ಸಾಂದರ್ಭಿಕ ಚಿತ್ರ
ಬೆಂಗಳೂರು: ಬೌಲರ್‌ಗಳ ಸಂಘಟಿತ ದಾಳಿಯ ನೆರವಿನಿಂದ ಮಹಾರಾಷ್ಟ್ರ ತಂಡವು ಬಿಸಿಸಿಐ ಸೀನಿಯರ್ ಮಹಿಳಾ ಏಕದಿನ ಕ್ರಿಕೆಟ್ ಟ್ರೋಫಿಯ ಪಂದ್ಯದಲ್ಲಿ ಕರ್ನಾಟಕ ತಂಡದ ವಿರುದ್ಧ 4 ರನ್‌ಗಳ ರೋಚಕ ಜಯ ಸಾಧಿಸಿತು.
ರಾಜ್‌ಕೋಟ್‌ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ರಾಜೇಶ್ವರಿ ಗಾಯಕವಾಡ್ (20ಕ್ಕೆ4) ಹಾಗೂ ಬಿ.ಜಿ. ತೇಜಸ್ವಿನಿ (23ಕ್ಕೆ2) ಅವರ ಸ್ಪಿನ್ ಕೈಚಳಕದ ಎದುರು ಮಹಾರಾಷ್ಟ್ರ ತಂಡವು 48.2 ಓವರ್‌ಗಳಲ್ಲಿ 175 ರನ್‌ಗಳಿಗೆ ಕುಸಿಯಿತು.
ಗುರಿ ಬೆನ್ನಟ್ಟಿದ ರಾಜ್ಯ ತಂಡದ ಆರಂಭ ಉತ್ತಮವಾಗಿರಲಿಲ್ಲ. ಟೂರ್ನಿಯಲ್ಲಿ ಅಮೋಘ ಲಯದಲ್ಲಿರುವ ನಾಯಕಿ ಶುಭಾ ಸತೀಶ್ 9 ರನ್ ಗಳಿಸಿ ಔಟಾದರು. ರಾಜ್ಯ ತಂಡವು ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತ ಸಾಗಿತು. ಈ ಹಂತದಲ್ಲಿ, ಶಿಶಿರಾ ಕೆ. ಗೌಡ (25; 73ಎ) ಅವರು ವಿಕೆಟ್ ಕೀಪರ್ ಸೌಮ್ಯ ವರ್ಮಾ (39; 54ಎ) ಅವರೊಂದಿಗೆ 61 ರನ್ ಜೊತೆಯಾಟವಾಡಿ ಚೇತರಿಕೆ ನೀಡಿದರು.
ಕೊನೆಯಲ್ಲಿ ತೇಜಸ್ವಿನಿ (ಔಟಾಗದೇ 32; 51ಎ) ಹಾಗೂ ಮೋನಿಕಾ ಸಿ. ಪಟೇಲ್ (ಔಟಾಗದೇ 27; 27ಎ) ಅವರು ಮುರಿಯದ ಒಂಬತ್ತನೇ ವಿಕೆಟ್ ಜೊತೆಯಾಟದಲ್ಲಿ 41 ರನ್ ಸೇರಿಸಿದರು. ಆದರೂ, ಅವರ ಹೋರಾಟಕ್ಕೆ ಗೆಲುವು ದಕ್ಕಲಿಲ್ಲ. ಶುಭ ಪಡೆಯು 8 ವಿಕೆಟ್‌ಗಳಿಗೆ 171 ರನ್ ಗಳಿಸಿ ಓವರ್ ಪೂರೈಸಿತು.
ಮಹಾರಾಷ್ಟ್ರ ತಂಡದ ಶ್ರದ್ಧಾ ಬಿ.ಪಿ. 29 ರನ್ ನೀಡಿ ಮೂರು ವಿಕೆಟ್ ಪಡೆದರೆ, ಅನುಜಾ ಹಾಗೂ ಭಕ್ತಿ ಎಂ. ಮಿರಾಜಕರ್ ತಲಾ ಎರಡು ವಿಕೆಟ್ ಪಡೆದರು.
ಇದಕ್ಕೆ ಮೊದಲು, ರಾಜೇಶ್ವರಿ ಹಾಗೂ ತೇಜಸ್ವಿನಿ ಜೋಡಿಯ ಸ್ಪಿನ್ ದಾಳಿ ಎದುರು ಅಲ್ಪ ಮೊತ್ತಕ್ಕೆ ಕುಸಿಯುವ ಅಪಾಯದಲ್ಲಿದ್ದ ಮಹಾರಾಷ್ಟ್ರ ತಂಡಕ್ಕೆ ನಾಯಕಿ ಅನುಜಾ ಪಾಟೀಲ್ (40; 70ಎ) ಆಸರೆಯಾದರು. ಆರಂಭ ಆಟಗಾರ್ತಿ ಮುಕ್ತ ಆರ್. ಮಾಗ್ರೆ (24; 35ಎ) ಹಾಗೂ ವೈಷ್ಣವಿ ಶಿಂದೆ (21; 46ಎ) ಅವರೂ ಉಪಯುಕ್ತ ಕಾಣಿಕೆ ನೀಡಿದರು.
ಸಂಕ್ಷಿಪ್ತ ಸ್ಕೋರು: ಮಹಾರಾಷ್ಟ್ರ: 48.2 ಓವರ್‌ಗಳಲ್ಲಿ 171 (ಅನುಜಾ ಪಾಟೀಲ 40 , ಮುಕ್ತ ಆರ್. ಮಾಗ್ರೆ 24; ರಾಜೇಶ್ವರಿ ಗಾಯಕವಾಡ 20ಕ್ಕೆ4, ಬಿ.ಜಿ. ತೇಜಸ್ವಿನಿ 23ಕ್ಕೆ2). ಕರ್ನಾಟಕ: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 171 (ಸೌಮ್ಯಾ ವರ್ಮಾ 39, ಬಿ.ಜಿ. ತೇಜಸ್ವಿನಿ ಔಟಾಗದೇ 32, ಮೋನಿಕಾ ಸಿ. ಪಟೇಲ್ ಔಟಾಗದೇ 27; ಶ್ರದ್ಧಾ ಬಿ.ಪಿ. 29ಕ್ಕೆ3, ಅನುಜಾ ಪಾಟೀಲ 27ಕ್ಕೆ2, ಭಕ್ತಿ ಎಂ. ಮಿರಜಕರ್ 27ಕ್ಕೆ2)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.