ಮೈಸೂರು: ಆರಂಭಿಕ ಬ್ಯಾಟರ್ ಮೊಹಮ್ಮದ್ ತಹಾ (101) ಅವರ ಸೊಗಸಾದ ಶತಕದ ನೆರವಿನಿಂದ ಹುಬ್ಬಳ್ಳಿ ಟೈಗರ್ಸ್ ತಂಡವು ಶಿವಮೊಗ್ಗ ಲಯನ್ಸ್ ಎದುರು ಮಂಗಳವಾರ 29 ರನ್ ಅಂತರದಿಂದ ಗೆದ್ದು ಶುಭಾರಂಭ ಮಾಡಿತು.
ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ‘ ಶ್ರೀರಾಮ್ ಕ್ಯಾಪಿಟಲ್ಸ್ ಮಹಾರಾಜ ಟ್ರೋಫಿ’ ಟ್ವೆಂಟಿ20 ಕ್ರಿಕೆಟ್ ಟೂರ್ನಿಯ ಎರಡನೇ ದಿನ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಹುಬ್ಬಳ್ಳಿ ಟೈಗರ್ಸ್ ಪರ ತಹಾ ಕಲಾತ್ಮಕ ಇನ್ನಿಂಗ್ಸ್ ಕಟ್ಟಿ ತಂಡವು 217 ರನ್‌ಗಳ ಬೃಹತ್ ಮೊತ್ತ ಪೇರಿಸಲು ಕಾರಣರಾದರು.
ಆರಂಭದಲ್ಲಿ ತಾಳ್ಮೆಯ ಆಟಕ್ಕೆ ಮೊರೆ ಹೋದ ಅವರು, ಬಳಿಕ ಅಬ್ಬರಿಸಿದರು. ಮೈದಾನದ ಮೂಲೆಮೂಲೆಗೆ ಚೆಂಡನ್ನು ಅಟ್ಟುತ್ತ ಸ್ಕೋರ್ ಹೆಚ್ಚಿಸಿಕೊಂಡರು. ಹಾರ್ದಿಕ್ ರಾಜ್ ಎಸೆದ 17ನೇ ಓವರ್‌ನಲ್ಲಿ 24 ರನ್ ಚಚ್ಚಿದರು. ಕೇವಲ 51 ಎಸೆತದಲ್ಲಿ 10 ಬೌಂಡರಿ ಹಾಗೂ 6 ಸಿಕ್ಸರ್ ಸಿಡಿಸಿದ ತಹಾ, ವಿ. ಕೌಶಿಕ್ ಬೌಲಿಂಗ್‌ನಲ್ಲಿ 1 ರನ್ ಓಡುವ ಮೂಲಕ ಶತಕ ದಾಖಲಿಸಿದರು.
ತಹಾಗಿದು ಮಹಾರಾಜ ಟ್ರೋಫಿಯಲ್ಲಿ ಎರಡನೇ ಶತಕ. 2023ರಲ್ಲಿ ಬೆಂಗಳೂರಿನಲ್ಲಿ ನಡೆದ ಟೂರ್ನಿಯ ಎರಡನೇ ಆವೃತ್ತಿಯಲ್ಲೂ ಅವರು ಶತಕ ಸಿಡಿಸಿದ್ದರು.
ಮೊಹಮ್ಮದ್ ತಹಾ ಹಾಗೂ ನಾಯಕ ದೇವದತ್ತ ಪಡಿಕ್ಕಲ್ ನಡುವಿನ ಶತಕದ ಜೊತೆಯಾಟವು ಹುಬ್ಬಳ್ಳಿ ಇನ್ನಿಂಗ್ಸ್‌ಗೆ ಭದ್ರ ಅಡಿಪಾಯ ಹಾಕಿತು. ಆರಂಭಿಕ ಪ್ರಖರ್ ಚತುರ್ವೇದಿ (8) ನಿರ್ಗಮನದ ಬಳಿಕ ಎರಡನೇ ವಿಕೆಟ್‌ಗೆ ಜೊತೆಯಾದ ಈ ಜೋಡಿಯು ಬೌಲರ್‌ಗಳನ್ನು ದಂಡಿಸುತ್ತ ರನ್ ಗತಿ ಹೆಚ್ಚಿಸಿತು. 57 ಎಸೆತಗಳಲ್ಲಿ 13 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 100 ರನ್ ಪೇರಿಸಿತು. ಜೊತೆಯಾಟ ಶತಕ ತಲುಪುತ್ತಲೇ ಪಡಿಕ್ಕಲ್ ( 52ಎ, 32 ಎ, 8 ಬೌಂಡರಿ, 1 ಸಿಕ್ಸರ್) ಆನಂದ ದೊಡ್ಡಮನಿ ಎಸೆತದಲ್ಲಿ ಹಾರ್ದಿಕ್ ರಾಜ್‌ಗೆ ಕ್ಯಾಚಿತ್ತು ನಿರ್ಗಮಿಸಿದರು.
