ADVERTISEMENT

ವಿರಾಟ್, ರೋಹಿತ್ ಸೇರಿದಂತೆ 2025ರಲ್ಲಿ ನಿವೃತ್ತರಾದ ಪ್ರಮುಖ ಕ್ರಿಕೆಟಿಗರು ಇವರು..

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಡಿಸೆಂಬರ್ 2025, 6:03 IST
Last Updated 10 ಡಿಸೆಂಬರ್ 2025, 6:03 IST
   

ಬೆಂಗಳೂರು: ವಿರಾಟ್‌ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ದಶಕಗಳ ಕ್ರಿಕೆಟ್‌ ಅಂಗಳದಲ್ಲಿ ಮಿಂಚಿದ್ದ ಹಲವು ಸ್ಟಾರ್‌ ಕ್ರಿಕೆಟಿಗರು ಈ ವರ್ಷ(2025) ನಿವೃತ್ತಿಯನ್ನು ಘೋಷಿಸಿದ್ದಾರೆ.

ಕ್ರಿಕೆಟ್‌ ಜಗತ್ತಿಗೆ ಹಲವು ಅವಿಸ್ಮರಣಿಯ ನೆನಪುಗಳನ್ನು ನೀಡಿದ ಈ ಆಟಗಾರರು, ಒಬ್ಬರ ಹಿಂದೆ ಒಬ್ಬರಂತೆ ಮೈದಾನ ತೊರೆದಿದ್ದಾರೆ. ಕೆಲವು ಕ್ರಿಕೆಟಿಗರು ಒಂದೆರಡು ಮಾದರಿಗಷ್ಟೇ ನಿವೃತ್ತಿ ನೀಡಿದ್ದರೆ, ಇನ್ನೂ ಕೆಲವು ಆಟಗಾರರು ಸಂಪೂರ್ಣವಾಗಿ ಕ್ರಿಕೆಟ್‌ ಮೈದಾನದಿಂದ ಹೊರನಡೆದಿದ್ದರೆ.

ಈ ವರ್ಷ ನಿವೃತ್ತರಾದ ಪ್ರಮುಖ ಕ್ರಿಕೆಟ್‌ ಆಟಗಾರರು

ವಿರಾಟ್‌ ಕೊಹ್ಲಿ

ದಶಕಗಳ ಕಾಲ ಕ್ರಿಕೆಟ್‌ ಜಗತ್ತಿನ ಸ್ಟಾರ್‌ ಆಟಗಾರ ಪಟ್ಟ ಅಲಂಕರಿಸಿದ್ದ ವಿರಾಟ್‌ ಕೊಹ್ಲಿ, ಮೇ 12ರಂದು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ವಿರಾಟ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ 123 ಪಂದ್ಯಗಳಿಂದ 9,230 ರನ್‌ ಗಳಿಸಿದ್ದಾರೆ. ಅದರಲ್ಲಿ 30 ಶತಕ, 7 ದ್ವಿಶತಕಗಳಿವೆ.

2024ರ ಜೂನ್‌ನಲ್ಲಿ ಭಾರತ ಟಿ–20 ವಿಶ್ವಕಪ್‌ ಗೆದ್ದ ನಂತರ ಕೊಹ್ಲಿ ಚುಟುಕು ಕ್ರಿಕೆಟ್‌ಗೆ ನಿವೃತ್ತಿ ನೀಡಿದ್ದರು. ಏಕದಿನ ಮತ್ತು ಐಪಿಎಲ್‌ನಲ್ಲಿ ವಿರಾಟ್‌ ಕೊಹ್ಲಿ ಮುಂದುವರಿದಿದ್ದಾರೆ.

ರೋಹಿತ್‌ ಶರ್ಮಾ

ಭಾರತದ ತಂಡದ ಪ್ರಮುಖ ಆರಂಭಿಕ ಆಟಗಾರ ಹಾಗೂ ಮಾಜಿ ನಾಯಕ ರೋಹಿತ್‌ ಶರ್ಮಾ ಅವರು ಮೇ 7ರಂದು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ನೀಡಿದ್ದಾರೆ.

ಟೆಸ್ಟ್‌ನಲ್ಲಿ ಕಳೆದ ಒಂದು ವರ್ಷದಿಂದ ನೀರಸ ಪ್ರದರ್ಶನ ನೀಡುತ್ತಿದ್ದ ರೋಹಿತ್, ಟೆಸ್ಟ್‌ ಕ್ರಿಕೆಟ್‌ನಲ್ಲಿ 67 ಪಂದ್ಯಗಳಿಂದ 4,301 ರನ್‌ ಗಳಿಸಿದ್ದಾರೆ. ಇದರಲ್ಲಿ 12 ಶತಕ ಹಾಗೂ 18 ಅರ್ಧಶತಕಗಳು ಕೂಡ ಸೇರಿವೆ.

