ಜಸ್‌ಪ್ರೀತ್ ಬೂಮ್ರಾ ಮತ್ತು ಆಕಾಶ್ ದೀಪ್
ಚಿತ್ರ: X/@BCCI
ಬ್ರಿಸ್ಬೇನ್: ಕೆ.ಎಲ್. ರಾಹುಲ್ ಮತ್ತೊಮ್ಮೆ ಮಹತ್ವದ ಕಾಣಿಕೆ ನೀಡಿದರು. ರವೀಂದ್ರ ಜಡೇಜ ಅವರು ಕೆಳಕ್ರಮಾಂಕದಲ್ಲಿ ತಾವೆಷ್ಟು ಮುಖ್ಯ ಎಂಬುದನ್ನು ಮತ್ತೆ ಸಾಬೀತುಮಾಡಿದರು. ಇವರಿಬ್ಬರ ಅರ್ಧಶತಕಗಳ ಬಲದಿಂದ ಭಾರತ ತಂಡವು ಆಸ್ಟ್ರೇಲಿಯಾ ಎದುರಿನ ಟೆಸ್ಟ್‌ನಲ್ಲಿ ಫಾಲೋ ಆನ್ ತಪ್ಪಿಸಿಕೊಂಡಿತು.
ಕೊನೆಯ ವಿಕೆಟ್ ಜೊತೆಯಾಟದಲ್ಲಿ ಆಕಾಶ್ ದೀಪ್ ಮತ್ತು ಜಸ್‌ಪ್ರೀತ್ ಬೂಮ್ರಾ ಅವರ ಚೆಂದದ ಬ್ಯಾಟಿಂಗ್ ಭಾರತವನ್ನು ಸೋಲಿನ ಆತಂಕದಿಂದ ದೂರ ಕರೆದೊಯ್ಯುವ ವಿಶ್ವಾಸ ತುಂಬಿತು.
ಬಾರ್ಡರ್–ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನವಾದ ಮಂಗಳವಾರ ‘ಬಾಲಂಗೋಚಿ’ ಬ್ಯಾಟರ್‌ಗಳಾದ ಆಕಾಶ್ (ಬ್ಯಾಟಿಂಗ್ 27; 31ಎ, 4X2, 6X1) ಮತ್ತು ಬೂಮ್ರಾ (ಬ್ಯಾಟಿಂಗ್ 10; 27ಎ, 6X1) ಅವರು ಆಸ್ಟ್ರೇಲಿಯಾದ ಬೌಲರ್‌ಗಳ ಬಿರುಗಾಳಿ ವೇಗ, ಬೌನ್ಸರ್‌ಗಳನ್ನು ಸಮರ್ಥವಾಗಿ ಎದುರಿಸಿದರು.
ಫಾಲೋಆನ್ ತಪ್ಪಿಸಿಕೊಳ್ಳಲು ಭಾರತಕ್ಕೆ 33 ರನ್ ಅಗತ್ಯವಿತ್ತು. ಆದರೆ ಇನಿಂಗ್ಸ್‌ಗೆ ತೆರೆಯೆಳೆಯಲು ಆತಿಥೇಯರಿಗೆ ಒಂದು ವಿಕೆಟ್ ಬೇಕಿತ್ತು. ಈ ನಾಟಕೀಯ ಸನ್ನಿವೇಶದಲ್ಲಿ ಆಕಾಶ್ ಮತ್ತು ಬೂಮ್ರಾ ಅವರ ಆಟ ರಂಗೇರಿತು. ಪ್ಯಾಟ್ ಕಮಿನ್ಸ್ ಹಾಗೂ ಮಿಚೆಲ್ ಸ್ಟಾರ್ಕ್ ಅವರ ಸ್ವಿಂಗ್, ಬೌನ್ಸ್ ಎಸೆತಗಳಿಗೆ ದಿಟ್ಟ ಉತ್ತರ ಕೊಟ್ಟರು. ಮನರಂಜನೆ ಮತ್ತು ಮೌಲ್ಯಯುತವಾದ ಜೊತೆಯಾಟ ಬೆಸೆದರು. ಇದರಿಂದಾಗಿ ದಿನದಾಟದ ಮುಕ್ತಾಯಕ್ಕೆ ಭಾರತ 9 ವಿಕೆಟ್‌ಗಳಿಗೆ 252 ರನ್ ಗಳಿಸಿತು.
