ADVERTISEMENT

ಮಹಾರಾಜ ಟ್ರೋಫಿ ಫೈನಲ್‌: ಮಂಗಳೂರು ಡ್ರ್ಯಾಗನ್ಸ್‌ ಚಾಂಪಿಯನ್‌

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2025, 19:45 IST
Last Updated 28 ಆಗಸ್ಟ್ 2025, 19:45 IST
<div class="paragraphs"><p>ಮಂಗಳೂರು ಡ್ರ್ಯಾಗನ್ಸ್‌ ಚಾಂಪಿಯನ್‌</p></div>

ಮಂಗಳೂರು ಡ್ರ್ಯಾಗನ್ಸ್‌ ಚಾಂಪಿಯನ್‌

   

ಮೈಸೂರು: ಬಲಿಷ್ಠ ಹುಬ್ಬಳ್ಳಿ ಟೈಗರ್ಸ್ ಪಡೆಯನ್ನು 154 ರನ್‌ಗಳಿಗೆ ಕಟ್ಟಿಹಾಕಿದ ಮಂಗಳೂರು ಡ್ರ್ಯಾಗನ್ಸ್ ‘ಮಹಾರಾಜ ಟ್ರೋಫಿ’ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಎತ್ತಿ ಹಿಡಿಯಿತು.

ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಫೈನಲ್‌ನಲ್ಲಿ ಗುರಿ ಬೆನ್ನತ್ತಿದ ಮಂಗಳೂರು 10.4 ಓವರ್‌ಗಳಲ್ಲಿ 2 ವಿಕೆಟ್‌ಗೆ 85 ರನ್ ಗಳಿಸಿದ್ದಾಗ ಪಂದ್ಯಕ್ಕೆ ಮಳೆ ಅಡ್ಡಿಯಾಯಿತು. ಒಂದು ಗಂಟೆ ನಂತರವೂ ಮಳೆ ಮುಂದುವರಿದಾಗ ಅಂಪೈರ್‌ಗಳು ಪಂದ್ಯ ಮುಗಿಸುವ ನಿರ್ಣಯ ಕೈಗೊಂಡರು. ವಿಜೆಡಿ ನಿಯಮದಂತೆ ಮಂಗಳೂರು 15 ರನ್‌ ಅಂತರದಿಂದ ಗೆಲುವು ಸಾಧಿಸಿತು. ಮೈದಾನದಲ್ಲಿನ ಮಳೆ ನೀರಿನಲ್ಲೇ ಆಟಗಾರರು ಕುಣಿದು ಕುಪ್ಪಳಿಸಿದರು.

ADVERTISEMENT

ಮಂಗಳೂರು ತಂಡದ ಆರಂಭಿಕರಾದ ಲೋಚನ್ ಗೌಡ (18) ಹಾಗೂ ಬಿ.ಆರ್. ಶರತ್‌ (49 ರನ್‌, 35 ಎ, 4X4, 6X3) ಉತ್ತಮ ಆರಂಭ ಒದಗಿಸಿದರು. ಶರತ್‌ ಅರ್ಧಶತಕದ ಹೊಸ್ತಿಲಲ್ಲಿ ಎಡವಿದರು. ರಿತೇಶ್ ಭಟ್ಕಳ್ 14ಕ್ಕೆ 2 ವಿಕೆಟ್ ಪಡೆದರು.

ಉತ್ತಮ ಆರಂಭ: ನಾಯಕ ದೇವದತ್ತ ಪಡಿಕ್ಕಲ್‌ ಹಾಗೂ ಮೊಹಮ್ಮದ್ ತಾಹಾ ಜೋಡಿಯು ಹುಬ್ಬಳ್ಳಿಗೆ ಕೇವಲ 2.3 ಓವರ್‌ಗಳಲ್ಲಿ 38 ರನ್‌ಗಳ ಅಬ್ಬರದ ಆರಂಭ ಒದಗಿಸಿತು. ಆದರೆ ಪಡಿಕ್ಕಲ್‌, ಸಂತೋಕ್ ಸಿಂಗ್‌ ಎಸೆತದಲ್ಲಿ ಮೇಕ್ನಿಲ್‌ ನೊರೊನಾಗೆ ಮಿಡ್‌ ವಿಕೆಟ್‌ನಲ್ಲಿ ಕ್ಯಾಚಿತ್ತು ನಿರಾಸೆ ಮೂಡಿಸಿದರು. ಉತ್ತಮವಾಗಿ ಆಡುತ್ತಿದ್ದ ತಾಹಾ ಆರನೇ ಓವರ್‌ನಲ್ಲಿ ಮೇಕ್ನಿಲ್‌ ನೊರಾನಗೆ ವಿಕೆಟ್‌ ಒಪ್ಪಿಸುತ್ತಲೇ ಹುಬ್ಬಳ್ಳಿ ಬಳಗದಲ್ಲಿ ಆತಂಕದ ಮೋಡ ಕವಿಯಿತು. ಡ್ರ್ಯಾಗನ್ಸ್‌ನ ಬೌಲರ್‌ಗಳ ಕರಾರುವಕ್‌ ಎಸೆತಗಳ ಎದುರು ಹುಬ್ಬಳ್ಳಿ ಬ್ಯಾಟರ್‌ಗಳು ತಿಣುಕಾಡಿದರು.