2024ರ ಜೂನ್‌ನಲ್ಲಿ ಭಾರತ ಟಿ–20 ವಿಶ್ವಕಪ್‌ ಗೆದ್ದ ನಂತರ ಚುಟುಕು ಕ್ರಿಕೆಟ್‌ಗೂ ನಿವೃತ್ತಿ ನೀಡಿದ್ದರು. ಏಕದಿನ ಕ್ರಿಕೆಟ್ ಮತ್ತು ಐಪಿಎಲ್‌ನಲ್ಲಿ ರೋಹಿತ್‌ ಶರ್ಮಾ ಮುಂದುವರಿದಿದ್ದಾರೆ.

ಸ್ಟೀವ್ ಸ್ಮಿತ್‌

ಆಸ್ಟ್ರೇಲಿಯಾ ತಂಡದ ಪ್ರಮುಖ ಆಟಗಾರ ಸ್ಟೀವ್ ಸ್ಮಿತ್‌ ಅವರು ಈ ವರ್ಷ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 2025ರ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ಸೆಮಿಫೈನಲ್‌ ಪಂದ್ಯ ಸೋತ ನಂತರ, ತಂಡದ ನಾಯಕ ಕೂಡ ಆಗಿದ್ದ ಸ್ಮಿತ್ 15 ವರ್ಷಗಳ ಏಕದಿನ ಕ್ರಿಕೆಟ್‌ನಿಂದ ಹಿಂದೆ ಸರಿದಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ 170 ಪಂದ್ಯಗಳಿಂದ 5,800 ರನ್ ಗಳಿಸಿದ್ದರು.

ಏಕದಿನ ಮಾದರಿಗೆ ನಿವೃತ್ತಿ ನೀಡಿದ್ದರೂ, ಟೆಸ್ಟ್ ಹಾಗೂ ಟಿ–20 ಕ್ರಿಕೆಟ್‌ನಲ್ಲಿ ಆಸೀಸ್‌ ಪರ ಆಡಲಿದ್ದಾರೆ.

ಮಿಚೆಲ್‌ ಸ್ಟಾರ್ಕ್‌

ಆಸೀಸ್‌ ವೇಗಿ ಮಿಚೆಲ್‌ ಸ್ಟಾರ್ಕ್‌ ಅವರು ಕೂಡ ಸೆ.2ರಂದು ಅಂತರರಾಷ್ಟ್ರೀಯ ಟಿ–20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ಆಸ್ಟ್ರೇಲಿಯಾಗೆ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದ ಸ್ಟಾರ್ಕ್‌, ಟೆಸ್ಟ್‌ ಕ್ರಿಕೆಟ್‌ನಲ್ಲಿ ಮುಂದುವರಿಯುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಸ್ಟಾರ್ಕ್‌ ತಿಳಿಸಿದ್ದರು.

ಟಿ–20 ಕ್ರಿಕೆಟ್‌ಗೆ ನಿವೃತ್ತಿ ನೀಡಿದ್ದರೂ, ಟೆಸ್ಟ್ ಹಾಗೂ ಏಕದಿನ ಮಾದರಿಯಲ್ಲಿ ಆಸ್ಟ್ರೇಲಿಯಾ ಪರ ಆಡಲಿದ್ದಾರೆ.

ಚೇತೇಶ್ವರ ಪೂಜಾರ

ಭಾರತ ಟೆಸ್ಟ್ ಕ್ರಿಕೆಟ್‌ನ ಸ್ಪೆಷಲಿಸ್ಟ್ ಬ್ಯಾಟರ್‌ ಆಗಿ ಗುರುತಿಸಿಕೊಂಡಿದ್ದ ಚೇತೇಶ್ವರ ಪೂಜಾರ, ಆಗಸ್ಟ್‌ನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಹಿಂದೆ ಸರಿದಿದ್ದಾರೆ.

2010ರಿಂದ ಭಾರತ ಪರ ಆಡುತ್ತಿದ್ದ ಪೂಜಾರ, 103 ಟೆಸ್ಟ್‌ ಪಂದ್ಯಗಳಿಂದ 7,195 ರನ್‌ ಬಾರಿಸಿದ್ದರು. ತಮ್ಮ ರಕ್ಷಣಾತ್ಮಕ ಆಟದ ಮೂಲಕವೇ ಟೆಸ್ಟ್ ತಂಡದ ಖಾಯಂ ಆಟಗಾರನಾಗಿ ಗುರುತಿಸಿಕೊಂಡಿದ್ದರು.

ಮಾರ್ಟಿನ್ ಗಪ್ಟಿಲ್

ನ್ಯೂಜಿಲೆಂಡ್‌ನ ಸ್ಪೋಟಕ ಬ್ಯಾಟರ್‌ ಮಾರ್ಟಿನ್ ಗಪ್ಟಿಲ್ ಅವರು ಜನವರಿ 8ರಂದು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

2019ರ ಏಕದಿನ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್‌ ತಂಡ ಫೈನಲ್‌ ಪ್ರವೇಶಿಸುವಲ್ಲಿ ಮಾರ್ಟಿನ್ ಗಪ್ಟಿಲ್ ಪ್ರಮುಖ ಪಾತ್ರವಹಿಸಿದ್ದರು.

ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಹಿಂದೆ ಸರಿದಿರುವ ಗಪ್ಟಿಲ್‌, ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಮುಂದುವರಿಯಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.