ADVERTISEMENT

ಭರವಸೆ ಮೂಡಿಸಿದ ಸಕ್ಕರೆ ನಾಡಿನ ಹುಡುಗ ಕೃತಿಕ್

ಎಂ.ಎನ್.ಯೋಗೇಶ್‌
Published 24 ನವೆಂಬರ್ 2019, 19:30 IST
Last Updated 24 ನವೆಂಬರ್ 2019, 19:30 IST
ಅಭ್ಯಾಸನಿರತ ಕೃತಿಕ್‌ ಅವರ ವಿಕೆಟ್‌ ಕೀಪಿಂಗ್‌ ವೈಖರಿ
ಅಭ್ಯಾಸನಿರತ ಕೃತಿಕ್‌ ಅವರ ವಿಕೆಟ್‌ ಕೀಪಿಂಗ್‌ ವೈಖರಿ   

ಕರ್ನಾಟಕದ ಹಲವು ಪ್ರತಿಭೆಗಳು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚು ಹರಿಸಿದ್ದಾರೆ. 19 ವರ್ಷದೊಳಗಿನವರ ಭಾರತ ಕ್ರಿಕೆಟ್‌ ತಂಡದಲ್ಲಿ ಸ್ಥಾನ ಗಳಿಸಿರುವ ಕೃತಿಕ್‌ ಕೂಡ ಉತ್ತಮ ಸಾಮರ್ಥ್ಯ ತೋರುವ ವಿಶ್ವಾಸದಲ್ಲಿದ್ದಾರೆ.

ಭಾರತ ತಂಡ ಕಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ವಿಕೆಟ್‌ ಕೀಪರ್‌ ಮಹೇಂದ್ರ ಸಿಂಗ್‌ ಧೋನಿ ಅವರ ಅಪ್ಪಟ ಅಭಿಮಾನಿ ಸಕ್ಕರೆ ನಾಡಿನ ಹುಡುಗ ಕೃತಿಕ್‌ ಕೃಷ್ಣ. ಅವರಂತೆಯೇ ವಿಕೆಟ್‌ ಕೀಪರ್‌– ಬ್ಯಾಟ್ಸ್‌ಮನ್‌ ಆಗಲು ಬಯಸಿದ್ದಾರೆ. ಈಗ ಅಫ್ಗಾನಿಸ್ತಾನ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಗೆ 19 ವರ್ಷದೊಳಗಿನವರ ಭಾರತ ತಂಡದಲ್ಲಿ ಕೃತಿಕ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಅಫ್ಗಾನಿಸ್ತಾನ ಎದುರಿನ ಐದು ಪಂದ್ಯಗಳ ಸರಣಿ ಉತ್ತರ ಪ್ರದೇಶದ ಲಖನೌದಲ್ಲಿ ನವೆಂಬರ್‌ 22ರಂದು ಆರಂಭವಾಗಿದ್ದು, 30ರವರೆಗೆ ನಡೆಯಲಿದೆ. ಅಂತಿಮ 11ರ ಬಳಗದಲ್ಲಿ ಅವಕಾಶ ಸಿಕ್ಕರೆ ತಮ್ಮ ಸಾಮರ್ಥ್ಯ ತೋರಿಸುವ ವಿಶ್ವಾಸವನ್ನು ಕೃತಿಕ್‌ ಹೊಂದಿದ್ದಾರೆ.

ADVERTISEMENT

ಎಡಗೈ ಬ್ಯಾಟ್ಸ್‌ಮನ್‌ ಆಗಿರುವ ಅವರು ಕೆಎಸ್‌ಸಿಎ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಕಳೆದ ತಿಂಗಳು ನಡೆದ ಚಾಲೆಂಜರ್ಸ್‌ ಟ್ರೋಫಿ ಟೂರ್ನಿಯಲ್ಲಿ ‌ಭಾರತ ಕಿರಿಯರ ‘ಬಿ’ ತಂಡದಲ್ಲಿ ಆಡಿದ್ದರು. ‘ಎ’ ತಂಡದ ವಿರುದ್ಧ ಪಂದ್ಯದಲ್ಲಿ ಮೂರು ಕ್ಯಾಚ್‌ ಪಡೆದಿದ್ದರು. ಪಂದ್ಯ ವೀಕ್ಷಿಸಿದ್ದ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ ಮುಖ್ಯಸ್ಥ ರಾಹುಲ್‌ ದ್ರಾವಿಡ್‌ ಅವರು ಕೃತಿಕ್‌ನ ವಿಕೆಟ್‌ ಕೀಪಿಂಗ್‌ ಶೈಲಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮಾಜಿ ವಿಕೆಟ್‌ ಕೀಪರ್‌ ಕಿರಣ್‌ ಮೋರೆ ನೇತೃತ್ವದಲ್ಲಿ ಬಿಸಿಸಿಐ ಆಯೋಜಿಸಿದ್ದ ವಿಕೆಟ್‌ ಕೀಪಿಂಗ್‌ ವಿಶೇಷ ತರಬೇತಿಗೆ ಕೃತಿಕ್‌ ಆಯ್ಕೆಯಾಗಿದ್ದರು. ಅಕ್ಟೋಬರ್‌ನಲ್ಲಿ ಕೆಎಸ್‌ಸಿಎ ವತಿಯಿಂದ ನಡೆದ 19 ವರ್ಷದೊಳಗಿನ ವಿನೂ ಮಂಕಡ್‌ ಟೂರ್ನಿಯಲ್ಲಿ ಅವರು ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. ರಾಜಸ್ಥಾನ ವಿರುದ್ಧ ನಡೆದ ಪಂದ್ಯದಲ್ಲಿ 49 ಎಸೆತಗಳಲ್ಲಿ 49 ರನ್‌ ಪೇರಿಸಿದ್ದರು. ಜೊತೆಗೆ ನಾಲ್ಕು ಕ್ಯಾಚ್‌ ಹಾಗೂ ಎರಡು ಸ್ಟಂಪ್‌ ಔಟ್‌ ಮಾಡಿ ತಂಡಕ್ಕೆ 123 ರನ್‌ಗಳ ಜಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಬಾಲ್ಯದಿಂದಲೇ ಕ್ರಿಕೆಟ್ ಸೆಳೆತ