ನಂತರದಲ್ಲಿ ವಿಕೆಟ್ ಕೀಪರ್ ಕೃಷ್ಣನ್ ಶ್ರೀಜಿತ್ (27) ಜೊತೆಗೂಡಿದ ತಹಾ ಕೇವಲ 40 ಎಸೆತಗಳಲ್ಲಿ 90 ರನ್‌ಗಳ ಉಪಯುಕ್ತ ಜೊತೆಯಾಟ ಕಟ್ಟಿ ತಂಡವು ದೊಡ್ಡ ಮೊತ್ತ ಕಲೆಹಾಕುವಂತೆ ನೋಡಿಕೊಂಡರು.
ಬೃಹತ್ ಮೊತ್ತ ಬೆನ್ನತ್ತಿದ ಶಿವಮೊಗ್ಗಕ್ಕೆ ವೇಗಿ ನಿಶ್ಚಿತ್ ಪೈ ಪಂದ್ಯದ ಎರಡನೇ ಓವರ್‌ನಲ್ಲೇ ಆಘಾತ ನೀಡಿದರು. ತಮ್ಮ ಮೊದಲ ಓವರ್‌ನ ಮೊದಲ ಎಸೆತದಲ್ಲೇ ಎದುರಾಳಿ ನಾಯಕ ನಿಹಾಲ್ ಉಲ್ಲಾಳ್ (2) ವಿಕೆಟ್ ಪಡೆದ ಅವರು ಮೂರನೇ ಎಸೆತದಲ್ಲಿ ಹಾರ್ದಿಕ್ ರಾಜ್‌ಗೆ (0) ಪೆವಿಲಿಯನ್ ಹಾದಿ ತೋರಿದರು.
ಐದನೇ ವಿಕೆಟ್‌ಗೆ ಅನೀಶ್ವರ್ ಗೌತಮ್ (32) ಹಾಗೂ ಅನಿರುದ್ಧ ಜೋಷಿ ಜೋಡಿಯು 56 ರನ್ ಜೊತೆಯಾಟದ ಮೂಲಕ ಪ್ರತಿರೋಧ ತೋರಿದಾದರೂ ಸ್ಪಿನ್ನರ್ ಕೆ.ಸಿ. ಕಾರ್ಯಪ್ಪ, ಗೌತಮ್ ವಿಕೆಟ್ ಮೂಲಕ ಜೊತೆಯಾಟ ಮುರಿದರು. ಆರನೇ ವಿಕೆಟ್‌ಗೆ ಅನಿರುದ್ಧ್ ಹಾಗೂ ಡಿ. ಅವಿನಾಶ್ (22)ಜೋಡಿಯು 36 ಎಸೆತಗಳಲ್ಲಿ 77 ರನ್ ಪೇರಿಸಿ ಹೋರಾಟ ಪ್ರದರ್ಶಿಸಿತು.
ಶಿವಮೊಗ್ಗ ಪರ ಅನಿರುದ್ಧ ಜೋಷಿ 42 ಎಸೆತಗಳಲ್ಲಿ 79 ರನ್ ಮೂಲಕ ಏಕಾಂಗಿಯಾಗಿ ಹೋರಾಟ ಪ್ರದರ್ಶಿಸಿದರು. 9 ಸಿಕ್ಸರ್ ಸಿಡಿಸಿ ಅಜೇಯರಾಗಿ ಉಳಿದರಾದರೂ ಗೆಲುವಿಗೆ ಅದು ಸಾಕಾಗಲಿಲ್ಲ.
ಹುಬ್ಬಳ್ಳಿ ಟೈಗರ್ಸ್: 20 ಓವರ್‌ಗಳಲ್ಲಿ 4 ವಿಕೆಟ್‌ಗೆ 216 ( ಮೊಹಮ್ಮದ್ ತಹಾ 101, ದೇವದತ್ತ ಪಡಿಕ್ಕಲ್ 52, ಕೃಷ್ಣನ್ ಶ್ರೀಜಿತ್ 27. ವಿದ್ವತ್ ಕಾವೇರಪ್ಪ 39ಕ್ಕೆ 2)
ಶಿವಮೊಗ್ಗ ಲಯನ್ಸ್: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 187 ( ಅನಿರುದ್ಧ ಜೋಷಿ ಔಟಗದೇ 79, ಅನೀಶ್ವರ್ ಗೌತಮ್ 32, ಧ್ರುವ್ ಪ್ರಭಾಕರ್ 30. ಕೆ.ಸಿ. ಕಾರ್ಯಪ್ಪ 28ಕ್ಕೆ 2, ನಿಶ್ಚಿತ್ ಪೈ 42ಕ್ಕೆ 2)
ಪಂದ್ಯದ ಆಟಗಾರ: ಮೊಹಮ್ಮದ್ ತಹಾ
ಇಂದಿನ ಪಂದ್ಯಗಳು:
ಬೆಂಗಳೂರು ಬ್ಲಾಸ್ಟರ್ಸ್ v/s ಹುಬ್ಬಳ್ಳಿ ಟೈಗರ್ಸ್– ಮಧ್ಯಾಹ್ನ 3.15
ಮಂಗಳೂರು ಡ್ರ್ಯಾಗನ್ಸ್ v/s ಶಿವಮೊಗ್ಗ ಲಯನ್ಸ್– ರಾತ್ರಿ 7.15
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.