ADVERTISEMENT

ಬೆಟ್ಟಿಂಗ್ ಆ್ಯಪ್‌ ಪ್ರಕರಣ: ಕ್ರಿಕೆಟಿಗ ಯುವಿ, ಉತ್ತಪ್ಪ, ನಟ ಸೋನು ಆಸ್ತಿ ಜಪ್ತಿ

ಪಿಟಿಐ
Published 19 ಡಿಸೆಂಬರ್ 2025, 15:40 IST
Last Updated 19 ಡಿಸೆಂಬರ್ 2025, 15:40 IST
   

ನವದೆಹಲಿ: ಬೆಟ್ಟಿಂಗ್‌ ಆ್ಯಪ್‌ಗೆ ಸಂಬಂಧಿಸಿದ ₹1000 ಕೋಟಿ ಮೌಲ್ಯದ ಅಕ್ರಮ ಹಣವರ್ಗಾವಣೆ ಪ್ರಕರಣದಲ್ಲಿ ಮಾಜಿ ಕ್ರಿಕೆಟಿಗರಾದ ಯುವರಾಜ್ ಸಿಂಗ್‌, ರಾಬಿನ್ ಉತ್ತಪ್ಪ ಹಾಗೂ ಟಿಎಂಸಿ ಮಾಜಿ ಸಂಸದೆ ಮಿಮಿ ಚಕ್ರವರ್ತಿ ಮತ್ತು ನಟ ಸೋನು ಸೂದ್‌ ಅವರ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಮುಟ್ಟುಗೋಲು ಹಾಕಿಕೊಂಡಿದೆ. 

ಅಲ್ಲದೇ, ನಟಿ ನೇಹಾ ಶರ್ಮಾ, ಬಂಗಾಳಿ ಸಿನಿಮಾ ನಟ ಅಂಕುಶ್‌ ಹಾಜ್ರಾ ಮತ್ತು ರೂಪದರ್ಶಿ ಊರ್ವಶಿ ರೌತೇಲ ಅವರ ತಾಯಿಗೆ ಸೇರಿದ ಆಸ್ತಿಯನ್ನೂ ಮಟ್ಟುಗೋಲು ಹಾಕಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ಮಾಹಿತಿ ನೀಡಿದ್ದಾರೆ.

ಮುಟ್ಟುಗೋಲು ಹಾಕಿದ ಆಸ್ತಿಯಲ್ಲಿ ಯುವರಾಜ್‌ ಸಿಂಗ್‌ ಹಾಗೂ ನಟಿ ನೇಹಾ ಶರ್ಮಾ ಅವರ ಆಸ್ತಿಯು ಕ್ರಮವಾಗಿ ₹2.5 ಕೋಟಿ, ₹1.26 ಕೋಟಿ ಮೌಲ್ಯದ್ದಾಗಿದೆ. ಊರ್ವಶಿ ಅವರ ತಾಯಿಗೆ ಸೇರಿದ ಆಸ್ತಿ  ₹2.02 ಕೋಟಿ, ಸೂದ್‌ ಅವರ ಆಸ್ತಿ ಮೌಲ್ಯ ₹1 ಕೋಟಿ ಆಗಿದೆ. ನಟಿ ಮಿಮಿ ಅವರಿಗೆ ಸೇರಿದ ₹59 ಲಕ್ಷ, ಹಾಜ್ರಾ ಅವರ ₹47 ಲಕ್ಷ ಮತ್ತು ಉತ್ತಪ್ಪ ಅವರ ಒಡೆತನದ ₹8.26 ಲಕ್ಷವನ್ನೂ ಮುಟ್ಟುಗೋಲು ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ. 

ADVERTISEMENT

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ಶಿಖರ್‌ ಧವನ್‌ ಹಾಗೂ ಸುರೇಶ್‌ ರೈನಾ ಅವರಿಗೆ ಸೇರಿದ ಒಟ್ಟು ₹11.14 ಕೋಟಿ ಮೌಲ್ಯದ ಆಸ್ತಿಯನ್ನು ಇ.ಡಿ. ಈ ಹಿಂದೆ ಮುಟ್ಟುಗೋಲು ಹಾಕಿಕೊಂಡಿತ್ತು.