ADVERTISEMENT

ಮಂದಾನ ದಾಖಲೆ; ಹರ್ಮನ್‌ಪ್ರೀತ್‌ ಪಡೆಗೆ ಸೋಲು

ನ್ಯೂಜಿಲೆಂಡ್‌ –ಭಾರತ ಮಹಿಳೆಯರ ಮೊದಲ ಟ್ವೆಂಟಿ–20 ಪಂದ್ಯ: ಪ್ರವಾಸಿ ತಂಡಕ್ಕೆ ನಿರಾಸೆ

ಪಿಟಿಐ
Published 6 ಫೆಬ್ರುವರಿ 2019, 17:42 IST
Last Updated 6 ಫೆಬ್ರುವರಿ 2019, 17:42 IST
39 ರನ್‌ ಗಳಿಸಿದ ಜೆಮಿಮಾ ರಾಡ್ರಿಗಸ್ ಅವರ ಬ್ಯಾಟಿಂಗ್ ಶೈಲಿ –ಎಎಫ್‌ಪಿ ಚಿತ್ರ
39 ರನ್‌ ಗಳಿಸಿದ ಜೆಮಿಮಾ ರಾಡ್ರಿಗಸ್ ಅವರ ಬ್ಯಾಟಿಂಗ್ ಶೈಲಿ –ಎಎಫ್‌ಪಿ ಚಿತ್ರ   

ವೆಲಿಂಗ್ಟನ್‌: ಸ್ಫೋಟಕ ಬ್ಯಾಟ್ಸ್‌ವುಮನ್ ಸ್ಮೃತಿ ಮಂದಾನ ಮತ್ತೊಮ್ಮೆ ತಮ್ಮ ಬ್ಯಾಟಿಂಗ್ ಸಾಮರ್ಥ್ಯ ಹೊರಗೆಡವಿದರು. ಮಹಿಳೆಯರ ಟ್ವೆಂಟಿ–20 ಕ್ರಿಕೆಟ್‌ನಲ್ಲಿ ವೇಗದ ಅರ್ಧಶತಕದ ದಾಖಲೆಯನ್ನು ಅವರು ಉತ್ತಮಪಡಿಸಿಕೊಂಡರು. ಆದರೆ ಭಾರತ ತಂಡ ಸೋಲಿಗೆ ಶರಣಾಗಿ ನಿರಾಸೆ ಅನುಭಿವಿಸಿತು.

‌ಇಲ್ಲಿ ಬುಧವಾರ ನಡೆದ ನ್ಯೂಜಿಲೆಂಡ್ ಎದುರಿನ ಟ್ವೆಂಟಿ–20 ಸರಣಿಯ ಮೊದಲ ಪಂದ್ಯದಲ್ಲಿ ಹರ್ಮನ್‌ಪ್ರೀತ್‌ ಕೌರ್ ಬಳಗ 23 ರನ್‌ಗಳಿಂದ ಸೋತಿತು.

ವೆಸ್ಟ್ ಪ್ಯಾಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 159 ರನ್‌ ಗಳಿಸಿತ್ತು. ಕಠಿಣ ಗುರಿ ಬೆನ್ನತ್ತಿದ ಭಾರತ ನಾಲ್ಕು ರನ್‌ ಗಳಿಸಿದ್ದಾಗ ಪ್ರಿಯಾ ಪೂನಿಯಾ ಅವರ ವಿಕೆಟ್ ಕಳೆದುಕೊಂಡಿತು. ಆದರೆ ಮಂದಾನ ಮತ್ತು ಜೆಮಿಮಾ ರಾಡ್ರಿಗಸ್‌ (39;33 ಎಸೆತ; 6 ಬೌಂಡರಿ) ಎರಡನೇ ವಿಕೆಟ್‌ಗೆ 98 ರನ್‌ಗಳ ಜೊತೆಯಾಟ ಆಡಿದರು. 34 ಎಸೆತಗಳಲ್ಲಿ 58 ರನ್‌ ಗಳಿಸಿದ ಮಂದಾನ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ADVERTISEMENT

