ಜಸ್‌ಪ್ರೀತ್ ಬೂಮ್ರಾ ಮತ್ತು ವಿರಾಟ್ ಕೊಹ್ಲಿ
ಸಂಗ್ರಹ ಚಿತ್ರ
ಪರ್ತ್: ಭಾರತ ಕ್ರಿಕೆಟ್ ತಂಡದ ಆಟಗಾರರ ನೆಟ್ಸ್ ಅಭ್ಯಾಸವನ್ನು ವೀಕ್ಷಿಸಲು ಮಾಧ್ಯಮಗಳಿಗೆ ಅವಕಾಶ ನೀಡಲಾಗಿತ್ತು. ಇದು ಸ್ಥಳೀಯ ಮಾಧ್ಯಮಗಳಲ್ಲಿ ಅಚ್ಚರಿಗೆ ಕಾರಣವಾಯಿತು. ಬಾರ್ಡರ್–ಗಾವಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೊದಲ ಟೆಸ್ಟ್ ಆರಂಭವಾಗಲು ಎರಡು ದಿನಗಳಿರುವಾಗ ಭಾರತದ ಆಟಗಾರರ ತಾಲೀಮು ಗಮನ ಸೆಳೆಯುವಂತಿತ್ತು.
ಗಾಯಗೊಂಡಿರುವ ಶುಭಮನ್ ಗಿಲ್ ಅವರು ಬುಧವಾರ ನಡೆದ ನೆಟ್ಸ್‌ನಲ್ಲಿ ಸಕ್ರಿಯವಾಗಿರಲಿಲ್ಲ. ಆದರೆ ದಕ್ಷಿಣ ಆಫ್ರಿಕಾದಿಂದ ನೇರವಾಗಿ ಇಲ್ಲಿಗೆ ಬಂದಿರುವ ಯಶ್ ದಯಾಳ್ ಅವರು ಕಾಣಿಸಿಕೊಂಡರು. ಗಾಯಗೊಂಡಿರುವ ಖಲೀಲ್ ಅಹಮದ್ ಸ್ಥಾನಕ್ಕೆ ಅವರನ್ನು ರಿಸರ್ವ್ ಆಟಗಾರನನ್ನಾಗಿ ಕರೆಸಿಕೊಳ್ಳಲಾಗಿದೆ.
ಕನ್ನಡಿಗ ಪ್ರಸಿದ್ಧಕೃಷ್ಣ ಉತ್ತಮ ವೇಗದ ಎಸೆತಗಳನ್ನು ಪ್ರಯೋಗಿಸುತ್ತಿದ್ದರು. ಪರಿಣಾಮಕಾರಿ ಬೌನ್ಸ್‌ಗಳನ್ನೂ ಅವರು ಹಾಕಿದರು. ಅವರ ಎಸೆತಗಳನ್ನು ಕೆ.ಎಲ್. ರಾಹುಲ್, ಯಶಸ್ವಿ ಜೈಸ್ವಾಲ್, ಧ್ರುವ ಜುರೇಲ್ ಮತ್ತು ದೇವದತ್ತ ಪಡಿಕ್ಕಲ್ ಅವರು ಎದುರಿಸಿದರು. ಇದರೊಂದಿಗೆ ಪಡಿಕ್ಕಲ್ ಅವರು ಭಾರತದ ಬಳಗದಲ್ಲಿ ಸೇರ್ಪಡೆಗೊಂಡಿರುವುದು ಖಚಿತವಾಯಿತು.
ಆದರೆ ಈ ನೆಟ್ಸ್‌ನಲ್ಲಿ ಪ್ರಮುಖವಾಗಿ ಕಣ್ಮನ ಸೆಳೆದಿದ್ದು ನಾಯಕ ಮತ್ತು ವೇಗಿ ಜಸ್‌ಪ್ರೀತ್ ಬೂಮ್ರಾ ಮತ್ತು ಬ್ಯಾಟರ್ ವಿರಾಟ್ ಕೊಹ್ಲಿ ಅವರ ನಡುವಣ ಹಣಾಹಣಿ. ವಿಶ್ವದ ಅತ್ಯಂತ ಪರಿಣಾಮಕಾರಿ ಮತ್ತು ಬ್ಯಾಟರ್‌ಗಳಿಗೆ ದುಃಸ್ವಪ್ನವಾಗಿರುವ ವೇಗಿ ಮತ್ತು ಶ್ರೇಷ್ಠ ಬ್ಯಾಟರ್ ನಡುವಿನ ಪೈಪೋಟಿ ಅದು.
ನೆಟ್ಸ್‌ಗೆ ಬರುವ ಮುನ್ನ ಕೆಲವು ಬ್ಯಾಟ್‌ಗಳನ್ನು ಪರೀಕ್ಷಿಸಿಕೊಂಡು ಬಂದಿದ್ದ ಕೊಹ್ಲಿ ಅವರ ಆಟವನ್ನು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ತದೇಕಚಿತ್ತದಿಂದ ವೀಕ್ಷಿಸಿದರು. ಅವರೊಂದಿಗೆ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರಕರ್ ಮತ್ತು ಸದಸ್ಯ ಸುಬ್ರತೊ ಬ್ಯಾನರ್ಜಿ ಕೂಡ ಇದ್ದರು. ಅಜಿತ್ ಮತ್ತು ಸುಬ್ರತೊ ಅವರು ಬೂಮ್ರಾ ಜೊತೆಗೆ ಸಮಾಲೋಚನೆ ನಡೆಸಿದರು.
ಪಂದ್ಯದಲ್ಲಿ ಮೂರನೇ ವೇಗಿಯ ಜಾಗ ತುಂಬಲು ಪ್ರಸಿದ್ಧ ಮತ್ತು ಹರ್ಷಿತ್ ರಾಣಾ ಅವರ ನಡುವೆ ಪೈಪೋಟಿ ಇದೆ. ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಅವರೂ ಈ ಇಬ್ಬರೂ ಬೌಲರ್‌ಗಳಿಗೆ ಬಹಳಷ್ಟು ಹೊತ್ತು ಅಭ್ಯಾಸ ಮಾಡಲು ಅವಕಾಶ ಕೊಟ್ಟರು.
‘ಅವರಿಬ್ಬರೂ ತಂಡದಲ್ಲಿರುವುದು ಒಳ್ಳೆಯದು. ಇಬ್ಬರ ಬೌಲಿಂಗ್‌ನಲ್ಲಿಯೂ ವೈವಿಧ್ಯಗಳು ಇವೆ’ ಎಂದು ಮಾರ್ಕೆಲ್ ಹೇಳಿದರು.
ಇಲ್ಲಿಯ ಬೌನ್ಸಿ ಪಿಚ್‌ನಲ್ಲಿ ಅವರಿಬ್ಬರೂ ಪರಿಣಾಮಕಾರಿಯಾಗುವ ಕುರಿತು ಅವರಿಗೆ ವಿಶ್ವಾಸವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.