ಮತ್ತೊಂದೆಡೆ ಭದ್ರವಾಗಿ ನಿಂತ ಕೆ.ಎಲ್. ಶ್ರೀಜಿತ್ ಅರ್ಧಶತಕದ ಮೂಲಕ ( 52 ರನ್‌, 45 ಎ, 4X4, 6X1 ) ತಂಡಕ್ಕೆ ಆಸರೆ ಆದರು. ತಾಳ್ಮೆಯ ಇನಿಂಗ್ಸ್ ಕಟ್ಟಿದ ಅವರು ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಜೊತೆ ಉತ್ತಮ ಜೊತೆಯಾಟದ ಪ್ರಯತ್ನ ನಡೆಸಿದರು. ಕಡೆಯಲ್ಲಿ ಎಲ್. ಮನ್ವಂತ್‌ಕುಮಾರ್ 15 ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರು.

ಡ್ರ್ಯಾಗನ್ಸ್ ಪರ ಸ್ಪಿನ್‌ ಚಾದು ತೋರಿದ ಸಚಿನ್‌ ಶಿಂಧೆ 28ಕ್ಕೆ 3 ವಿಕೆಟ್‌ ಪಡೆದರೆ, ಆಫ್‌ಸ್ಪಿನ್ನರ್‌ ನೊರೊನಾ ಹಾಗೂ ವೇಗಿ ಶ್ರೀವತ್ಸ ಆಚಾರ್ಯ ತಲಾ 2 ವಿಕೆಟ್‌ ಪಡೆದರು. ಮಹಾರಾಜ ಟ್ರೋಫಿಯ ನಾಲ್ಕನೇ ಆವೃತ್ತಿ ಇದಾಗಿದ್ದು, ಹುಬ್ಬಳ್ಳಿ ಟೈಗರ್ಸ್ ಎರಡನೇ ಬಾರಿಗೆ ಫೈನಲ್‌ ತಲುಪಿತ್ತು. 2023ರಲ್ಲಿ ತಂಡವು ಕಪ್‌ ಎತ್ತಿ ಹಿಡಿದಿತ್ತು.
ಮಂಗಳೂರು ಡ್ರ್ಯಾಗನ್ಸ್ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿತ್ತು. ಬಿ.ಆರ್. ಶರತ್‌ ಪಂದ್ಯದ ಆಟಗಾರ ಹಾಗೂ ದೇವದತ್ತ ಪಡಿಕ್ಕಲ್‌ ಸರಣಿ ಆಟಗಾರ ಪ್ರಶಸ್ತಿ ಪಡೆದರು.

ಸಂಕ್ಷಿಪ್ತ ಸ್ಕೋರ್: ಹುಬ್ಬಳ್ಳಿ ಟೈಗರ್ಸ್‌: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 154
( ಕೆ.ಎಲ್‌. ಶ್ರೀಜಿತ್ 52, ಮೊಹಮ್ಮದ್ ತಾಹಾ 27, ಸಚಿನ್‌ ಶಿಂಧೆ 28ಕ್ಕೆ 3, ಮೇಕ್ನಿಲ್ ನೊರೊನಾ 25ಕ್ಕೆ 2, ಶ್ರೀಶ ಆಚಾರ್ಯ 30ಕ್ಕೆ 2)
ಮಂಗಳೂರು ಡ್ರ್ಯಾಗನ್ಸ್: 10.4 ಓವರ್‌ಗಳಲ್ಲಿ 2 ವಿಕೆಟ್‌ಗೆ 85
( ಬಿ.ಆರ್. ಶರತ್‌ 49 , ಲೋಚನ್‌ ಗೌಡ 18, ರಿತೇಶ್ ಭಟ್ಕಳ್ 14ಕ್ಕೆ 2)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.