ADVERTISEMENT

ಚೆನ್ನೈ ಪಿಚ್ ಬಗ್ಗೆ ಅಸಮಾಧಾನ

ಮೊದಲ ಪಂದ್ಯದಲ್ಲಿ ಪರದಾಡಿದ ಬ್ಯಾಟ್ಸ್‌ಮನ್‌ಗಳು: ಧೋನಿ, ಕೊಹ್ಲಿ ಬೇಸರ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2019, 19:56 IST
Last Updated 24 ಮಾರ್ಚ್ 2019, 19:56 IST
ಆರ್‌ಸಿಬಿ ಎದುರಿನ ಪಂದ್ಯ ಗೆದ್ದ ನಂತರ ಸಿಎಸ್‌ಕೆ ನಾಯಕ ಮಹೇಂದ್ರ ಸಿಂಗ್ ಧೋನಿ (ಬಲದಿಂದ ಎರಡನೆಯವರು) ಸಹ ಆಟಗಾರರ ಜೊತೆ ಸಂಭ್ರಮಿಸಿದರು –ಪಿಟಿಐ ಚಿತ್ರ
ಆರ್‌ಸಿಬಿ ಎದುರಿನ ಪಂದ್ಯ ಗೆದ್ದ ನಂತರ ಸಿಎಸ್‌ಕೆ ನಾಯಕ ಮಹೇಂದ್ರ ಸಿಂಗ್ ಧೋನಿ (ಬಲದಿಂದ ಎರಡನೆಯವರು) ಸಹ ಆಟಗಾರರ ಜೊತೆ ಸಂಭ್ರಮಿಸಿದರು –ಪಿಟಿಐ ಚಿತ್ರ   

ಚೆನ್ನೈ: ಬ್ಯಾಟ್ಸ್‌ಮನ್‌ಗಳು ಅಬ್ಬರಿಸುವ ಲೀಗ್‌ ಎಂದೇ ಹೆಸರಾಗಿರುವ ಐಪಿಎಲ್‌ನ ಮೊದಲ ಪಂದ್ಯದಲ್ಲಿ ಬೌಲರ್‌ಗಳು ಮೇಲುಗೈ ಸಾಧಿಸಿದ್ದರು. ಹೀಗಾಗಿ ಪಂದ್ಯದಲ್ಲಿ ಹೆಚ್ಚು ರನ್‌ ಹರಿದು ಬರಲಿಲ್ಲ. ಈ ಪಂದ್ಯ ನಡೆದ ಇಲ್ಲಿನ ಎಂ.ಎ.ಚಿದಂಬರಂ ಕ್ರೀಡಾಂಗಣದ ಪಿಚ್ ಬಗ್ಗೆ ಉಭಯ ತಂಡಗಳ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶನಿವಾರ ರಾತ್ರಿ ನಡೆದಿದ್ದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ವಿರುದ್ಧ ಏಳು ವಿಕೆಟ್‌ಗಳಿಂದ ಗೆದ್ದಿತ್ತು.

ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡಿ 17.1 ಓವರ್‌ಗಳಲ್ಲಿ 70 ರನ್‌ಗಳಿಗೆ ಆಲೌಟ್ ಆಗಿತ್ತು. ಸುಲಭ ಗುರಿ ಬೆನ್ನತ್ತಿದ ಸಿಎಸ್‌ಕೆ ತಂಡಕ್ಕೂ ಸುಲಭವಾಗಿ ಗೆಲ್ಲಲು ಆಗಲಿಲ್ಲ. 17.4 ಓವರ್‌ಗಳಲ್ಲಿ ತಂಡ ಜಯ ಸಾಧಿಸಿತ್ತು.

ADVERTISEMENT

ಪಂದ್ಯದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿದ್ದರೂ ಪಿಚ್‌ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಸಿಎಸ್‌ಕೆ ನಾಯಕ ಮಹೇಂದ್ರ ಸಿಂಗ್‌ ಧೋನಿ ‘ಇನ್ನೂ ಉತ್ತಮ ಪಿಚ್‌ ನಿರೀಕ್ಷಿಸಿದ್ದೆ’ ಎಂದು ಹೇಳಿದ್ದಾರೆ.

‘ಪಿಚ್ ಹೀಗೆ ವ‌ರ್ತಿಸುತ್ತದೆ ಎಂದೆನಿಸಿರಲಿಲ್ಲ. ಪಂದ್ಯ ಆರಂಭಗೊಂಡ ನಂತರ ನಿಜಕ್ಕೂ ಎಲ್ಲರಿಗೂ ಅಚ್ಚರಿಯಾಗಿತ್ತು. 2011ರ ಚಾಂಪಿಯನ್ಸ್ ಲೀಗ್ ಟೂರ್ನಿಯ ಪಂದ್ಯವೊಂದರಲ್ಲಿ ಆಡಿದ ಅನುಭವ ಇಲ್ಲಿ ಮರುಕಳಿಸಿತು’ ಎಂದು ಧೋನಿ ಅಭಿಪ್ರಾಯಪಟ್ಟಿದ್ದಾರೆ.

ಭಾರತ ತಂಡದ ನಾಯಕನೂ ಆಗಿರುವ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ‘ಪಿಚ್‌ ಮೇಲ್ನೋಟಕ್ಕೆ ಕಂಡಿದ್ದಕ್ಕಿಂತ ಭಿನ್ನವಾಗಿ ವರ್ತಿಸುತ್ತಿತ್ತು. 140ರಿಂದ 150ರಷ್ಟು ರನ್ ಗಳಿಸಬಹುದು ಎಂದು ಅಂದಾಜು ಮಾಡಿದ್ದೆವು. ನಿರೀಕ್ಷೆಗಳು ತಲೆ ಕೆಳಗಾದ ಕಾರಣ ಟೂರ್ನಿ ನೀರಸ ಆರಂಭ ಕಂಡಿದೆ’ ಎಂದು ಹೇಳಿದ್ದಾರೆ.

