ADVERTISEMENT

ಕಾಮನ್‌ವೆಲ್ತ್ ಕ್ರೀಡಾಕೂಟ: ಆರು ಆಟಗಾರ್ತಿಯರಿಗೆ ಸಿಗದ ವೀಸಾ

ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ತೆರಳಲಿರುವ ಭಾರತ ಮಹಿಳಾ ಕ್ರಿಕೆಟ್ ತಂಡ

​ಪ್ರಜಾವಾಣಿ ವಾರ್ತೆ
Published 22 ಜುಲೈ 2022, 14:17 IST
Last Updated 22 ಜುಲೈ 2022, 14:17 IST
ಹರ್ಮನ್‌ಪ್ರೀತ್ ಕೌರ್ 
ಹರ್ಮನ್‌ಪ್ರೀತ್ ಕೌರ್    

ನವದೆಹಲಿ: ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ತೆರಳಲಿರುವ ಭಾರತ ಮಹಿಳಾ ಕ್ರಿಕೆಟ್ ತಂಡದ ಆರು ಆಟಗಾರ್ತಿಯರಿಗೆ ಇನ್ನೂ ವೀಸಾ ಲಭಿಸಿಲ್ಲ.

ತಂಡವು ಭಾನುವಾರ ಇಂಗ್ಲೆಂಡ್‌ಗೆ ಪ್ರಯಾಣಿಸಬೇಕಿದೆ. 28ರಂದು ಕೂಟವು ಆರಂಭವಾಗಲಿದೆ. ಕ್ರಿಕೆಟ್ ತಂಡವು ಬೆಂಗಳೂರಿನಲ್ಲಿ ನಡೆಯುತ್ತಿರುವ ಶಿಬಿರದಲ್ಲಿ ಅಭ್ಯಾಸ ನಡೆಸಿದ್ದಾರೆ. ಆರು ಆಟಗಾರ್ತಿಯರಿಗೆ ವೀಸಾ ವ್ಯವಸ್ಥೆ ಮಾಡುವಂತೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಭಾರತ ಒಲಿಂಪಿಕ್ ಸಂಸ್ಥೆಗೆ ಮನವಿ ಮಾಡಿದೆ.

‘ಕೆಲವು ವೀಸಾಗಳು ಇಂದು ಬಂದಿವೆ. ಆದರೆ, ಇನ್ನೂ ಆರು ಸದಸ್ಯರ ವೀಸಾ ಬರಬೇಕಿದೆ. ಅದರಲ್ಲಿ ಮೂವರು ನೆರವು ಸಿಬ್ಬಂದಿ ಇದ್ದಾರೆ. ಶನಿವಾರ ಎಲ್ಲ ವೀಸಾಗಳು ಬರಲೇಬೇಕು. ಈ ಪ್ರಕ್ರಿಯೆಯು ನಮ್ಮ ನಿಯಂತ್ರಣದಲ್ಲಿಲ್ಲ. ಬೇಸಿಗೆ ಋತುವಾಗಿರುವುದರಿಂದ ಇಂಗ್ಲೆಂಡ್ ವೀಸಾಗಳಿಗೆ ಬಹುಬೇಡಿಕೆ ಇದೆ’ ಎಂದು ಐಒಎ ಮೂಲಗಳು ತಿಳಿಸಿವೆ.

ADVERTISEMENT

ಕೂಟದಲ್ಲಿ ಆಡಲು 15 ಆಟಗಾರ್ತಿಯರ ತಂಡವನ್ನು ಬಿಸಿಸಿಐ ಈಚೆಗೆ ಪ್ರಕಟಿಸಿದೆ. 29ರಂದು ಆಸ್ಟ್ರೇಲಿಯಾ ಎದುರು ಮೊದಲ ಪಂದ್ಯ ಆಡಲಿದೆ. 31ರಂದು ಪಾಕಿಸ್ತಾನದ ಎದುರು ಹಣಾಹಣಿ ನಡೆಸುವುದು.

ಭಾರತ ತಂಡದ ಚೆಫ್ ಡಿ ಮಿಷನ್ ರಾಜೇಶ್ ಭಂಡಾರಿ ಅವರಿಗೆ ಶುಕ್ರವಾರ ವೀಸಾ ಲಭಿಸಿದೆ. ಡೆಪ್ಯೂಟಿ ಚೆಫ್ ಡಿ ಮಿಷನ್ ಅನಿಲ್ ಧೂಪರ್ ಮತ್ತು ಮಣಿಂದರ್ ಸಿಂಗ್ ಅವರಿಗೆ ಇನ್ನೂ ಲಭಿಸಿಲ್ಲ. ಮೂರನೇ ಡೆಪ್ಯೂಟಿ ಪ್ರಶಾಂತ್ ಖುಷ್ವಾಹ ಅವರಿಗೆ ಲಭಿಸಿದ್ದು ಶುಕ್ರವಾರ ಬೆಳಿಗ್ಗೆ ತೆರಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.