ADVERTISEMENT

ವರ್ಷದ ಟಿ20 ತಂಡ: ಕೊಹ್ಲಿ, ಸೂರ್ಯ, ಪಾಂಡ್ಯಗೆ ಸ್ಥಾನ

ಐಸಿಸಿ ಟಿ20 ತಂಡ: ಮಹಿಳೆಯರಲ್ಲಿ ಭಾರತದ ನಾಲ್ವರಿಗೆ ಸ್ಥಾನ

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 16:25 IST
Last Updated 23 ಜನವರಿ 2023, 16:25 IST
ವಿರಾಟ್‌ ಕೊಹ್ಲಿ
ವಿರಾಟ್‌ ಕೊಹ್ಲಿ   

ದುಬೈ (ಪಿಟಿಐ): ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌ ಮತ್ತು ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರು 2022ರ ಸಾಲಿನ ಐಸಿಸಿ ಪುರುಷರ ‘ವರ್ಷದ ಟಿ20 ತಂಡ’ ದಲ್ಲಿ ಸ್ಥಾನ ಪಡೆದಿದ್ದಾರೆ. ಮಹಿಳಾ ತಂಡದಲ್ಲಿ ಭಾರತದ ನಾಲ್ವರಿಗೆ ಅವಕಾಶ ದೊರೆತಿದೆ.

ಏಷ್ಯಾ ಕಪ್‌ ಟೂರ್ನಿಯಲ್ಲಿ ಹಳೆಯ ಲಯಕ್ಕೆ ಮರಳಿದ್ದ ಕೊಹ್ಲಿ ಐದು ಪಂದ್ಯಗಳಿಂದ 276 ರನ್‌ ಕಲೆಹಾಕಿದ್ದರು. ಅಫ್ಗಾನಿಸ್ತಾನ ವಿರುದ್ಧ ಮೂರಂಕಿಯ ಗಡಿ ದಾಟಿ ಶತಕದ ಬರ ನೀಗಿಸಿದ್ದರು. ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಅಮೋಘ ಆಟವಾಡಿ 82 ರನ್‌ ಗಳಿಸಿದ್ದರಲ್ಲದೆ, ಟೂರ್ನಿಯಲ್ಲಿ ಒಟ್ಟು 296 ರನ್‌ ಪೇರಿಸಿದ್ದರು.

ಸೂರ್ಯಕುಮಾರ್‌ ಅವರು 2022ರ ಋತುವಿನಲ್ಲಿ 1,164 ರನ್‌ ಕಲೆಹಾಕಿದ್ದರು. ಎರಡು ಶತಕ ಮತ್ತು ಒಂಬತ್ತು ಅರ್ಧಶತಕ ಗಳಿಸಿದ್ದರು. ಮಾತ್ರವಲ್ಲ, ವಿಶ್ವ ರ‍್ಯಾಂಕಿಂಗ್‌ನಲ್ಲಿ ಟಿ20 ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದರು.

ADVERTISEMENT

11 ಸದಸ್ಯರ ತಂಡವನ್ನು ಮುನ್ನಡೆಸುವ ಗೌರವ ಇಂಗ್ಲೆಂಡ್‌ನ ಜೋಸ್‌ ಬಟ್ಲರ್‌ಗೆ ಲಭಿಸಿದೆ. ಪಾಕಿಸ್ತಾನದ ಮೊಹಮ್ಮದ್‌ ರಿಜ್ವಾನ್‌ ಮತ್ತು ಹ್ಯಾರಿಸ್‌ ರವೂಫ್‌ ಅವರು ತಂಡದಲ್ಲಿದ್ದಾರೆ.

ಐಸಿಸಿ ವರ್ಷದ ಮಹಿಳಾ ತಂಡದಲ್ಲಿ ಭಾರತದ ಸ್ಮೃತಿ ಮಂದಾನ, ದೀಪ್ತಿ ಶರ್ಮಾ, ರಿಚಾ ಘೋಷ್‌ ಮತ್ತು ರೇಣುಕಾ ಸಿಂಗ್‌ ಅವರಿಗೆ ಸ್ಥಾನ ಲಭಿಸಿದೆ.

ಐಸಿಸಿ ವರ್ಷದ ಟಿ20 ತಂಡ: ಪುರುಷರು: ಜೋಸ್‌ ಬಟ್ಲರ್‌ (ನಾಯಕ/ ವಿಕೆಟ್‌ ಕೀಪರ್‌), ಮೊಹಮ್ಮದ್‌ ರಿಜ್ವಾನ್‌, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್, ಗ್ಲೆನ್‌ ಫಿಲಿಪ್ಸ್‌, ಸಿಕಂದರ್‌ ರಜಾ, ಹಾರ್ದಿಕ್‌ ಪಾಂಡ್ಯ, ಸ್ಯಾಮ್‌ ಕರನ್, ವಣಿಂದು ಹಸರಂಗ, ಹ್ಯಾರಿಸ್‌ ರವೂಫ್, ಜೋಶ್ ಲಿಟ್ಲ್‌

ಮಹಿಳೆಯರು: ಸೋಫಿ ಡಿವೈನ್ (ನಾಯಕಿ), ಸ್ಮೃತಿ ಮಂದಾನ, ಬೆಥ್‌ ಮೂನಿ, ಆಶ್ ಗಾರ್ಡನರ್, ತಹ್ಲಿಯ ಮೆಕ್‌ಗ್ರಾಥ್, ನಿದಾ ದರ್‌, ದೀಪ್ತಿ ಶರ್ಮಾ, ರಿಚಾ ಘೋಷ್‌ (ವಿಕೆಟ್‌ ಕೀಪರ್), ಸೋಫಿ ಎಕ್ಲೆಸ್ಟೋನ್, ಇನೊಕಾ ರಣವೀರ, ರೇಣುಕಾ ಸಿಂಗ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.