ADVERTISEMENT

2024ರ ಲೋಕಸಭೆ ಚುನಾವಣೆಗೆ ಧೋನಿ ಸ್ಪರ್ಧಿಸಲಿ: ಸುಬ್ರಮಣಿಯನ್‌ ಸ್ವಾಮಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಆಗಸ್ಟ್ 2020, 9:27 IST
Last Updated 16 ಆಗಸ್ಟ್ 2020, 9:27 IST
ಕ್ರಿಕೆಟಿಗ ಮಹೇಂದ್ರ ಸಿಂಗ್‌ ಧೋನಿ, ರಾಜ್ಯಸಭೆ ಸದಸ್ಯ ಸುಬ್ರಮಣಿಯನ್‌ ಸ್ವಾಮಿ
ಕ್ರಿಕೆಟಿಗ ಮಹೇಂದ್ರ ಸಿಂಗ್‌ ಧೋನಿ, ರಾಜ್ಯಸಭೆ ಸದಸ್ಯ ಸುಬ್ರಮಣಿಯನ್‌ ಸ್ವಾಮಿ    

ದೆಹಲಿ: ಕ್ರಿಕೆಟ್‌ನಲ್ಲಿ ಅತ್ಯುತ್ತಮ ನಾಯಕತ್ವ ಪ್ರದರ್ಶಿಸಿರುವ ಕ್ರಿಕೆಟಿಗ ಮಹೇಂದ್ರ ಸಿಂಗ್‌ ಧೋನಿ ಅವರು, ಸಾರ್ವಜನಿಕ ಜೀವನಕ್ಕೆ ಬರಬೇಕು. 2024ರ ಲೋಕಸಭೆ ಚುನಾವಣೆಯಲ್ಲಿ ಅವರು ಸ್ಪರ್ಧಿಸಲಿ ಎಂದು ಬಿಜೆಪಿ ರಾಜ್ಯಸಭೆ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಹೇಳಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮಹೇಂದ್ರ ಸಿಂಗ್‌ ಧೋನಿ ನಿವೃತ್ತಿ ಘೋಷಣೆ ಮಾಡುತ್ತಲೇ ಇತ್ತ ಭಾನುವಾರ ಬೆಳಗ್ಗೆ ಟ್ವೀಟ್‌ ಮಾಡಿರುವ ಸುಬ್ರಮಣಿಯನ್‌ ಸ್ವಾಮಿ, ‘ಎಂ.ಎಸ್. ಧೋನಿ ಕ್ರಿಕೆಟ್‌ನಿಂದ ನಿವೃತ್ತರಾಗುತ್ತಿದ್ದಾರೆ. ಆದರೆ ಬೇರೆ ಯಾವುದರಿಂದಲೂ ಅಲ್ಲ. ಅವರ ಪ್ರತಿಭೆಯು ಸಮಸ್ಯೆಗಳ ವಿರುದ್ಧ ಹೋರಾಡಲು ನೆರವಾಗುತ್ತದೆ. ಕ್ರಿಕೆಟ್‌ನಲ್ಲಿ ಅವರು ಪ್ರದರ್ಶಿಸಿದ ಸ್ಪೂರ್ತಿದಾಯಕ ನಾಯಕತ್ವ ಸಾರ್ವಜನಿಕ ಜೀವನಕ್ಕೂ ಅಗತ್ಯವಿದೆ. ಅವರು 2024ರ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಹೋರಾಡಬೇಕು,’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರಸಿಂಗ್ ಧೋನಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಶನಿವಾರ ಸಂಜೆ ವಿದಾಯ ಹೇಳಿದರು. ಇದರೊಂದಿಗೆ ಸುಮಾರು ಒಂದು ವರ್ಷದಿಂದ ಅವರ ನಿವೃತ್ತಿಯ ಕುರಿತು ನಡೆಯುತ್ತಿದ್ದ ಚರ್ಚೆಗಳಿಗೆ ಕೊನೆಹಾಡಿದರು.

ADVERTISEMENT

‘ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು. ಇಂದು ಸಂಜೆ 7.29 (19.29) ರಿಂದ ನನ್ನನ್ನು ನಿವೃತ್ತನೆಂದು ಪರಿಗಣಿಸಿ‘ ಎಂದು 39 ವರ್ಷದ ವಿಕೆಟ್‌ಕೀಪರ್‌ ಧೋನಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.