ADVERTISEMENT

ಆರು ರನ್‌ ಕೊಡಬಾರದಿತ್ತು: ಧರ್ಮಸೇನಾ

​ಪ್ರಜಾವಾಣಿ ವಾರ್ತೆ
Published 21 ಜುಲೈ 2019, 20:00 IST
Last Updated 21 ಜುಲೈ 2019, 20:00 IST
ಕುಮಾರ ಧರ್ಮಸೇನಾ
ಕುಮಾರ ಧರ್ಮಸೇನಾ   

ಕೊಲಂಬೊ (ಪಿಟಿಐ): ‘ವಿಶ್ವಕಪ್‌ ಕ್ರಿಕೆಟ್‌ನ ಫೈನಲ್‌ ಪಂದ್ಯದ ವೇಳೆ ಇಂಗ್ಲೆಂಡ್‌ಗೆ ಆರು ರನ್‌ ನೀಡಬಾರದಿತ್ತು. ಅಂದು ನನ್ನಿಂದ ದೊಡ್ಡ ಪ್ರಮಾದವಾಯಿತು. ಹಾಗಂತ ಅಂದು ನೀಡಿದ ತೀರ್ಪಿಗಾಗಿ ವಿಷಾಧ ವ್ಯಕ್ತಪಡಿಸುವುದಿಲ್ಲ’ ಎಂದು ಶ್ರೀಲಂಕಾದ ಅಂಪೈರ್‌ ಕುಮಾರ ಧರ್ಮಸೇನಾ ತಿಳಿಸಿದ್ದಾರೆ.

ಜುಲೈ 14ರಂದು ನಡೆದಿದ್ದ ಫೈನಲ್‌ನಲ್ಲಿ ನ್ಯೂಜಿಲೆಂಡ್‌ ತಂಡದ ಮಾರ್ಟಿನ್‌ ಗಪ್ಟಿಲ್‌, ಡೀಪ್‌ ವಿಭಾಗದಿಂದ ಎಸೆದ ಚೆಂಡು ಇಂಗ್ಲೆಂಡ್‌ ತಂಡದ ಬೆನ್‌ ಸ್ಟೋಕ್ಸ್‌ ಅವರ ಬ್ಯಾಟಿಗೆ ತಾಗಿ ಬೌಂಡರಿ ಗೆರೆ ದಾಟಿತ್ತು. ಆಗ ಸ್ಟೋಕ್ಸ್‌ ಮತ್ತು ಇನ್ನೊಂದು ತುದಿಯಲ್ಲಿದ್ದ ಆದಿಲ್‌ ರಶೀದ್‌ ಎರಡನೇ ರನ್‌ ಪೂರೈಸಿರಲಿಲ್ಲ. ಹೀಗಿದ್ದರೂ ಧರ್ಮಸೇನಾ, ಐದರ ಬದಲು ಆರು ರನ್‌ ನೀಡಿದ್ದರು.

‘ಮನೆಗೆ ಬಂದು ಟಿ.ವಿ.ರಿಪ್ಲೆ ನೋಡಿದಾಗ ನನ್ನಿಂದ ತಪ್ಪಾಗಿರುವುದು ಅರಿವಿಗೆ ಬಂತು. ಆ ಕ್ಷಣದಲ್ಲಿ ಮೂರನೇ ಅಂಪೈರ್‌ ನೆರವು ಪಡೆಯುವುದು ಸಾಧ್ಯವಿರಲಿಲ್ಲ. ಅದಕ್ಕೆ ಐಸಿಸಿ ನಿಯಮದಲ್ಲಿ ಅವಕಾಶವೂ ಇರಲಿಲ್ಲ. ಲೆಗ್‌ ಅಂಪೈರ್‌ ಮರಾಯಸ್‌ ಎರಾಸ್ಮಸ್‌ ಅವರೊಂದಿಗೆ ಚರ್ಚಿಸಿದೆ. ರೆಫರಿ ಮತ್ತು ಇತರ ಅಂಪೈರ್‌ಗಳು ನಮ್ಮಿಬ್ಬರ ಸಂಭಾಷಣೆಯನ್ನು ಆಲಿಸಿದ್ದರು. ಆದರೆ ಅವರ‍್ಯಾರು ಟಿ.ವಿ.ರಿಪ್ಲೆ ಪರಿಶೀಲಿಸುವ ಗೋಜಿಗೆ ಹೋಗಲಿಲ್ಲ. ಬ್ಯಾಟ್ಸ್‌ಮನ್‌ಗಳು ಎರಡನೇ ರನ್‌ ಪೂರೈಸಿದ್ದಾರೆ ಎಂದೇ ಸಲಹೆ ನೀಡಿದ್ದರು. ಹೀಗಾಗಿ ಇಂಗ್ಲೆಂಡ್‌ಗೆ ಆರು ರನ್‌ ಕೊಟ್ಟೆ. ನಾನು ನೀಡಿದ ತೀರ್ಪಿನ ಬಗ್ಗೆ ಐಸಿಸಿಯೇ ಮೆಚ್ಚುಗೆ ವ್ಯಕ್ತಪಡಿಸಿತ್ತು’ ಎಂದಿದ್ದಾರೆ.

ADVERTISEMENT

‘ಟಿ.ವಿ.ರಿಪ್ಲೆ ನೋಡಿ ಟೀಕಿಸುವುದು ಬಹಳ ಸುಲಭ. ಅದಕ್ಕೆಲ್ಲಾ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.