ADVERTISEMENT

INDW vs IREW | ಮಂದಾನ ಬಳಗಕ್ಕೆ ಐರ್ಲೆಂಡ್ ಸವಾಲು ಇಂದು

ಪಿಟಿಐ
Published 9 ಜನವರಿ 2025, 23:00 IST
Last Updated 9 ಜನವರಿ 2025, 23:00 IST
ಜೆಮಿಮಾ ರಾಡ್ರಿಗಸ್ ಮತ್ತು ಸ್ಮೃತಿ ಮಂದಾನ  
ಜೆಮಿಮಾ ರಾಡ್ರಿಗಸ್ ಮತ್ತು ಸ್ಮೃತಿ ಮಂದಾನ     

ರಾಜ್‌ಕೋಟ್: ಸ್ಮೃತಿ ಮಂದಾನ ನಾಯಕತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು ಶುಕ್ರವಾರ ಐರ್ಲೆಂಡ್ ಎದುರಿನ ಏಕದಿನ ಕ್ರಿಕೆಟ್ ಸರಣಿಯಲ್ಲಿ ಕಣಕ್ಕಿಳಿಯಲಿದೆ. 

ಈಚೆಗೆ ವೆಸ್ಟ್ ಇಂಡೀಸ್ ಎದುರಿನ ಸರಣಿಯಲ್ಲಿ ಜಯಸಾಧಿಸಿ ಭರ್ತಿ ಆತ್ಮವಿಶ್ವಾಸದಲ್ಲಿರುವ ಭಾರತ ತಂಡವು ಐರ್ಲೆಂಡ್‌ ಬಳಗದ ವಿರುದ್ಧವೂ ಜಯಗಳಿಸುವ ನೆಚ್ಚಿನ ತಂಡವಾಗಿದೆ. ವಿಂಡೀಸ್ ಎದುರಿನ ಏಕದಿನ ಸರಣಿಯಲ್ಲಿ 3–0 ಮತ್ತು ಟಿ20 ಸರಣಿಯಲ್ಲಿ 2–1ರಿಂದ ಭಾರತ ಜಯಿಸಿತ್ತು. ಸ್ಮೃತಿ ಏಕದಿನ ಸರಣಿಯಲ್ಲಿ 148 ಮತ್ತು ಟಿ20 ಸರಣಿಯಲ್ಲಿ 193 ರನ್‌ ಸೇರಿಸಿದ್ದರು. ಚುಟುಕು ಮಾದರಿಯಲ್ಲಿ ಸತತ ಮೂರು ಅರ್ಧಶತಕಗಳನ್ನು ಗಳಿಸಿದ್ದರು. 

ಹರ್ಮನ್‌ಪ್ರೀತ್ ಕೌರ್ ಅವರು ವಿಶ್ರಾಂತಿ ಪಡೆದಿರುವುದರಿಂದ ಸ್ಮೃತಿ ಅವರು ತಂಡವನ್ನು ಮುನ್ನಡೆಸುವರು. ಮಧ್ಯಮವೇಗಿ ರೇಣುಕಾ ಸಿಂಗ್ ಅವರೂ ವಿಶ್ರಾಂತಿಗೆ ತೆರಳಿದ್ದಾರೆ. ಇದರಿಂದಾಗಿ ಬೌಲಿಂಗ್ ವಿಭಾಗದ ಹೊಣೆಯು ತಿತಾಸ್ ಸಾಧು ಮತ್ತು ಸೈಮಾ ಥ್ಯಾಕರ್ ಅವರ ಮೇಲೆ ಬೀಳುವುದು.  ಸ್ಪಿನ್ನರ್, ಉಪನಾಯಕಿ ದೀಪ್ತಿ ಶರ್ಮಾ ಅವರೂ ಜೊತೆ ನೀಡಲಿದ್ದಾರೆ.

ADVERTISEMENT

ಉತ್ತಮ ಲಯದಲ್ಲಿರುವ ಹರ್ಲೀನ್ ಡಿಯೊಲ್, ಪ್ರತಿಕಾ ರಾವಳ್ ಮತ್ತು ಜೆಮಿಮಾ ರಾಡ್ರಿಗಸ್ ತಂಡದಲ್ಲಿದ್ದಾರೆ. ಕಳೆದ ಏಕದಿನ ಸರಣಿಯಲ್ಲಿ ಹರ್ಲೀನ್ (160 ರನ್)  ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿದ್ದರು. ಪ್ರತಿಕಾ ಮತ್ತು ಜೆಮಿಮಾ ಕ್ರಮವಾಗಿ 134 ಮತ್ತು 122 ರನ್ ಗಳಿಸಿದ್ದರು. 

ಗ್ಯಾಬಿ ಲೂಯಿಸ್ ನಾಯಕತ್ವದ ಐರ್ಲೆಂಡ್ ತಂಡವು ಇದುವರೆಗೆ (12 ಪಂದ್ಯ) ಭಾರತದ ಎದುರು ಏಕದಿನ ಕ್ರಿಕೆಟ್‌ನಲ್ಲಿ ಗೆದ್ದಿಲ್ಲ. 2023ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಉಭಯ ತಂಡಗಳು ಕೊನೆಯ ಬಾರಿಗೆ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಭಾರತ ಜಯಿಸಿತ್ತು. ಗ್ಯಾಬಿ ಅವರಿಗೆ ಇದು 50ನೇ ಅಂತರರಾಷ್ಟ್ರೀಯ ಪಂದ್ಯವಾಗಲಿದೆ.

ಮೂರು ಪಂದ್ಯಗಳ ಈ ಸರಣಿಯು ಐಸಿಸಿ ಚಾಂಪಿಯನ್‌ಷಿಪ್ ಭಾಗವಾಗಿದೆ.

ಪಂದ್ಯ ಆರಂಭ: ಬೆಳಿಗ್ಗೆ 11

ನೇರಪ್ರಸಾರ: ಸ್ಪೋರ್ಟ್ಸ್‌ 18

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.