ಇನಿಂಗ್ಸ್ ಮುಗಿಸಿ ಪೆವಿಲಿಯನ್‌ನತ್ತ ನಡೆದ ಆಕಾಶ್ ಮತ್ತು ಬೂಮ್ರಾ ಅವರನ್ನು ಗ್ಯಾಲರಿಯಲ್ಲಿದ್ದ ಅಭಿಮಾನಿಗಳು ಎದ್ದು ನಿಂತು ಚಪ್ಪಾಳೆ ತಟ್ಟಿ ಗೌರವಿಸಿದರು. ರೋಹಿತ್ ಪಡೆಗೆ ಮೊದಲ ಇನಿಂಗ್ಸ್ ಮೊತ್ತ ಚುಕ್ತಾ ಮಾಡಲು ಇನ್ನೂ 193 ರನ್ ಬೇಕು. ಪಂದ್ಯದ ಕೊನೆಯ ದಿನವಾದ ಬುಧವಾರ ಬಹುತೇಕ ಅವಧಿಯಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಸೋಮವಾರ ದಿನದಾಟದ ಅಂತ್ಯಕ್ಕೆ 4 ವಿಕೆಟ್‌ಗಳಿಗೆ 51 ರನ್ ಗಳಿಸಿದ್ದ ಭಾರತ ತಂಡವನ್ನು ಸಂಕಷ್ಟದಿಂದ ಪಾರು ಮಾಡುವಲ್ಲಿ ಜಡೇಜ ದಿಟ್ಟತನ ತೋರಿದರು. ಎಡಗೈ ಬ್ಯಾಟರ್ 23 ಓವರ್‌ಗಳಲ್ಲಿ ಒಂದೂ ವಿಕೆಟ್ ಪತನವಾಗದಂತೆ ನೋಡಿಕೊಂಡರು. 35 ವರ್ಷದ ಆಲ್‌ರೌಂಡರ್ ಅರ್ಧಶತಕ ತಲುಪಿದಾಕ್ಷಣ ತಮ್ಮ ಬ್ಯಾಟ್ ಅನ್ನು ಖಡ್ಗದಂತೆ ತಿರುಗಿಸಿ ಸಂಭ್ರಮಿಸಿದರು.
ಕೆ.ಎಲ್. ರಾಹುಲ್ ಅವರೊಂದಿಗೆ ಜಡೇಜ ಇನಿಂಗ್ಸ್‌ಗೆ ಸ್ಥಿರತೆ ತುಂಬಿದರು. ರಾಹುಲ್ ಜೊತೆ ಮೂರನೇ ದಿನದಾಟದಲ್ಲಿ ಕ್ರೀಸ್‌ನಲ್ಲಿ ಉಳಿದಿದ್ದ ರೋಹಿತ್ ಶರ್ಮಾ (10; 27ಎ) ಕಮಿನ್ಸ್ ಬೌಲಿಂಗ್‌ನಲ್ಲಿ ಔಟಾಗುವ ಮುನ್ನ ಒಂದಷ್ಟು ಭರವಸೆಯ ಆಟ ತೋರಿಸಿದರು. ಈ ಹಂತದಲ್ಲಿ ತಮಗೆ ಉತ್ತಮವಾಗಿ ಜೊತೆ ನೀಡುವ ಬ್ಯಾಟರ್ ನಿರೀಕ್ಷೆಯಲ್ಲಿದ್ದ ರಾಹುಲ್ ಅವರಿಗೆ ರವೀಂದ್ರ ಲಭಿಸಿದರು.