ಜಿ.ಎಸ್‌.ಕೃಷ್ಣಶೆಟ್ಟಿ ಹಾಗೂ ಎಂ.ಆರ್‌.ಕೃಪಾ ದಂಪತಿಯ ಪುತ್ರನಾದ ಕೃತಿಕ್‌ ಮಂಡ್ಯ ತಾಲ್ಲೂಕಿನ ಗೋಪಾಲಪುರ ಗ್ರಾಮದವರು. ಸದ್ಯ ಮಂಡ್ಯದ ಬಂದೀಗೌಡ ಬಡಾವಣೆಯಲ್ಲಿ ವಾಸವಿರುವ ಈ ಆಟಗಾರ ಇದೇ ನಗರದ ಪಿಇಎಸ್ ಕಾಲೇಜಿನಲ್ಲಿ ದ್ವಿತೀಯ ಪಿ.ಯು. ವ್ಯಾಸಂಗ ಮಾಡುತ್ತಿದ್ದಾರೆ. ಮೂರನೇ ತರಗತಿಯಿಂದಲೂ ಪಿಇಟಿ ಕ್ರಿಕೆಟ್‌ ಸಂಸ್ಥೆಯ ಎಂ.ಮಹದೇವ್‌ ಬಳಿ ತರಬೇತಿ ಪಡೆಯುತ್ತಿದ್ದಾರೆ.

6ನೇ ತರಗತಿಯಿಲ್ಲಿದ್ದಾಗ ಸ್ಕೂಲ್‌ ಗೇಮ್‌ ಫೆಡರೇಷನ್‌ ಆಫ್‌ ಇಂಡಿಯಾ ವತಿಯಿಂದ ನಡೆದ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಆಡಿದ್ದರು. 7ನೇ ತರಗತಿಯಿಂದ ಮೈಸೂರು ವಿಭಾಗೀಯ ಮಟ್ಟದಲ್ಲಿ ಸತತವಾಗಿ ಕೆಎಸ್‌ಸಿಎ ಟೂರ್ನಿಗಳಿಗೆ ಆಯ್ಕೆಯಾಗಿದ್ದಾರೆ. 14 ವರ್ಷ, 16 ವರ್ಷ ಹಾಗೂ 19 ವರ್ಷದೊಳಗಿನವರ ಟೂರ್ನಿಗಳಲ್ಲಿ ಆಡಿ ಉತ್ತಮ ಪ್ರದರ್ಶನ ತೋರಿದ್ದಾರೆ.

ಕ್ರಿಕೆಟ್‌ ಮಾತ್ರವಲ್ಲದೇ ಓದಿನಲ್ಲೂ ಕೃತಿಕ್‌ ಮುಂದಿದ್ದಾರೆ. ಜೊತೆಗೆ ಈಜು ತರಬೇತಿಯನ್ನೂ ಪಡೆದಿರುವ ಅವರು ಹಲವು ಬಹುಮಾನಗಳನ್ನು ಗೆದ್ದಿದ್ದಾರೆ. ಚಿತ್ರಕಲೆಯಯಲ್ಲೂ ‌ಪ್ರತಿಭೆ ತೋರಿದ್ದಾರೆ. ಧೋನಿ ಅವರ ಆಟವನ್ನೇ ಅನುಸರಿಸುವ ಕೃತಿಕ್‌ ಅವರಂತೆಯೇ ಹೇರ್‌ಸ್ಟೈಲ್‌ ಮಾಡಿಸಿಕೊಂಡು ಕ್ರೀಡಾಂಗಣಕ್ಕಿಳಿಯುತ್ತಾರೆ.

ಕ್ರಿಕೆಟ್‌ ಮೇಲೆ ಕೃತಿಕ್‌ಗಿದ್ದ ಶ್ರದ್ಧೆ ಆತನನ್ನು ಭಾರತ ತಂಡಕ್ಕೆ ಆಯ್ಕೆಯಾಗುವಂತೆ ಮಾಡಿದೆ. ನನ್ನ ವಿದ್ಯಾರ್ಥಿ ಮತ್ತಷ್ಟು ಎತ್ತರಕ್ಕೆ ಏರುತ್ತಾನೆ ಎಂಬ ವಿಶ್ವಾಸವಿದೆ.
- ಎಂ.ಮಹದೇವ್‌, ಕೋಚ್‌, ಪಿಇಟಿ, ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.