ರಾಜಕೋಟ್: ಕರುಣ್ ನಾಯರ್ (86) ಮತ್ತು ದಾನಿಶ್ ಮಾಲೆವಾರ್ (ಔಟಾಗದೇ 138) ಅವರ ನಡುವೆ ಗೊಂದಲದ ಪರಿಣಾಮ ದ್ವಿಶತಕದ ಜೊತೆಯಾಟ ಅಂತ್ಯಗೊಂಡಿತು. ರನ್‌ಔಟ್‌ನಿಂದಾಗಿ ನಾಯರ್ ಅರ್ಹವಾಗಿದ್ದ ಶತಕ ತಪ್ಪಿಸಿಕೊಂಡರು. ಆದರೆ ಇವರಿಬ್ಬರ ಜೊತೆಯಾಟದ ಫಲವಾಗಿ ವಿದರ್ಭ ತಂಡ ಕೇರಳ ವಿರುದ್ಧ ಬುಧವಾರ ಆರಂಭವಾದ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ದಿನದ ಕೊನೆಗೆ 4 ವಿಕೆಟ್ 254 ರನ್‌ಗಳ ಉತ್ತಮ ಮೊತ್ತ ಗಳಿಸಿತು.
ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಬ್ಯಾಟ್ ಮಾಡಲು ಕಳುಹಿಸಲ್ಪಟ್ಟ ಆತಿಥೇಯರಿಗೆ, ಕೇರಳದ ವೇಗದ ಬೌಲರ್‌ಗಳು ಆಘಾತ ನಿಡಿದರು. 24 ರನ್‌ಗಳಾಗುವಷ್ಟರಲ್ಲಿ ಮೂವರು ಪೆವಿಲಿಯನ್‌ಗೆ ಮರಳಿದ್ದರು.
ಆದರೆ ಈ ಋತುವಿನಲ್ಲಿ ರನ್ ಸುಗ್ಗಿ ಕಾಣುತ್ತಿರುವ ನಾಯರ್– ಮಾಲೆವಾರ್ ನಾಲ್ಕನೇ ವಿಕೆಟ್‌ಗೆ 215 ರನ್ ಸೇರಿಸಿ ಪ್ರಬಲ ಪ್ರತಿಹೋರಾಟದಲ್ಲಿ ಭಾಗಿಯಾದರು. ಯುವ ಮತ್ತು ಅನುಭವಿ ಆಟಗಾರರ ಈ ಜೋಡಿ ಎಚ್ಚರಿಕೆಯ ಜೊತೆಗೆ ಆಕ್ರಮಣದ ಆಟವನ್ನು ಹದವಾಗಿ ಬೆರೆಸಿ 414 ಎಸೆತಗಳನ್ನು ನಿಭಾಯಿಸಿತು.
ಇವರಿಬ್ಬರು ಇನ್ನೇನು ಇವರಿಬ್ಬರು ದಿನದಾಟ ಮುಗಿಸುವರು ಎನ್ನುವಷ್ಟರಲ್ಲಿ ಎರಡನೇ ಹೊಸ ಚೆಂಡು ಪಡೆದ ತಕ್ಷಣ ಕೇರಳ, ಅಪಾಯಕಾರಿ ರೀತಿ ಬೆಳೆದಿದ್ದ ಜೊತೆಯಾಟ ಮುರಿಯುವಲ್ಲಿ ಯಶಸ್ವಿ ಆಯಿತು. 82ನೇ ಓವರಿನಲ್ಲಿ ಏಡನ್ ಆಪಿಲ್ ಟೋಮ್ ಅವರ ಮೊದಲ ಎಸೆತ ಸ್ವಿಂಗ್ ಆಗಿ ವಿಕೆಟ್ ಕೀಪರ್ ಅಜರುದ್ದೀನ್ ಕೈಗೆ ತಾಗಿ ಸ್ಪಿಪ್‌ನತ್ತ ಹೊರಳಿತು. ಬೈ ಮೂಲಕ ರನ್‌ಗಾಗಿ ಇಬ್ಬರೂ ರನ್‌ಗೆ ಅನುವಾದರು. ಆದರೆ ಎರಡನೇ ಸ್ಲಿಪ್‌ನತ್ತ ಬಂದ ಚೆಂಡನ್ನು ರೋಹನ್ ಕುನ್ನುಮಲ್ ವಿಕೆಟ್‌ನತ್ತ ಎಸೆದು ಬೇಲ್ಸ್ ಉರುಳಿಸಿದರು. ನಾಯರ್ ಅಷ್ಟರಲ್ಲಿ ಮರಳಲಾಗಲಿಲ್ಲ. 14 ರನ್‌ಗಳಿಂದ ಶತಕ ಕಳೆದುಕೊಂಡ ಅವರು ಬ್ಯಾಟ್ ಎಸೆದು ಹತಾಶೆ ವ್ಯಕ್ತಪಡಿಸಿದರು.
