಕ್ಲಬ್ ಹೌಸ್‌ನ ರೆಡ್ ಬುಲ್ ಕ್ರಿಕೆಟ್ ರೂಮ್‌ನಲ್ಲಿ ತಿಳಿಸಿದ್ದಾರೆ.

'ರಾಹುಲ್ ತುಂಬಾ ಶಾಂತಚಿತ್ತರಾಗಿದ್ದು, ಮೈದಾನದಲ್ಲಿ ಸಹಜವಾಗಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅವರ ನಾಯಕತ್ವದಡಿಯಲ್ಲಿ ಆಡುವುದನ್ನು ನಿಜವಾಗಿಯೂ ಆನಂದಿಸಿದ್ದೇನೆ' ಎಂದು ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೂರನೇ ಏಕದಿನದಲ್ಲಿ ಅಯ್ಯರ್‌ಗೆ ಬೌಲಿಂಗ್ ಮಾಡುವ ಅವಕಾಶವನ್ನು ರಾಹುಲ್ ನೀಡಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಅಯ್ಯರ್, 'ಈ ಹಿಂದೆ ಯಾವೊಬ್ಬ ನಾಯಕನೂ ಹಾಗೇ ಮಾಡಿರಲಿಲ್ಲ. ಆದ್ದರಿಂದ ಹೌದು, ಅವರು ನನ್ನ ನೆಚ್ಚಿನ ನಾಯಕ' ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.