ADVERTISEMENT

ಕೆಪಿಎಲ್‌ ಮ್ಯಾಚ್ ಫಿಕ್ಸಿಂಗ್: ಬೆಳಗಾವಿ ಪ್ಯಾಂಥರ್ಸ್ ಮಾಲೀಕ ಸಿಸಿಬಿ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2019, 18:38 IST
Last Updated 20 ಸೆಪ್ಟೆಂಬರ್ 2019, 18:38 IST
 ಅಲಿ ಅಸ್ಪರ್
ಅಲಿ ಅಸ್ಪರ್   

ಬೆಂಗಳೂರು: ‘ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಕ್ರಿಕೆಟ್‌ ಪಂದ್ಯಗಳಲ್ಲೂ ಮ್ಯಾಚ್ ಫಿಕ್ಸಿಂಗ್‌ ನಡೆದಿದೆ’ ಎಂಬ
ಆಘಾತಕಾರಿ ಸಂಗತಿ ಹೊರಬಿದ್ದಿದೆ. ಆ ಸಂಬಂಧ ‘ಬೆಳಗಾವಿ ಪ್ಯಾಂಥರ್ಸ್’ ತಂಡದ ಮಾಲೀಕ ಅಲಿ ಅಶ್ಫಾಕ್ ತಾರ್ ಅವರನ್ನು ಇಲ್ಲಿನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಉದ್ಯಮಿಯೂ ಆಗಿರುವ ಅಲಿ, ಜಯನಗರ ನಾಲ್ಕನೇ ಹಂತದಲ್ಲಿ ತಂಡದ ಕಚೇರಿ ತೆರೆದಿದ್ದಾರೆ. ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್‌ ಹಾಗೂ ಬೆಟ್ಟಿಂಗ್‌ನಲ್ಲಿ ಅವರು ಭಾಗಿಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಹೀಗಾಗಿ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ’ ಎಂದು ಸಿಸಿಬಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಬುಕ್ಕಿಗಳ ಜೊತೆ ಒಡನಾಟ: ‘ಇದೇ ಆಗಸ್ಟ್ 16ರಿಂದ 31ರವರೆಗೆ ರಾಜ್ಯದಾದ್ಯಂತ ಕೆಪಿಎಲ್ ಪಂದ್ಯಾವಳಿಗಳು ನಡೆದಿದ್ದವು. ಈ ಅವಧಿಯಲ್ಲೇಅಲಿ ಅಶ್ಫಾಕ್ತಾರ್, ಇತರೆ ತಂಡಗಳ ಆಟಗಾರರ ಜೊತೆ ಉತ್ತಮ ಸಂಬಂಧವಿಟ್ಟುಕೊಂಡಿದ್ದರು. ಮುಂಬೈನಲ್ಲಿರುವ ಕೆಲ ಕ್ರಿಕೆಟ್ ಬುಕ್ಕಿಗಳ ಜೊತೆ ಒಡನಾಟವಿಟ್ಟುಕೊಂಡಿದ್ದ ಬಗ್ಗೆಯೂ ಮಾಹಿತಿ ಇದೆ’ ಎಂದು ಅಧಿಕಾರಿ ಹೇಳಿದರು.

ADVERTISEMENT

‘ಮುಂಬೈ ಬುಕ್ಕಿಯೊಬ್ಬನ ಚಲನವಲನದ ಮೇಲೆ ನಿಗಾ ಇರಿಸಲಾಗಿತ್ತು. ಅದರಿಂದಲೇ ಅಲಿ ಅಶ್ಫಕ್ ತಾರ್‌ ಅವರ ಬಗ್ಗೆ ಮಾಹಿತಿ ಸಿಕ್ಕಿದೆ. ಅವರಿಗೂ ಬುಕ್ಕಿಗೂ ಇರುವ ಸಂಬಂಧವೇನು ಎಂಬುದು ತಿಳಿಯಬೇಕಿದೆ’ ಎಂದರು.

ಹಲವು ಪಂದ್ಯಗಳು ಫಿಕ್ಸಿಂಗ್:‘ಕೆಪಿಎಲ್‌ನ ಹಲವು ಪಂದ್ಯಗಳಿಗೆ ಮ್ಯಾಚ್ ಫಿಕ್ಸಿಂಗ್ ಆಗಿರುವ ಬಗ್ಗೆ ಬಾತ್ಮೀದಾರರೊಬ್ಬರು ಮಾಹಿತಿ ನೀಡಿದ್ದಾರೆ. ಅದು ನಿಜವೇ? ಎಂಬುದನ್ನು ತಿಳಿದುಕೊಳ್ಳುತ್ತಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.