ರಾಹುಲ್ 33 ರನ್ ಗಳಿಸಿ ಆಡುವಾಗ ಸ್ಲಿಪ್ ಫೀಲ್ಡರ್ ಸ್ಟೀವ್ ಸ್ಮಿತ್ ಅವರಿಂದ ಜೀವದಾನ ಪಡೆದರು. ಇದರಿಂದಾಗಿ ಕನ್ನಡನಾಡಿನ ಆಟಗಾರ 84 (139ಎ) ಗಳಿಸಲು ಸಾಧ್ಯವಾಯಿತು. ಅತ್ಯಂತ ಶಿಸ್ತುಬದ್ಧ ರಕ್ಷಣಾತ್ಮಕ ಆಟವಾಡಿದ ಅವರು ಕೆಲವು ಎಸೆತಗಳಲ್ಲಿ ದೇಹಕ್ಕೆ ಪೆಟ್ಟು ತಿಂದರು. ಚೆಂದದ ಕವರ್ ಡ್ರೈವ್ ಕೂಡ ಆಡಿದರು. ಬೆಳಿಗ್ಗೆ ಅಭ್ಯಾಸ ಮಾಡುವಾಗ ವೇಗಿ ಜೋಷ್ ಹ್ಯಾಜಲ್‌ವುಡ್ ಮೀನಖಂಡದ ಸ್ನಾಯುಸೆಳೆತದಿಂದ ಬಳಲಿದ್ದರು. ದಿನದಾಟದಲ್ಲಿ ಅವರು ಒಂದು ಓವರ್ ಮಾತ್ರ ಹಾಕಿದರು. ಸರಣಿಯ ಮುಂದಿನ ಎಲ್ಲ ಪಂದ್ಯಗಳಿಗೂ ಅವರು ಅಲಭ್ಯರಾಗಲಿದ್ದಾರೆ ಎಂಬ ಕಹಿಸುದ್ದಿ ಆಸ್ಟ್ರೇಲಿಯಾ ವನ್ನು ಕಾಡಿತು. ಮಧ್ಯದಲ್ಲಿ ಒಂದಿಷ್ಟು ಹೊತ್ತು ಮಳೆಯೂ ಸುರಿಯಿತು.
ಇದರ ಲಾಭ ಪಡೆದ ರಾಹುಲ್ –ರವೀಂದ್ರ ಜೊತೆಯಾಟ ಕಟ್ಟಿದರು. ಆಸ್ಟ್ರೇಲಿಯಾದ ಮೊತ್ತವನ್ನು ನಿಧಾನವಾಗಿ ಕರಗಿಸುವತ್ತ ಹೆಜ್ಜೆ ಹಾಕಿದರು. ಶತಕ ಬಾರಿಸುವ ನಿರೀಕ್ಷೆ ಮೂಡಿಸಿದ್ದ ರಾಹುಲ್ ಓಟಕ್ಕೆ ಸ್ಪಿನ್ನರ್ ನೇಥನ್ ಲಯನ್ ಕಡಿವಾಣ ಹಾಕಿದರು. ಈ ಬಾರಿ ಯಾವುದೇ ತಪ್ಪು ಮಾಡದ ಫೀಲ್ಡರ್ ಸ್ಮಿತ್ ಅವರು ರಾಹುಲ್ ಕ್ಯಾಚ್ ಪಡೆದರು. ಇಲ್ಲಿಗೆ 67 ರನ್‌ಗಳ ಐದನೇ ವಿಕೆಟ್ ಜೊತೆಯಾಟ ಮುರಿಯಿತು. ಕಳೆದೆರಡು ಪಂದ್ಯಗಳಲ್ಲಿ ಮಿಂಚಿದ್ದ ನಿತೀಶ್ ಕುಮಾರ್ ರೆಡ್ಡಿ ಇಲ್ಲಿ ಹೆಚ್ಚು ಹೊತ್ತು ಆಡಲಿಲ್ಲ. ಕಮಿನ್ಸ್ ಹಾಕಿದ ಬೌನ್ಸರ್ ಪುಲ್ ಮಾಡುವ ಭರದಲ್ಲಿ ಮಿಚೆಲ್ ಮಾರ್ಷ್‌ಗೆ ಕ್ಯಾಚಿತ್ತರು. ಸ್ಟಾರ್ಕ್ ಎಸೆತದಲ್ಲಿ ಸಿರಾಜ್ ಔಟಾದರು. ಈ ಹಂತದಲ್ಲಿ ಭಾರತದ ಮೇಲೆ ಫಾಲೋ ಆನ್ ಹೇರುವ ತರಾತುರಿ ಯಲ್ಲಿದ್ದ ಆತಿಥೇಯರಿಗೆ ಬೂಮ್ರಾ ಮತ್ತು ಆಕಾಶ್ ಅಡ್ಡಿಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.