ಉಳಿದಂತೆ ನಾಯರ್ ಆಟ ದೋಷರಹಿತವಾಗಿದ್ದು 188 ಎಸೆತಗಳನ್ನು ಆಡಿದ್ದು, ಒಂದು ಸಿಕ್ಸರ್ ಜೊತೆ ಎಂಟು ಬೌಂಡರಿಗಳನ್ನು ಬಾರಿಸಿದರು. ಅಷ್ಟೇ ಅಲ್ಲ ಎದುರಿಗಿದ್ದ ಕಿರಿಯ ಆಟಗಾರನನ್ನು ಹುರಿದುಂಬಿಸಿದರು.
ಅದಕ್ಕೆ ಸ್ವಲ್ಪ ಮೊದಲು, 21 ವರ್ಷ ವಯಸ್ಸಿನ ಮಾಲೇವಾರ್ ಈ ಋತುವಿನಲ್ಲಿ ಎರಡನೇ ಶತಕ ಪೂರೈಸಿದರು. ಮೊದಲ ಋತುವಿನಲ್ಲೇ ಎರಡನೇ ಶತಕ ಬಾರಿಸಿದ ಅವರು 259 ಎಸೆತಗಳನ್ನು ಎದುರಿಸಿ ಎರಡು ಸಿಕ್ಸರ್, 14 ಬೌಂಡರಿ ಬಾರಿಸಿದರು. ಅವರು ನಾಕೌಟ್ ಪಂದ್ಯಗಳಲ್ಲಿ 75 ಮತ್ತು 79 ರನ್ ಬಾರಿಸಿದ್ದರು.
ಇದಕ್ಕೆ ಮೊದಲು ಕೇರಳದ ವೇಗಿ ಎಂ.ಡಿ.ನಿಧೀಶ್, ಆತಿಥೇಯರಿಗೆ ಆರಂಭದಲ್ಲಿ ಆಘಾತ ನೀಡಿದ್ದರು. ಇನಿಂಗ್ಸ್‌ನ ಎರಡನೇ ಎಸೆತದಲ್ಲೆ ಪಾರ್ಥ ರೇಖಡೆ ಅವರನ್ನು ಎಲ್‌ಬಿ ಬಲೆಗೆ ಕೆಡವಿದ ನಿಧೀಶ್, ಏಳನೇ ಓವರಿನಲ್ಲಿ ದರ್ಶನ್ ನಲ್ಕಂಡೆ ಅವರ ವಿಕೆಟ್ ಕೂಡ ಪಡೆದರು. ನಲ್ಕಂಡೆ ಪುಲ್ ಮಾಡಲು ಯತ್ನದಲ್ಲಿ ಡೀಪ್‌ಸ್ಕ್ವೇರ್‌ನಲ್ಲಿ ಕ್ಯಾಚಿತ್ತು ವಿಕೆಟ್ ಚೆಲ್ಲಿದರು.
ರಣಜಿಯಲ್ಲಿ ಮೂರನೇ ಪಂದ್ಯ ಆಡುತ್ತಿರುವ ಏಡನ್ ಆಪ್ಪಿಲ್ ಅವರು ಧ್ರುವ್ ಶೋರೆ (16) ಅವರ ವಿಕೆಟ್ ಪಡೆದರು. ಅಜರುದ್ದೀನ್ ಉತ್ತಮ ರೀತಿ ಡೈವಿಂಗ್ ಕ್ಯಾಚ್ ಹಿಡಿದರು.
ಸಂಕ್ಷಿಪ್ತ ಸ್ಕೋರು: ವಿದರ್ಭ: 86 ಓವರುಗಳಲ್ಲಿ 4 ವಿಕೆಟ್‌ಗೆ 254 (ದಾನಿಶ್ ಮಾಲೆವಾರ್ ಔಟಾಗದೇ 138, ಕರುಣ್ ನಾಯರ್ 86; ಎಂ.ಡಿ.ನಿಧೀಶ್ 33ಕ್ಕೆ2) ವಿರುದ್ಧ ಕೇರಳ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.