ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಗತವೈಭವವನ್ನು ಮರಳಿ ತರಲು ತಾವು ಬದ್ಧರಾಗಿರುವುದಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಆಡಳಿತ ಸಮಿತಿಯ ಚುನಾವಣೆಯಲ್ಲಿ ಸ್ಪರ್ಧಿಸಲಿರುವ, ಭಾರತ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಮತ್ತು ತಂಡವು ಘೋಷಿಸಿತು.
ಬುಧವಾರ ಸಂಜೆ ಸುದ್ದಿಗಾರರು ಕಿಕ್ಕಿರಿದು ಸೇರಿದ್ದ ಪತ್ರಿಕಾಗೋಷ್ಠಿಯಲ್ಲಿ ಪ್ರಸಾದ್ ಮತ್ತು ಕೆಎಸ್‌ಸಿಎ ಮಾಜಿ ಖಜಾಂಚಿ ವಿನಯ್ ಮೃತ್ಯುಂಜಯ್ ಅವರು ‘ಪ್ರಣಾಳಿಕೆ’ ಬಿಡುಗಡೆ ಮಾಡಿದರು.
‘ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ 50 ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ಪ್ರತಿಷ್ಠಿತ ಅಂತರರಾಷ್ಟ್ರೀಯ ಕ್ರೀಡಾಂಗಣ ಇದಾಗಿದೆ. ಇಲ್ಲಿ ಮತ್ತೆ ಬಿಸಿಸಿಐ ಹಾಗೂ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ನಡೆಯುವಂತೆ ಮಾಡಲು ಬದ್ಧರಾಗಿದ್ದೇವೆ’ ಎಂದು ಈ ಜೋಡಿಯು ಘೋಷಣೆ ಮಾಡಿತು.
ಕಳೆದ ಜೂನ್ 4ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿತ್ತು. ಅದರಲ್ಲಿ 11 ಅಭಿಮಾನಿಗಳು ಸಾವನ್ನಪ್ಪಿದ್ದರು. ಈ ಘಟನೆಯ ನಂತರ ಕ್ರೀಡಾಂಗಣದಲ್ಲಿ ಯಾವುದೇ ಕ್ರಿಕೆಟ್ ಪಂದ್ಯಗಳನ್ನು ನಡೆಸಲೂ ರಾಜ್ಯ ಸರ್ಕಾರ ಅನುಮತಿ ನೀಡುತ್ತಿಲ್ಲ. ಅದಕ್ಕಾಗಿ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯನ್ನು ಮೈಸೂರಿಗೆ ಸ್ಥಳಾಂತರಿಸಲಾಗಿದೆ. ಮುಂದಿನ ತಿಂಗಳು ಇಲ್ಲಿ ನಡೆಯಬೇಕಿರುವ ಮಹಿಳಾ ವಿಶ್ವಕಪ್ ಟೂರ್ನಿಯ ಪಂದ್ಯಗಳಿಗೂ ಅನಿಶ್ಚಿತತೆ ಕಾಡುತ್ತಿದೆ.
‘ಆ ಘಟನೆಯು (ಕಾಲ್ತುಳಿತ) ನಡೆದಿದ್ದು ದುರದೃಷ್ಟಕರ. ಅಂತಹ ದುರ್ಘಟನೆ ನಡೆಯಬಾರದಿತ್ತು. ಅದಕ್ಕಾಗಿ ನಮಗೆ ವಿಷಾದವಿದೆ. ಚಿನ್ನಸ್ವಾಮಿ ಕ್ರೀಡಾಂಗಣವು ಕರ್ನಾಟಕ ಕ್ರಿಕೆಟ್‌ನ ಮುಕುಟ ಮಣಿಯಾಗಿದೆ. ನಮ್ಮ ತಂಡವು ಅಧಿಕಾರಕ್ಕೆ ಬಂದರೆ ಸರ್ಕಾರ ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳೊಂದಿಗೆ ಮತ್ತೆ ಉತ್ತಮ ಬಾಂಧವ್ಯವನ್ನು ಮರುಸ್ಥಾಪಿಸುತ್ತೇವೆ. ಅವುಗಳ ಮನವೊಲಿಸಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಕ್ರಿಕೆಟ್ ಅರಳುವಂತೆ ಮಾಡುತ್ತೇವೆ’ ಎಂದು ಪ್ರಸಾದ್ ಹೇಳಿದರು.
ಕೆಎಸ್‌ಸಿಎ ಆಡಳಿತ ಸಮಿತಿಯ ಚುನಾವಣೆಯಲ್ಲಿ ಸ್ಪರ್ಧಿಸಲು 16 ಜನರ ತಂಡವನ್ನು ರಚಿಸಲಾಗುವುದು ಎಂದು ಹೇಳಿದ ಪ್ರಸಾದ್ ‘ನಾನು ಮುಖ್ಯ ಆಯ್ಕೆಗಾರ’ ಎಂದರು. ರಾಜ್ಯದ ದಿಗ್ಗಜ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಸೇರಿದಂತೆ ಹಲವು ಪ್ರಮುಖರು ಬೆಂಬಲಿಸುವ ಕುರಿತು ನಿರೀಕ್ಷೆ ವ್ಯಕ್ತಪಡಿಸಿದರು.