‘ಎರಡೂ ತಂಡಗಳಿಗೆ ಸಾಮರ್ಥ್ಯಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡಲು ಆಗಲಿಲ್ಲ. ಹೆಚ್ಚು ರನ್‌ ಗಳಿಸಲು ಇಷ್ಟಪಡುವ ಮತ್ತು ದೊಡ್ಡ ಮೊತ್ತದ ಗುರಿ ಬೆನ್ನತ್ತಲು ಬಯಸುವ ಐಪಿಎಲ್‌ನಂಥ ಟೂರ್ನಿಗಳಲ್ಲಿ ಪಿಚ್‌ ಬ್ಯಾಟಿಂಗ್‌ಗೆ ಅನುಕೂಲ ಆಗಿರದಿದ್ದರೆ ಬೇಸರ’ ಎಂದು ಕೊಹ್ಲಿ ನುಡಿದಿದ್ದಾರೆ.

ಪಿಚ್‌ ಚೆನ್ನಾಗಿರಲಿಲ್ಲ ಎಂದರೇನು?
ಚೆನ್ನೈ:
ಯಾವುದೇ ಪಿಚ್‌ನಲ್ಲಿ ಬ್ಯಾಟಿಂಗ್ ಮಾಡಲು ಸಾಧ್ಯವಾಗುವುದಿಲ್ಲ ಎಂದಾದರೆ ಅದು ಆಟಕ್ಕೆ ಅರ್ಹವಲ್ಲ ಎಂದೇ ಅರ್ಥ. ಚೆನ್ನೈ ಪಿಚ್‌ನಲ್ಲಿ ಬ್ಯಾಟಿಂಗ್ ನಡೆದಿದೆ. ಹೀಗಾಗಿ ಆಡಲು ಅರ್ಹವಾಗಿರಲಿಲ್ಲ ಎಂದು ಬೇಸರಪಡುವಂತಿಲ್ಲ. ಪಂದ್ಯದಲ್ಲಿ 170ರಿಂದ 180 ರನ್‌ಗಳು ಹರಿದು ಬಂದರೆ ಯಾರೂ ಮಾತನಾಡುವುದಿಲ್ಲ. ಆದರೆ ಚೆಂಡು ತಿರುವು ಪಡೆದರೆ ಅಥವಾ ಸ್ವಿಂಗ್ ಆದರೆ ಪಿಚ್ ಬಗ್ಗೆ ಆರೋಪ ಮಾಡುತ್ತಾರೆ. ಯಾಕೆ ಹೀಗಾಗುತ್ತದೆ ಎಂದು ಹರಭಜನ್ ಸಿಂಗ್ ಪ್ರಶ್ನಿಸಿದ್ದಾರೆ.

ರನ್‌ಗಳು ಯಾಕೆ ಹೆಚ್ಚು ಹರಿದು ಬಂದವು ಎಂದು ಯಾರೂ ಕೇಳುವುದಿಲ್ಲ. ಬೌಲರ್‌ಗಳು ಮಿಂಚಿದರೆ ಮಾತ್ರ ಎಲ್ಲರಿಗೂ ಹೊಟ್ಟೆ ಉರಿಯುತ್ತದೆ. ಬೌಲರ್ ಕೂಡ ಕ್ರಿಕೆಟ್ ಆಟಗಾರನೇ ಅಲ್ಲವೇ ಎಂದು ಅವರು ಖಾರವಾಗಿ ಕೇಳಿದ್ದಾರೆ.

ಕೊಹ್ಲಿ ಕೋಚ್‌ ಮಾಲ್ಟಾಗೆ ನೇಮಕ
ನವದೆಹಲಿ (ಪಿಟಿಐ):
ವಿರಾಟ್ ಕೊಹ್ಲಿ, ಬಾಲ್ಯದ ಕೋಚ್‌ ರಾಜ್‌ಕುಮಾರ್‌ ಶರ್ಮಾ ಅವರು ಮಾಲ್ಟಾ ರಾಷ್ಟ್ರೀಯ ಕ್ರಿಕೆಟ್ ತಂಡದ ಕೋಚ್ ಆಗಿ ನೇಮಕ ಗೊಂಡಿದ್ದಾರೆ. ಈ ತಂಡ ಐಸಿಸಿ ಅರ್ಹತಾ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಜ್ಜಾಗುತ್ತಿದೆ.

‘ಮಾರ್ಚ್‌ 29ರಿಂದ 31ರ ವರೆಗೆ ಸ್ಪೇನ್‌ನಲ್ಲಿ ಮೂರು ಡಿವಿಷನಲ್ ಟೂರ್ನಿಗಳು ನಡೆಯಲಿವೆ. ಮಾಲ್ಟಾ, ಎಸ್ಟೋನಿಯಾ ಮತ್ತು ಸ್ಪೇನ್ ಪಾಲ್ಗೊಳ್ಳ ಲಿವೆ’ ಎಂದು ಶರ್ಮಾ ತಿಳಿಸಿದರು.

ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ರಾದ ಶರ್ಮಾ ಅವರನ್ನು ಕಳೆದ ಬಾರಿ ದೆಹಲಿ ರಣಜಿ ತಂಡದ ಕೋಚ್ ಆಗಿ ನೇಮಕ ಮಾಡಲು ಚಿಂತನೆ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.