ದೀಪ್ತಿ ಶರ್ಮಾ, ಸ್ಮೃತಿ ಮಂದಾನ, ರಿಚಾ ಘೋಷ್
(ಪಿಟಿಐ ಚಿತ್ರಗಳು)
ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪ್ರಕಟಿಸಿರುವ 2024ರ ವರ್ಷದ ಮಹಿಳಾ ಟ್ವೆಂಟಿ-20 ಕ್ರಿಕೆಟ್ ತಂಡದಲ್ಲಿ ಭಾರತದ ಮೂವರು ಆಟಗಾರ್ತಿಯರು ಸ್ಥಾನ ಪಡೆದಿದ್ದಾರೆ.
ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ, ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ ಮತ್ತು ಆಲ್‌ರೌಂಡರ್ ದೀಪ್ತಿ ಶರ್ಮಾ ತಂಡದಲ್ಲಿದ್ದಾರೆ.
ಈ ಪೈಕಿ ಮಂದಾನ ಹಾಗೂ ದೀಪ್ತಿ ಐಸಿಸಿ ವರ್ಷದ ಮಹಿಳಾ ಏಕದಿನ ಕ್ರಿಕೆಟ್ ತಂಡದಲ್ಲೂ ಗುರುತಿಸಿಕೊಂಡಿದ್ದರು.
ಐಸಿಸಿ ವರ್ಷದ ಮಹಿಳಾ ಟ್ವೆಂಟಿ-20 ತಂಡದಲ್ಲಿ ಭಾರತೀಯರು ಆಟಗಾರ್ತಿಯರು ಅಧಿಪತ್ಯ ಸ್ಥಾಪಿಸಿದ್ದಾರೆ. ದಕ್ಷಿಣ ಆಫ್ರಿಕಾದ ಇಬ್ಬರು ಮತ್ತು ಶ್ರೀಲಂಕಾ, ಇಂಗ್ಲೆಂಡ್, ವೆಸ್ಟ್‌ಇಂಡೀಸ್, ಆಸ್ಟ್ರೇಲಿಯಾ, ಐರ್ಲೆಂಡ್ ಮತ್ತು ಪಾಕಿಸ್ತಾನದ ಒಬ್ಬರು ಆಟಗಾರ್ತಿಯರು ಕಾಣಿಸಿಕೊಂಡಿದ್ದಾರೆ.
ಕಳೆದ ಸಾಲಿನಲ್ಲಿ ಎಂಟು ಅರ್ಧಶತಕಗಳನ್ನು ಗಳಿಸಿರುವ ಮಂದಾನ, 42.38ರ ಸರಾಸರಿಯಲ್ಲಿ (126.53 ಸ್ಟ್ರೈಕ್‌ರೇಟ್) 763 ರನ್ ಗಳಿಸಿದ್ದಾರೆ. ಗರಿಷ್ಠ ಸ್ಕೋರ್ 77 ಆಗಿದೆ.
ಮತ್ತೊಂದೆಡೆ ರಿಚಾ ಘೋಷ್ 21 ಪಂದ್ಯಗಳಲ್ಲಿ 33.18ರ ಸರಾಸರಿಯಲ್ಲಿ (156.65) 365 ರನ್ ಗಳಿಸಿದ್ದಾರೆ.
ಆಲ್‌ರೌಂಡ್ ಆಟಗಾರ್ತಿ ದೀಪ್ತಿ ಶರ್ಮಾ, ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. 23 ಪಂದ್ಯಗಳಲ್ಲಿ 30 ವಿಕೆಟ್ ಹಾಗೂ 115 ರನ್ ಗಳಿಸಿದ್ದಾರೆ.
ಐಸಿಸಿ ವರ್ಷದ ಮಹಿಳಾ ಟಿ20 ತಂಡಕ್ಕೆ ದಕ್ಷಿಣ ಆಫ್ರಿಕಾದ ಲಾರಾ ವೋಲ್ವಾರ್ಟ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಐಸಿಸಿ ವರ್ಷದ ಮಹಿಳಾ ಟ್ವೆಂಟಿ-20 ತಂಡ 2024 ಇಲ್ಲಿದೆ:
ಲಾರಾ ವೋಲ್ವಾರ್ಟ್ (ನಾಯಕಿ), ಮರೈಝನ್ ಕಾಪ್ (ಇಬ್ಬರೂ ದಕ್ಷಿಣ ಆಫ್ರಿಕಾ), ಸ್ಮೃತಿ ಮಂದಾನ, ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ (ಎಲ್ಲರೂ ಭಾರತ), ಚಮಾರಿ ಅಟ್ಟಪಟ್ಟು (ಲಂಕಾ), ಹೇಯ್ಲಿ ಮ್ಯಾಥ್ಯೂಸ್ (ವೆಸ್ಟ್ ಇಂಡೀಸ್), ನ್ಯಾಟ್ ಶಿವರ್ ಬ್ರಂಟ್ (ಇಂಗ್ಲೆಂಡ್), ಅಮೇಲಿ ಕೆರ್ (ಆಸ್ಟ್ರೇಲಿಯಾ), ಒರ್ಲಾ ಪ್ರೆಂಡರ್‌ಗಾಸ್ಟ್ (ಐರ್ಲೆಂಡ್) ಮತ್ತು ಸಾದಿಯಾ ಇಕ್ಬಾಲ್ (ಪಾಕಿಸ್ತಾನ).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.