ADVERTISEMENT

IPL 2022: ಐಪಿಎಲ್‌ನಲ್ಲಿ ಕೆ.ಎಲ್. ರಾಹುಲ್ 150 ಸಿಕ್ಸರ್ ಸಾಧನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಮೇ 2022, 13:23 IST
Last Updated 1 ಮೇ 2022, 13:23 IST
ಕೆ.ಎಲ್. ರಾಹುಲ್
ಕೆ.ಎಲ್. ರಾಹುಲ್   

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಕೆ.ಎಲ್. ರಾಹುಲ್ 150 ಸಿಕ್ಸರ್‌ಗಳ ಸಾಧನೆ ಮಾಡಿದ್ದಾರೆ.

ಐಪಿಎಲ್ 2022 ಟೂರ್ನಿಯಲ್ಲಿ ನೂತನ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸುತ್ತಿರುವ ರಾಹುಲ್, ಅಮೋಘ ಆಟವನ್ನು ಮುಂದುವರಿಸಿದ್ದಾರೆ.

ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲೂ ರಾಹುಲ್ ಆಕರ್ಷಕ ಅರ್ಧಶತಕ (77 ರನ್, 51 ಎಸೆತ) ಗಳಿಸಿದ್ದರು. ಇದು ಐಪಿಎಲ್‌ನಲ್ಲಿ ರಾಹುಲ್ ಗಳಿಸಿದ 29ನೇ ಅರ್ಧಶತಕವಾಗಿದೆ.

ರಾಹುಲ್ ಮನಮೋಹಕ ಇನ್ನಿಂಗ್ಸ್‌ನಲ್ಲಿ ಐದು ಸಿಕ್ಸರ್ ಹಾಗೂ ನಾಲ್ಕು ಬೌಂಡರಿಗಳು ಸೇರಿದ್ದವು.

ತಮ್ಮ 104ನೇ ಐಪಿಎಲ್ ಪಂದ್ಯದಲ್ಲಿ (95 ಇನ್ನಿಂಗ್ಸ್) ರಾಹುಲ್ 150 ಸಿಕ್ಸರ್‌ಗಳ ಸಾಧನೆ ಮಾಡಿದ್ದಾರೆ.

ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ವೆಸ್ಟ್ ಇಂಡೀಸ್‌ನ ದೈತ್ಯ ಕ್ರಿಸ್ ಗೇಲ್ ಹೆಸರಲ್ಲಿದ್ದು, ಒಟ್ಟು 357 ಸಿಕ್ಸ್ ಸಿಡಿಸಿದ್ದಾರೆ. ಎಬಿ ಡಿವಿಲಿಯರ್ಸ್ 251, ರೋಹಿತ್ ಶರ್ಮಾ 234 ಹಾಗೂ ಮಹೇಂದ್ರ ಸಿಂಗ್ ಧೋನಿ 224 ಸಿಕ್ಸರ್ ಗಳಿಸಿದ್ದಾರೆ.

ಇನ್ನು ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ತಲಾ ಎರಡು ಶತಕ ಹಾಗೂ ಅರ್ಧಶತಕ ಗಳಿಸಿರುವ ರಾಹುಲ್, 'ಆರೆಂಜ್ ಕ್ಯಾಪ್' ರೇಸ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇದುವರೆಗೆ 10 ಪಂದ್ಯ ಆಡಿರುವ ರಾಹುಲ್ 451 ರನ್ ಗಳಿಸಿದ್ದಾರೆ.

ಈ ಪಟ್ಟಿಯಲ್ಲಿ ಮುನ್ನಡೆಯಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡದ ಜೋಸ್ ಬಟ್ಲರ್, ಒಂಬತ್ತು ಪಂದ್ಯಗಳಲ್ಲಿ ತಲಾ ಮೂರು ಶತಕ ಹಾಗೂ ಅರ್ಧಶತಕಗಳ ನೆರವಿನಿಂದ ಒಟ್ಟು 566 ರನ್ ಪೇರಿಸಿದ್ದಾರೆ.

ಐಪಿಎಲ್ 2022ರಲ್ಲಿ ರಾಹುಲ್ ರನ್ ಗಳಿಕೆ:77, 6, 103*, 30, 103*, 0, 24, 68, 40, 0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.