
ಶಫಾಲಿ ವರ್ಮಾ, ಸ್ಮೃತಿ ಮಂದಾನ
(ಚಿತ್ರ ಕೃಪೆ: ಬಿಸಿಸಿಐ)
ತಿರುವನಂತಪುರ (ಪಿಟಿಐ): ಅಮೋಘ ಲಯದಲ್ಲಿರುವ ಶಫಾಲಿ ವರ್ಮಾ (79) ಮತ್ತು ಉಪನಾಯಕಿ ಸ್ಮೃತಿ ಮಂದಾನ (80) ಮೊದಲ ವಿಕೆಟ್‌ಗೆ ದಾಖಲೆ ಜೊತೆಯಾಟವಾಡಿ ಭಾರತ ದೊಡ್ಡ ಮೊತ್ತ ಪೇರಿಸಲು ನೆರವಾದ ಬಳಿಕ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದರು. ಶ್ರೀಲಂಕಾ ವಿರುದ್ಧ ಟಿ20 ಸರಣಿಯ ನಾಲ್ಕನೇ ಪಂದ್ಯವನ್ನು ಆತಿಥೇಯ ತಂಡ ಭಾನುವಾರ 30 ರನ್‌ಗಳಿಂದ ಗೆದ್ದುಕೊಂಡಿತು.
ಸರಣಿಯಲ್ಲಿ ಭಾರತ 4–0 ಮುನ್ನಡೆ ಗಳಿಸಿತು. ಸರಣಿಯ ಕೊನೆಯ ಪಂದ್ಯ ಇದೇ 30 ರಂದು ಇಲ್ಲಿಯೇ ನಡೆಯಲಿದೆ.
ಸ್ಮೃತಿ ಮಂದಾನ ಮತ್ತು ಶಫಾಲಿ ವರ್ಮಾ ಅವರ ದಾಖಲೆಯ162 ರನ್‌ಗಳ ಜೊತೆಯಾಟದ ನೆರವಿನಿಂದ ಭಾರತ ತಂಡ 2 ವಿಕೆಟ್‌ಗೆ 221 ರನ್‌ಗಳ ದೊಡ್ಡ ಮೊತ್ತ ದಾಖಲಿಸಿತು. ಆರಂಭದಲ್ಲಿ ಶ್ರೀಲಂಕಾ ಹೋರಾಟ ನಡೆಸುವಂತೆ ಕಂಡರೂ ಅಂತಿಮವಾಗಿ ಒತ್ತಡಕ್ಕೆ ಸಿಲುಕಿ 6 ವಿಕೆಟ್‌ಗೆ 191 ರನ್ ಗಳಿಸಲಷ್ಟೇ ಶಕ್ತವಾಯಿತು.
ಸರಣಿಯಲ್ಲಿ ಇದೇ ಮೊದಲ ಬಾರಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತಕ್ಕೆ ಗ್ರೀನ್‌ಫೀಲ್ಡ್ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ಶಫಾಲಿ ಮತ್ತು ಮಂದಾನ ಅಮೋಘ ಆರಂಭ ಒದಗಿಸಿದರು. 15.2 ಓವರುಗಳಲ್ಲಿ 162 ರನ್ ಸೇರಿಸಿದರು. ಲಂಕಾ ಬೌಲರ್‌ಗಳು ಸವಾಲೇ ಆಗಲಿಲ್ಲ. ಇದು ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಯಾವುದೇ ವಿಕೆಟ್‌ಗೆ ದಾಖಲೆ ಜೊತೆಯಾಟ ಎನಿಸಿತು.
ಈ ಹಿಂದಿನ ಪಂದ್ಯಗಳಲ್ಲಿ ವಿಫಲರಾಗಿದ್ದ ಮಂದಾನ ಇಲ್ಲಿ ಲಯಕ್ಕೆ ಮರಳಿದರು. ಈ ಜೋಡಿ ನಾಲ್ಕನೇ ಬಾರಿ ಶತಕದ ಜೊತೆಯಾಟದಲ್ಲಿ ಭಾಗಿಯಾಯಿತು. ಮಾತ್ರವಲ್ಲ, 2019ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಗ್ರಾಸ್ ಐಲ್‌ನಲ್ಲಿ ತಾವೇ ಸ್ಥಾಪಿಸಿದ್ದ ಈ ಹಿಂದಿನ ದಾಖಲೆ (143 ರನ್) ಸುಧಾರಿಸಿದರು.
