ADVERTISEMENT

ಐಸಿಸಿ ಟೆಸ್ಟ್ ರ‍್ಯಾಂಕಿಂಗ್; ಎರಡನೇ ಸ್ಥಾನಕ್ಕೆ ಕೊಹ್ಲಿ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2020, 14:44 IST
Last Updated 15 ಡಿಸೆಂಬರ್ 2020, 14:44 IST
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ   

ದುಬೈ (ಪಿಟಿಐ): ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟೆಸ್ಟ್ ಕ್ರಿಕೆಟ್ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಮಂಗಳವಾರ ಐಸಿಸಿಯು ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಕೊಹ್ಲಿ ಒಂದು ಸ್ಥಾನದ ಬಡ್ತಿ ಪಡೆದಿದ್ದಾರೆ. ಭಾರತದ ಬ್ಯಾಟ್ಸ್‌ಮನ್‌ಗಳಾದ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಕ್ರಮವಾಗಿ ಏಳು ಮತ್ತು ಹತ್ತನೇ ಸ್ಥಾನದಲ್ಲಿದ್ದಾರೆ.

ಕೊಹ್ಲಿ ಒಟ್ಟು 886 ಅಂಕಗಳನ್ನು ಗಳಿಸಿದ್ದಾರೆ. ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ 911 ಪಾಯಿಂಟ್ಸ್‌ನೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

ADVERTISEMENT

ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಮೂರನೇ ಸ್ಥಾನಕ್ಕಿಳಿದಿದ್ದಾರೆ. ಮಾರ್ನಸ್ ಲಾಬುಷೇನ್, ಪಾಕಿಸ್ತಾನದ ಬಾಬರ್ ಆಜಂ ಮತ್ತು ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಕ್ರಮವಾಗಿ ನಾಲ್ಕು, ಐದು ಮತ್ತು ಆರನೇ ಸ್ಥಾನದಲ್ಲಿದ್ದಾರೆ.

ಬೌಲರ್‌ಗಳ ವಿಭಾಗದಲ್ಲಿ ಜಸ್‌ಪ್ರೀತ್ ಬೂಮ್ರಾ (779) ಎಂಟನೇ ಮತ್ತು ಆಫ್‌ಸ್ಪಿನ್ನರ್ ಆರ್. ಅಶ್ವಿನ್ (756) ಹತ್ತನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ 904 ಪಾಯಿಂಟ್ಸ್‌ನೊಂದಿಗೆ ಪ್ರಥಮ ಸ್ಥಾನದಲ್ಲಿದ್ದಾರೆ.

ಇಂಗ್ಲೆಂಡ್‌ ತಂಡದ ಸ್ಟುವರ್ಟ್ ಬ್ರಾಡ್ ಎರಡು ಮತ್ತು ನ್ಯೂಜಿಲೆಂಡ್‌ನ ನೀಲ್ ವಾಗ್ನರ್ ಮೂರನೇ ಸ್ಥಾನದಲ್ಲಿದ್ದಾರೆ.

ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಭಾರತದ ರವೀಂದ್ರ ಜಡೇಜ ಮತ್ತು ಆರ್. ಅಶ್ವಿನ್ ಅವರು ಅಗ್ರ ಹತ್ತರಲ್ಲಿ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್‌ ಮೊದಲ ಸ್ಥಾನದಲ್ಲಿದ್ದಾರೆ. ಜಡೇಜ 397 ಅಂಕಗಳೊಂದಿಗೆ ಮೂರನೇ ಮತ್ತು ಅಶ್ವಿನ್ 281 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದ್ದಾರೆ. ವೆಸ್ಟ್‌ ಇಂಡೀಸ್ ತಂಡದ ನಾಯಕ ಜೇಸನ್ ಹೋಲ್ಡರ್ ಎರಡನೇ ಕ್ರಮಾಂಕದಲ್ಲಿದ್ದಾರೆ.

ತಂಡಗಳ ವಿಭಾಗದಲ್ಲಿ ಆಸ್ಟ್ರೇಲಿಯಾ 116 ರೇಟಿಂಗ್ ಪಾಯಿಂಟ್ಸ್‌ನೊಂದಿಗೆ ಮೊದಲ ಹಾಗೂ ಅಷ್ಟೇ ಅಂಕಗಳಿರುವ ನ್ಯೂಜಿಲೆಂಡ್ ಎರಡನೇ ಸ್ಥಾನದಲ್ಲಿದೆ. 114 ಅಂಕಗಳೊಂದಿಗೆ ಭಾರತ ತಂಡವು ಮೂರನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.