ADVERTISEMENT

ನಾನೂ ಒತ್ತಡ, ಆತಂಕಕ್ಕೆ ಒಳಗಾಗಿದ್ದೆ: ಮಹೇಂದ್ರ ಸಿಂಗ್ ಧೋನಿ

ಭಾರತದಲ್ಲಿ ಮಾನಸಿಕ ಸಮಸ್ಯೆಯ ಅಭಿವ್ಯಕ್ತಿ ಕೊರತೆ ಇದೆ ಎಂದ ಹಿರಿಯ ಕ್ರಿಕೆಟಿಗ

ಪಿಟಿಐ
Published 7 ಮೇ 2020, 18:34 IST
Last Updated 7 ಮೇ 2020, 18:34 IST
ಮಹೇಂದ್ರಸಿಂಗ್ ಧೋನಿ
ಮಹೇಂದ್ರಸಿಂಗ್ ಧೋನಿ   

ಚೆನ್ನೈ: ಭಾರತದಲ್ಲಿ ಮಾನಸಿಕ ಆರೋಗ್ಯದ ಕುರಿತು ಬಹಳಷ್ಟು ಜಾಗೃತಿಯ ಅವಶ್ಯಕತೆ ಇದೆ. ಈಗಲೂ ಜನರು ತಮ್ಮ ಮಾನಸಿಕ ತೊಂದರೆಗಳನ್ನು ಮುಕ್ತವಾಗಿ ಹೇಳಿಕೊಳ್ಳುವುದಿಲ್ಲ. ಸಮಾಜವು ಅದನ್ನು ತಪ್ಪಾಗಿ ಪರಿಗಣಿಸುತ್ತದೆ ಎಂಬ ಭಾವನೆಯಿದೆ ಎಂದು ಹಿರಿಯ ಕ್ರಿಕೆಟಿಗ ಮಹೇಂದ್ರಸಿಂಗ್ ಧೋನಿ ಅಭಿಪ್ರಾಯಪಟ್ಟಿದ್ದಾರೆ.

ಕ್ರೀಡಾಪಟುಗಳಿಗೆ ಮಾನಸಿಕ ಸದೃಢತೆಯ ಕುರಿತು ತಿಳಿವಳಿಕೆ ಮೂಡಿಸಿ ಸಾಮರ್ಥ್ಯ ವೃದ್ಧಿಸುವ ನೆರವು ನೀಡುತ್ತಿರುವ ಎಂ ಫೋರ್ ಸಂಸ್ಥೆಯು ಏರ್ಪಡಿಸಿದ್ದ ಸಂವಾದದಲ್ಲಿ ಧೋನಿ ಮಾತನಾಡಿದ್ದಾರೆ.

‘ಮಾನಸಿಕವಾಗಿ ಆಗುವ ಒತ್ತಡ ಮತ್ತಿತರ ಸಾಮಾನ್ಯ ತೊಂದರೆಗಳನ್ನು ನಿವಾರಿಸಲು ನಮ್ಮಲ್ಲಿ ತಜ್ಞ ವೈದ್ಯರ ಬಳಿ ಹೋಗಲು ಹಿಂಜರಿಯುತ್ತಾರೆ. ಅದನ್ನು ಮಾನಸಿಕ ಕಾಯಿಲೆಯೆಂದು ಭಾವಿಸುತ್ತಾರೆ. ಆದರೆ ಇವು ಎಲ್ಲರಿಗೂ ಆಗುವ ಸಮಸ್ಯೆಗಳು. ಅವುಗಳಿಂದ ಹೊರಬರಲು ಸಲಹೆ ಮುಖ್ಯವಾಗುತ್ತದೆ’ಎಂದಿದ್ದಾರೆ.

ADVERTISEMENT

‘ಇವೆಲ್ಲವೂ ಸಣ್ಣ ಸಮಸ್ಯೆಗಳಾದರೂ ನಾವು ತಜ್ಞರ ಬಳಿ ಹೋಗಲು ಹಿಂಜರಿಯುತ್ತೇವೆ. ಕ್ರಿಕೆಟ್ ತಂಡದಲ್ಲಿರುವಾಗ ಆಟಗಾರ ಮತ್ತು ಕೋಚ್ ನಡುವೆ ಉತ್ತಮ ಬಾಂಧವ್ಯ ಇರಬೇಕು. ಆಗ ಆಟಗಾರರು ತಮ್ಮ
ಮಾನಸಿಕ ಒತ್ತಡ, ಸಮಸ್ಯೆಗಳ ಕುರಿತು ಕೋಚ್ ಜೊತೆಗೆ ಮುಕ್ತವಾಗಿ ಮಾತನಾಡಲು ಸಾಧ್ಯವಾಗುತ್ತದೆ’ ಎಂದು ಹೇಳಿದ್ದಾರೆ.

‘ನಾನು ಕೂಡ ಆಡಲು ಕಣಕ್ಕಿಳಿದಾಗ ಒತ್ತಡ, ಆತಂಕಗಳನ್ನು ಅನುಭವಿಸಿದ್ದೇನೆ. ಬ್ಯಾಟಿಂಗ್‌ ಮಾಡಲು ಕ್ರೀಸ್‌ಗೆ ಹೋದಾಗ ಎದುರಿಸುವ ಮೊದಲ 5–10 ಎಸೆತಗಳಲ್ಲಿ ಎದೆ ಢವಗುಟ್ಟುತ್ತದೆ. ಇದು ಬಹುಶಃ ಎಲ್ಲರಿಗೂ ಆಗುತ್ತದೆ. ಆದರೆ ಹೆಚ್ಚಿನವರು ಹೇಳಿಕೊಳ್ಳುವುದಿಲ್ಲ. ಆದರೆ, ಮಾನಸಿಕವಾಗಿ ಸ್ಪಷ್ಟತೆ ಇದ್ದಾಗ, ಮಾಡಬೇಕಾದ ಕೆಲಸ ಸರಾಗವಾಗಿ ಆಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.