ಒಂದು ರನ್ ಅಂತರದಲ್ಲಿ ಸ್ಮೃತಿ ಮತ್ತು ಜೆಮಿಮಾ ಔಟಾದ ನಂತರ ತಂಡ ಪತನದತ್ತ ಸಾಗಿತು. ಎಂಟು ಆಟಗಾರ್ತಿಯರು ಎರಡಂಕಿ ಮೊತ್ತ ದಾಟಲು ವಿಫಲರಾದರು. ನಾಯಕಿ ಹರ್ಮನ್‌ಪ್ರೀತ್‌ ಕೌರ್ 15 ಎಸೆತಗಳಲ್ಲಿ 17 ರನ್‌ ಗಳಿಸಿದರು. ನಾಲ್ಕು ಓವರ್‌ಗಳಲ್ಲಿ ಮೂರು ವಿಕೆಟ್ ಉರುಳಿಸಿದ ಮಧ್ಯಮ ವೇಗಿ ಲೀ ತಹುಹು ಭಾರತದ ಪತನಕ್ಕೆ ‍ಪ್ರಮುಖ ಕಾರಣರಾದರು.

ಮಿಂಚಿದ ಸೋಫಿ ಡಿವೈನ್‌:ಆರಂಭಿಕ ಆಟಗಾರ್ತಿ ಸೋಫಿ ಡಿವೈನ್ (62; 48 ಎಸೆತ, 2 ಸಿಕ್ಸರ್‌, 6 ಬೌಂಡರಿ) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನ್ಯೂಜಿಲೆಂಡ್‌ ಉತ್ತಮ ಮೊತ್ತ ಗಳಿಸಿತು. ತಂಡದ ಮೊತ್ತ 11 ರನ್‌ಗಳಾಗಿದ್ದಾಗ ಸೂಸಿ ಬೇಟ್ಸ್ ಔಟಾದರು. ನಂತರ ಆತಿಥೇಯ ಬ್ಯಾಟ್ಸ್‌ವುಮನ್‌ ಭಾರತದ ಬೌಲರ್‌ಗಳನ್ನು ಕಾಡಿದರು.

ಮಿಥಾಲಿಗೆ ಕೊಕ್‌

ಟ್ವೆಂಟಿ–20 ವಿಶ್ವಕಪ್ ಸೆಮಿಫೈನಲ್‌ ಪಂದ್ಯದಲ್ಲಿ ಹಿರಿಯ ಆಟಗಾರ್ತಿ ಮಿಥಾಲಿ ರಾಜ್ ಅವರಿಗೆ ಅವಕಾಶ ನೀಡದೇ ಠೀಕೆಗೆ ಗುರಿಯಾಗಿದ್ದ ಭಾರತ ತಂಡ ನ್ಯೂಜಿಲೆಂಡ್ ಎದುರಿನ ಮೊದಲ ಪಂದ್ಯದಿಂದಲೂ ಮಿಥಾಲಿ ಅವರನ್ನು ಕೈಬಿಟ್ಟಿತು. ಅವರು ತಂಡದಲ್ಲಿ ಇದ್ದಿದ್ದರೆ ಗುರಿ ಬೆನ್ನತ್ತುವ ಕಾರ್ಯ ಸುಲಭವಾಗುತ್ತಿತ್ತು ಎಂಬ ಅಭಿಪ್ರಾಯ ಕೇಳಿ ಬಂದಿದೆ.

ಮಿಥಾಲಿಗೆ ಅವಕಾಶ ನೀಡದೇ ಇದ್ದುದಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಹರ್ಮನ್‌ಪ್ರೀತ್ ಕೌರ್‌ ‘ಯುವ ಆಟಗಾರ್ತಿಯರಿಗೆ ಅವಕಾಶ ನೀಡುವುದು ತಂಡದ ಉದ್ದೇಶವಾಗಿತ್ತು. ಮಿಥಾಲಿ ಅವರನ್ನು ಕೈಬಿಡುವುದಕ್ಕೆ ಇದೊಂದೇ ಕಾರಣ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.