ಕಾನ್ಪುರ: ಸುಮಾರು 17 ವರ್ಷಗಳ ಹಿಂದೆ, ಈ ಇಬ್ಬರು ಆಟಗಾರರು ವಿರಾಟ್ ಕೊಹ್ಲಿ ಅವರೊಂದಿಗೆ ಭಾರತ 19 ವರ್ಷದೊಳಗಿನವರ ತಂಡದಲ್ಲಿ ಆಡಿದ್ದರು. ಜೂನಿಯರ್ ವಿಶ್ವಕಪ್ ಗೆದ್ದ ತಂಡದಲ್ಲೂ ಜೊತೆಯಾಗಿದ್ದರು. ಈಗ ಈ ಇಬ್ಬರು ಆಟಗಾರರು– ತನ್ಮಯ್ ಶ್ರೀವಾಸ್ತವ ಮತ್ತು ಅಜಿತೇಶ್ ಅರ್ಗಾಲ್– ಅಂಪೈರ್‌ಗಳಾಗಿದ್ದಾರೆ.
ಬೇರೆ ಪಾತ್ರದಲ್ಲಿ ಮತ್ತೆ ಒಟ್ಟಿಗೆ ಮೈದಾನಕ್ಕಿಳಿಯುವ ಯೋಚನೆಯನ್ನೂ ಆಗ ತನ್ಮಯ್– ಅಜಿತೇಶ್ ಮಾಡಿರಲಿಕ್ಕಿಲ್ಲ. ಆದರೆ ಆಸ್ಟ್ರೇಲಿಯಾ ‘ಎ’ ವಿರುದ್ಧ ಕಾನ್ಪುರದಲ್ಲಿ ಇತ್ತೀಚೆಗೆ ನಡೆದ ಮೂರು ಏಕದಿನ ಪಂದ್ಯಗಳಲ್ಲಿ 35 ವರ್ಷ ವಯಸ್ಸಿನ ತನ್ಮಯ್ ಮತ್ತು 37 ವರ್ಷ ವಯಸ್ಸಿನ ಅಜಿತೇಶ್ ಇಬ್ಬರೂ ಆನ್‌ಫೀಲ್ಡ್ ಅಂಪೈರ್‌ಗಳಾಗಿ ಕಾರ್ಯನಿರ್ವಹಿಸಿದ್ದು ಗಮನಸೆಳೆದಿದೆ.
ಮೀಡಿಯಂ ಪೇಸರ್ ಆಗಿದ್ದ ಅಜಿತೇಶ್ ಅವರು ದಕ್ಷಿಣ ಆಫ್ರಿಕಾ ವಿರುದ್ಧ 19 ವರ್ಷದೊಳಗಿನವರ ವಿಶ್ವಕಪ್ ಫೈನಲ್‌ನಲ್ಲಿ ‘ಪಂದ್ಯದ ಆಟಗಾರ’ ಆಗಿದ್ದರು. ಎಡಗೈ ಬ್ಯಾಟರ್ ತನ್ಮಯ್ ಆರಂಭ ಆಟಗಾರನಾಗಿದ್ದು 262 ರನ್ ಕಲೆಹಾಕಿದ್ದರು.
ಕೊಹ್ಲಿ ಏಕದಿನ ತಂಡದಲ್ಲಿ ಇನ್ನೂ ಆಟಗಾರನಾಗಿ ಉಳಿದಿದ್ದಾರೆ. ತನ್ಮಯ್ ಅವರು ಕಳೆದ ಐಪಿಎಲ್‌ನಲ್ಲಿ ಅಂಪೈರಿಂಗ್ ಮಾಡಿದ್ದರು. ಅದಕ್ಕಿಂತ ಮೊದಲು ಆರ್‌ಸಿಬಿ ತಂಡದ ಪ್ರತಿಭಾಶೋಧ ತಂಡದಲ್ಲಿದ್ದರು. ತನ್ಮಯ್ ಮತ್ತು ಅಜಿತೇಶ್ ಇಬ್ಬರೂ 2023 ರಲ್ಲಿ ಬಿಸಿಸಿಐ ಅಂಪೈರಿಂಗ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದರು. ಈಗಾಗಲೇ ರಣಜಿ ಟ್ರೋಫಿ, ವಿಜಯ್ ಹಜಾರೆ ಮತ್ತು ಮುಷ್ತಾಕ್ ಅಲಿ ಟ್ರೋಫಿ ಪಂದ್ಯಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಈಗ ಆಸ್ಟ್ರೇಲಿಯಾ ಎ ವಿರುದ್ಧದ ಪಂದ್ಯ ಅವರ ಪಾಲಿಗೆ ಅತಿ ಮಹತ್ವದ್ದೆನಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.