‘ಕೆಎಸ್‌ಸಿಎ ವಲಯಗಳಲ್ಲಿ ಕ್ರಿಕೆಟ್ ಬೆಳವಣಿಗೆ ಮತ್ತು ಮೂಲಸೌಲಭ್ಯ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಎಲ್ಲ ಜಿಲ್ಲೆಗಳಲ್ಲಿ ವಯೋಮಿತಿಯ ಕ್ರಿಕೆಟ್‌ನಲ್ಲಿ ಪ್ರತಿಭಾವಂತರನ್ನು ಪ್ರೋತ್ಸಾಹಿಸುವುದು. ಅವಕಾಶಗಳನ್ನು ವಿಕೇಂದ್ರಿಕರಿಸಲು ಬಿಸಿಸಿಐ ಪಂದ್ಯಗಳನ್ನು ವಲಯ ಕೇಂದ್ರಗಳಲ್ಲಿ (ಬೆಂಗಳೂರಿನಿಂದ ಹೊರಗೆ) ಆಯೋಜಿಸಲು ಒತ್ತು ನೀಡುವುದು. ಎಲ್ಲ ವಲಯಗಳಲ್ಲಿ ಟರ್ಫ್ ಮೈದಾನಗಳ ಸಂಖ್ಯೆ ಹೆಚ್ಚಿಸುವುದು. ಮಹಿಳಾ ಕ್ರಿಕೆಟ್ ಅಭಿವೃದ್ಧಿಗೂ ಪ್ರೋತ್ಸಾಹ ನೀಡಲು ಆದ್ಯತೆ ನೀಡುತ್ತೇವೆ’ ಎಂದರು.
‘ಬೇರೆ ಬೇರೆ ವಯೋಮಿತಿಯ ಟೂರ್ನಿಗಳನ್ನು ಅಚ್ಚುಕಟ್ಟಾಗಿ ಆಯೋಜಿಸುವುದು. ಆಯ್ಕೆ ಪ್ರಕ್ರಿಯೆಯನ್ನು ಉತ್ತಮಗೊಳಿಸುವುದು. ಮಾಜಿ ಕ್ರಿಕೆಟಿಗರ ಮುಂದಾಳತ್ವದಲ್ಲಿ ಕರ್ನಾಟಕ ಕ್ರಿಕೆಟ್ ಅಕಾಡೆಮಿಯನ್ನು ಪುನರುಜ್ಜೀವನಗೊಳಿಸುವುದು. ಮಾಜಿ ಕ್ರಿಕೆಟಿಗರನ್ನು ಮಾರ್ಗದರ್ಶಕರು ಹಾಗೂ ತರಬೇತುದಾರರನ್ನಾಗಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುವುದು. ವಲಯಗಳಲ್ಲಿ ಅಕಾಢೆಮಿಗಳ ಸ್ಥಾಪನೆ. ಅಂಪೈರ್, ರೆಫರಿ, ಸ್ಕೋರರ್ ಮತ್ತು ನೆರವು ಸಿಬ್ಬಂದಿಗಳಿಗೆ ವಿಶೇಷ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುವುದು’ ಎಂದು ಪ್ರಸಾದ್ ತಮ್ಮ ಯೋಜನೆಗಳನ್ನು ವಿವರಿಸಿದರು.
ಕ್ರೀಡಾಂಗಣ ಸ್ಥಳಾಂತರ ಆಗಲು ಬಿಡಲ್ಲ: ವಿನಯ್
‘ಚಿನ್ನಸ್ವಾಮಿ ಕ್ರೀಡಾಂಗಣವು ಐತಿಹಾಸಿಕ ಕ್ರಿಕೆಟ್ ತಾಣವಾಗಿದೆ. ನಾವು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧಿಕಾರದ ಚುಕ್ಕಾಣಿ ಹಿಡಿದರೆ ಸ್ಮಾರ್ಟ್ ಕ್ರೀಡಾಂಗಣವನ್ನಾಗಿ ಉನ್ನತ ದರ್ಜೆಗೇರಿಸುತ್ತೇವೆ. ಯಾವುದೇ ಕಾರಣಕ್ಕೂ ನಗರದಿಂದ ಹೊರಗೆ ಸ್ಥಳಾಂತರವಾಗಲು ಆಸ್ಪದ ಕೊಡುವುದಿಲ್ಲ’ ಎಂದು ಕೆಎಸ್‌ಸಿಎ ಮಾಜಿ ಖಜಾಂಚಿ ವಿನಯ್ ಮೃತ್ಯುಂಜಯ ಹೇಳಿದರು.
‘ಕಾಲ್ತುಳಿತ ಪ್ರಕರಣದ ತನಿಖೆಯು ಮುಗಿದ ನಂತರ ವರದಿಯನ್ನು ಪಡೆದು ಕೂಲಂಕಷವಾಗಿ ಅಧ್ಯಯನ ನಡೆಸಲಾಗುವುದು. ತನಿಖಾ ಆಯೋಗ ಮತ್ತು ಸರ್ಕಾರ ಶಿಫಾರಸು ಮಾಡಿದ ಸುರಕ್ಷತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವುದು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಪುನರಾರಂಭಿಸಲು ಅಗತ್ಯ ಅನುಮತಿಗಳನ್ನು ಪಡೆಯುವುದು. ನಿಗದಿತ ವೇಳಾಪಟ್ಟಿಯ ಪ್ರಕಾರ ಟೂರ್ನಿಗಳನ್ನು ಆಯೋಜಿಸಲಾಗುವುದು’ ಎಂದೂ ಅವರು ಹೇಳಿದರು. ‘ಕ್ರೀಡಾಂಗಣವನ್ನು ಉನ್ನತ ದರ್ಜೆಗೇರಿಸಲಾಗುವುದು. ಮೂಲಸೌಲಭ್ಯಗಳನ್ನು ಅಭಿವೃದ್ದಿಪಡಿಸಲಾಗುವುದು’ ಎಂದರು.
Cut-off box - null
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.