ವಿಶ್ವಕಪ್ ಟ್ರೋಫಿ ಜೊತೆ ಭಾರತ ಮಹಿಳಾ ತಂಡದ ಆಟಗಾರ್ತಿ ಕ್ರಾಂತಿ ಗೌಡ್.
ಚಿತ್ರ: @krantigaud
ನವದೆಹಲಿ: ‘ಕ್ರಿಕೆಟ್ ಆಡುತ್ತಿದ್ದ ಹುಡುಗರಿಗೆ ಓರ್ವ ಆಟಗಾರನ ಕೊರತೆ ಇತ್ತು. ಆ ಕಾರಣಕ್ಕೆ ಅವರು ನನ್ನನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡರು. ಅದು ಕ್ರಿಕೆಟ್‌ನಲ್ಲಿ ನನ್ನ ಮೊದಲ ಹೆಜ್ಜೆಯಾಗಿತ್ತು. ಅಲ್ಲಿಯವರೆಗೂ ಮೈದಾನದಿಂದ ಹೊರಗೆ ಕುಳಿತು ಕ್ರಿಕೆಟ್ ನೋಡುತ್ತಿದ್ದೆ’ ಎಂದು ಮಧ್ಯಪ್ರದೇಶದ ಘುವರಾ ಹಳ್ಳಿಯಲ್ಲಿ ನಡೆದ ಘಟನೆಯನ್ನು ಭಾರತ ಮಹಿಳಾ ತಂಡದ ಯುವ ಬೌಲರ್ ಕ್ರಾಂತಿ ಗೌಡ್ ನೆನೆಪಿಸಿಕೊಂಡಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಗೂ ಮೊದಲು ಮಾತನಾಡಿದ ಕ್ರಾಂತಿ ಗೌಡ್, ‘ಮಹಿಳಾ ಕ್ರಿಕೆಟ್ ತಂಡ ಇದೆ ಎಂಬುದೇ ನನಗೆ ತಿಳಿದಿರಲಿಲ್ಲ. ಅಂತಹ ಪರಿಸ್ಥಿಯಿಂದ ನನ್ನ ಕ್ರಿಕೆಟ್ ಪ್ರಯಾಣ ಪ್ರಾರಂಭವಾಗಿತ್ತು. ಇದು ನನ್ನ ಮೊದಲ ವಿಶ್ವಕಪ್, ಇದರಲ್ಲೇ ನಾವು ವಿಶ್ವ ಚಾಂಪಿಯನ್ ಆಗಿರುವುದು ನನಗೆ ಹೆಮ್ಮೆಯಾಗುತ್ತಿದೆ. ಇದು ನನಗೆ, ನನ್ನ ಕುಟುಂಬಕ್ಕೆ ಮತ್ತು ಇಡೀ ರಾಷ್ಟ್ರಕ್ಕೆ ಹೆಮ್ಮೆಯ ವಿಷಯ’ ಎಂದರು.
ಸಂಪ್ರದಾಯವಾದಿ ಗ್ರಾಮೀಣ ಹಿನ್ನೆಲೆಯಿಂದ ಬಂದ ಗೌಡ್, ತಾವು ಆರಂಭಿಕ ದಿನಗಳಲ್ಲಿ ಎದುರಿಸಿದ ಸಾಮಾಜಿಕ ಪ್ರತಿರೋಧಗಳನ್ನು ವಿವರಿಸಿದ್ದಾರೆ. ತಮ್ಮನ್ನು ಕೀಳಾಗಿ ಕಂಡ ಅದೇ ಹಳ್ಳಿಯ ಜನರು ಇಂದು ನಮ್ಮ ಯಶಸ್ಸನ್ನು ಶ್ಲಾಘಿಸುತ್ತಿದ್ದಾರೆ ಎಂದಿದ್ದಾರೆ.
‘ನಾನು ಒಂದು ಸಣ್ಣ ಹಳ್ಳಿಯಿಂದ ಬಂದವಳು. ಅಲ್ಲಿ ಹುಡುಗಿಯರಿಗೆ ಆಟವಾಡಲು ಬಿಡುತ್ತಿರಲಿಲ್ಲ. ನಾನು ಆಟವಾಡಲು ಹುಡುಗರ ಜೊತೆಗೆ ಹೋದಾಗ, ನೀವು ಏಕೆ ಅವಳನ್ನು ಆಟವಾಡಲು ಕಳಿಸುತ್ತಿದ್ದೀರಿ? ಎಂದು ಕುಟುಂಬದವರನ್ನು ಕೇಳುತ್ತಿದ್ದರು. ಆದರೆ ಇಂದು ಅವರೆಲ್ಲ ನನ್ನ ಪ್ರದರ್ಶನ ಕಂಡು ಚಪ್ಪಾಳೆ ತಟ್ಟುತ್ತಿದ್ದಾರೆ’.
‘ಈ ಹಿಂದೆ ನನ್ನನ್ನು ಮತ್ತು ನನ್ನ ಕುಟುಂಬವನ್ನು ಹೀಯಾಳಿಸಿ, ಅವಮಾನಿಸಿದವರು ಇಂದು ನಮ್ಮನ್ನು ಶ್ಲಾಘಿಸುತ್ತಿದ್ದಾರೆ. ಕ್ರಿಕೆಟ್‌ನಲ್ಲಿ ಮಹಿಳಾ ತಂಡ ಕೂಡ ಸುಧಾರಣೆ ಕಂಡಿದೆ. ಈ ವಿಶ್ವಕಪ್ ಗೆಲುವಿನ ಬಳಿಕ ಅದರ ಕೀರ್ತಿ ಇನ್ನಷ್ಟು ಹೆಚ್ಚಾಗಿದೆ’ ಎಂದು ಅವರು ಹೇಳಿದರು.
ಭಾರತದ ಪರ ಚೊಚ್ಚಲ ಏಕದಿನ ವಿಶ್ವಕಪ್ ಆಡಿದ ಕ್ರಾಂತಿ ಗೌಡ್, ಟೂರ್ನಿಯಲ್ಲಿ 18.55ರ ಸರಾಸರಿಯಲ್ಲಿ 9 ವಿಕೆಟ್ ಪಡೆದಿದ್ದಾರೆ. ಮಾತ್ರವಲ್ಲ, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 3 ವಿಕೆಟ್ ಪಡೆದು ಮಿಂಚಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.