ADVERTISEMENT

ಮಹಾರಾಜ ಟ್ರೋಫಿ: ಕರುಣ್‌ ಭರ್ಜರಿ ಬ್ಯಾಟಿಂಗ್‌, ಮೈಸೂರಿಗೆ ಭರ್ಜರಿ ಜಯ

ಟೈಗರ್ಸ್‌ಗೆ ನಿರಾಸೆ

ಮೋಹನ್ ಕುಮಾರ ಸಿ.
Published 11 ಆಗಸ್ಟ್ 2022, 4:47 IST
Last Updated 11 ಆಗಸ್ಟ್ 2022, 4:47 IST
ಹುಬ್ಬಳ್ಳಿ ವಿರುದ್ಧ ಶತಕದ ಜೊತೆಯಾಟ ಆಡಿದ ಮೈಸೂರು ವಾರಿಯರ್ಸ್‌ ಗೆಲುವಿಗೆ ಕಾರಣರಾದ ಕರುಣ್ ನಾಯರ್ ಹಾಗೂ ನಿಹಾಲ್ ಉಳ್ಳಾಲ್‌ ಸಂಭ್ರಮ –ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ಹುಬ್ಬಳ್ಳಿ ವಿರುದ್ಧ ಶತಕದ ಜೊತೆಯಾಟ ಆಡಿದ ಮೈಸೂರು ವಾರಿಯರ್ಸ್‌ ಗೆಲುವಿಗೆ ಕಾರಣರಾದ ಕರುಣ್ ನಾಯರ್ ಹಾಗೂ ನಿಹಾಲ್ ಉಳ್ಳಾಲ್‌ ಸಂಭ್ರಮ –ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.   

ಮೈಸೂರು: ಅನುಭವಿ ಆಟಗಾರ ಕರುಣ್‌ ನಾಯರ್‌ ಅಬ್ಬರದ ಬ್ಯಾಟಿಂಗ್ ಬಲದಿಂದ ಮೈಸೂರು ವಾರಿಯರ್ಸ್‌ ತಂಡವು ಇಲ್ಲಿ ನಡೆಯುತ್ತಿರುವ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಎರಡನೇ ಜಯ ಸಾಧಿಸಿತು.

ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೈಸೂರು ತಂಡ ಹುಬ್ಬಳ್ಳಿ ಟೈಗರ್ಸ್‌ ವಿರುದ್ಧ 10 ವಿಕೆಟ್‌ಗಳಿಂದ ಗೆದ್ದಿತು.

ಟಾಸ್‌ ಗೆದ್ದ ಕರುಣ್‌ ನಾಯರ್‌ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡರು. ಹುಬ್ಬಳ್ಳಿ ತಂಡವು ಅರಂಭಿಕ ಬ್ಯಾಟರ್ ಲವನೀತ್ ಸಿಸೊಡಿಯಾ (38 ರನ್) ಹಾಗೂ ಎಂಟನೇ ಕ್ರಮಾಂಕದ ತುಷಾರ್ ಸಿಂಗ್ (36 ರನ್) ಅವರ ಬ್ಯಾಟಿಂಗ್‌ನಿಂದಾಗಿ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 140 ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ಮೈಸೂರು ತಂಡವು 15.5 ಓವರ್‌ಗಳಲ್ಲಿ 141 ರನ್‌ ಗಳಿಸಿತು. ಆರಂಭಿಕ ಜೋಡಿ, ನಾಯಕ ಕರುಣ್ (ಅಜೇಯ 91; 52ಎ, 4X11, 6X3) ಹಾಗೂ ನಿಹಾಲ್ ಉಳ್ಳಾಲ್ (ಅಜೇಯ 48; 43ಎ, 4X2, 6X1) ಮುರಿಯದ ಮೊದಲ ವಿಕೆಟ್ ಜೊತೆಯಾಟದಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ADVERTISEMENT

ಹುಬ್ಬಳ್ಳಿ ತಂಡದ ನಾಯಕ, ಅನುಭವಿ ವೇಗಿ ಅಭಿಮನ್ಯು ಮಿಥುನ್ ಹಾಗೂ ವಿ. ಕೌಶಿಕ್ ಅವರ ಬೌಲಿಂಗ್ ತಂತ್ರಗಳು ಫಲ ಕೊಡಲಿಲ್ಲ. ಹುಬ್ಬಳ್ಳಿ ಬೌಲರ್‌ಗಳನ್ನು ಕರುಣ್–ನಿಹಾಲ್ ಜೋಡಿಯು ಕಾಡಿತು.

ದಿನದ ಮತ್ತೊಂದು ಪಂದ್ಯದಲ್ಲಿ ಮಂಗಳೂರು ಯುನೈಟೆಡ್‌ ತಂಡವು ಎಂಟು ವಿಕೆಟ್‌ಗಳಿಂದ ಶಿವಮೊಗ್ಗ ಸ್ಟ್ರೈಕರ್ಸ್ ಎದುರು ಗೆಲುವು
ಸಾಧಿಸಿತು.

ಸಂಕ್ಷಿಪ್ತ ಸ್ಕೋರ್‌: ಹುಬ್ಬಳ್ಳಿ ಟೈಗರ್ಸ್: 20 ಓವರ್‌ಗಳಲ್ಲಿ 6ಕ್ಕೆ 140 (ಲವ್‌ನಿತ್‌ ಸಿಸೋಡಿಯಾ 38, ತುಷಾರ್‌ ಸಿಂಗ್‌ 36. ಶ್ರೇಯಸ್‌ ಗೋಪಾಲ್‌ 22ಕ್ಕೆ 2) ಮೈಸೂರು ವಾರಿಯರ್ಸ್‌: 15 .5ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 141 (ಕರುಣ್‌ ನಾಯರ್‌ 91, ನಿಹಾಲ್ ಉಳ್ಳಾಲ್‌ 48)

ಫಲಿತಾಂಶ: ಮೈಸೂರು ವಾರಿಯರ್ಸ್‌ಗೆ 10 ವಿಕೆಟ್‌ ಜಯ. ಪಂದ್ಯ ಶ್ರೇಷ್ಠ: ಕರುಣ್‌ ನಾಯರ್‌

ಇಂದಿನ ಪಂದ್ಯಗಳು: ಬೆಂಗಳೂರು ಬ್ಲಾಸ್ಟರ್ಸ್–ಮಂಗಳೂರು ಯುನೈಟೆಡ್ (ಮಧ್ಯಾಹ್ನ 3ರಿಂದ)

ಮೈಸೂರು ವಾರಿಯರ್ಸ್–ಗುಲ್ಬರ್ಗ ಮಿಸ್ಟಿಕ್ಸ್‌ ( ರಾತ್ರಿ 7ರಿಂದ)

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.