ಈ ಹಿಂದಿನ ಎರಡು ಪಂದ್ಯಗಳಲ್ಲಿ ಅಜೇಯ ಅರ್ಧ ಶತಕ ಗಳಿಸಿದ್ದ ಶಫಾಲಿ ಈ ಪಂದ್ಯದಲ್ಲೂ ಅದೇ ಲಹರಿಯಲ್ಲಿ ರನ್ ಪೇರಿಸುತ್ತಾ ಸಾಗಿದರು. ಅವರು ಈ ಮಾದರಿಯಲ್ಲಿ ಚೊಚ್ಚಲ ಶತಕ ಗಳಿಸುವ ಆಸೆ ಈಡೇರಲಿಲ್ಲ. 16ನೇ ಓವರಿನಲ್ಲಿ ನಿಮಶಾ ಮೀಪಗೆ ತಮ್ಮದೇ ಬೌಲಿಂಗ್‌ನಲ್ಲಿ ಶಫಾಲಿ ಅವರ ಕ್ಯಾಚ್ ಹಿಡಿದರು. 46 ಎಸೆತಗಳ ಅವರ ಇನಿಂಗ್ಸ್‌ನಲ್ಲಿ 12 ಬೌಂಡರಿ, ಒಂದು ಸಿಕ್ಸರ್ ಇತ್ತು.
ಶಫಾಲಿ ಬೆನ್ನ ಹಿಂದೆಯೇ ಮಂದಾನ ಸಹ ನಿರ್ಗಮಿಸಿದರು. ಅವರು 48 ಎಸೆತಗಳಲ್ಲಿ 11 ಬೌಂಡರಿ, ಮೂರು ಸಿಕ್ಸರ್ ಬಾರಿಸಿದರು. ಕೊನೆಯಲ್ಲಿ ರಿಚಾ ಘೋಷ್ ಕೇವಲ 16 ಎಸೆತಗಳಲ್ಲಿ ಅಜೇಯ 40 ರನ್ ಸಿಡಿಸಿ ಮೊತ್ತ 200 ದಾಟಿಸಲು ನೆರವಾದರು. ನಾಯಕಿ ಹರ್ಮನ್‌ಪ್ರೀತ್ ಕೌರ್ ಅಜೇಯ 16 ರನ್ (9 ಎಸೆತ) ಗಳಿಸಿದರು.
ಲಂಕಾ ತಂಡಕ್ಕೆ ಹಸಿನಿ ಪೆರೇರಾ (33, 20ಎ) ಮತ್ತು ನಾಯಕಿ ಚಾಮರಿ ಅಟಪಟ್ಟು (52, 37ಎ, 4x3, 6x3) ಅವರು 5.3 ಓವರುಗಳಲ್ಲಿ 59 ರನ್ ಸೇರಿಸುವ ಮೂಲಕ ಉತ್ತಮ ಆರಂಭ ಒದಗಿಸಿದರು. ಚಾಮರಿ ಮತ್ತು ಇಮೇಶಾ ದುಲಾನಿ (29, 28ಎ) ಅವರು ಎರಡನೇ ವಿಕೆಟ್‌ಗೆ 57 ರನ್ ಸೇರಿಸಿದರು. ನಂತರ ನಿಯಮಿತವಾಗಿ ವಿಕೆಟ್‌ಗಳು ಬಿದ್ದು ಪ್ರವಾಸಿ ತಂಡ ಒತ್ತಡಕ್ಕೆ ಸಿಲುಕಿತು. ಸ್ಪಿನ್ನರ್ ವೈಷ್ಣವಿ ಶರ್ಮಾ 24ಕ್ಕೆ2 ವಿಕೆಟ್ ಪಡೆದರೆ, ಮಧ್ಯಮ ವೇಗಿ ಅರುಂಧತಿ 42ಕ್ಕೆ 2 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರು: 20 ಓವರುಗಳಲ್ಲಿ 2 ವಿಕೆಟ್‌ಗೆ 221 (ಸ್ಮೃತಿ ಮಂದಾನ 80, ಶಫಾಲಿ ವರ್ಮಾ 79, ರಿಚಾ ಘೋಷ್ ಔಟಾಗದೇ 40, ಹರ್ಮನ್‌ಪ್ರೀತ್ ಕೌರ್ ಔಟಾಗದೇ 16);
ಶ್ರೀಲಂಕಾ: 20 ಓವರುಗಳಲ್ಲಿ 6 ವಿಕೆಟ್‌ಗೆ 191 (ಹಸಿನಿ ಪೆರೇರಾ 33, ಚಾಮರಿ ಅಟಪಟ್ಟು 52, ಇಮೇಶಾ ದುಲಾನಿ 29, ಹರ್ಷಿತಾ ಸಮರವಿಕ್ರಮ 20; ಅರುಂಧತಿ ರೆಡ್ಡಿ 42ಕ್ಕೆ2, ವೈಷ್ಣವಿ ಶರ್ಮಾ 24ಕ್ಕೆ2).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.