ADVERTISEMENT

ಐಪಿಎಲ್: ವಿರಾಟ್ ಅಮೋಘ ಲಯ ಆರ್‌ಸಿಬಿಗೆ ಬಲ

ಗ್ಲೆನ್ ಮ್ಯಾಕ್ಸ್‌ವೆಲ್ ಮೇಲೆ ಅಪಾರ ನಿರೀಕ್ಷೆ: ಮೈಕ್ ಹೆಸನ್

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2021, 19:30 IST
Last Updated 31 ಮಾರ್ಚ್ 2021, 19:30 IST
ಮೊಹಮ್ಮದ್ ಸಿರಾಜ್
ಮೊಹಮ್ಮದ್ ಸಿರಾಜ್   

ಬೆಂಗಳೂರು: ವಿರಾಟ್ ಕೊಹ್ಲಿ ಸದ್ಯ ಅಮೋಘ ಲಯದಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅವರ ಬ್ಯಾಟಿಂಗ್ ಅದ್ಭುತವಾಗಿತ್ತು. ಇದರಿಂದಾಗಿ ಈ ಬಾರಿ ಐಪಿಎಲ್‌ನಲ್ಲಿ ನಮ್ಮ ತಂಡದ ಬ್ಯಾಟಿಂಗ್‌ ಪಡೆಯ ಬಲವರ್ಧನೆಯಾಗಿದೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ರಿಕೆಟ್ ನಿರ್ದೇಶಕ ಮೈಕ್ ಹೆಸನ್ ಹೇಳಿದ್ದಾರೆ.

‘ವಿರಾಟ್ ಅಗ್ರಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ಆ ಸ್ಥಾನದಲ್ಲಿದ್ದು ಯಾವ ರೀತಿ ಆಡಬೇಕು ಮತ್ತು ಒತ್ತಡ ನಿಭಾಯಿಸಬೇಕೆಂಬ ಅಪಾರ ಅನುಭವ ಅವರಿಗೆ ಇದೆ. ಇದು ತಂಡದ ಆತ್ಮವಿಶ್ವಾಸವನ್ನು ಗಟ್ಟಿಯಾಗಿಸುತ್ತದೆ‘ ಎಂದು ಬುಧವಾರ ನಡೆದ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಇರುವುದು ಹೊಸ ಭರವಸೆ ಮೂಡಿಸಿದೆ. ಮಧ್ಯದ ಮತ್ತು ಅಂತಿಮ ಹಂತದ ಓವರ್‌ಗಳಲ್ಲಿ ಬ್ಯಾಟಿಂಗ್ ಮಾಡುವಲ್ಲಿ ಗ್ಲೆನ್ ನಿಪುಣರು. ಅವರು ತಂಡಕ್ಕೆ ಬರಲಿದ್ದಾರೆ. ಬಂದಾಗ ಅವರೊಂದಿಗೆ ವಿಸ್ತೃತವಾಗಿ ಚರ್ಚೆ ನಡೆಸುತ್ತೇನೆ. ಅವರು ತಮ್ಮ ಹೊಣೆಯನ್ನು ಅರ್ಥ ಮಾಡಿಕೊಂಡು ಆಡಿದರೆ ತಂಡದ ಯಶಸ್ಸು ಖಚಿತ‘ ಎಂದರು.

ADVERTISEMENT

ಈ ಸಲದ ಹರಾಜು ಪ್ರಕ್ರಿಯೆಯಲ್ಲಿ ಆರ್‌ಸಿಬಿಯು ಮ್ಯಾಕ್ಸ್‌ವೆಲ್ ಅವರನ್ನು ₹14.25 ಕೋಟಿಗೆ ಖರೀದಿಸಿತ್ತು. ಹೋದ ವರ್ಷ ಗ್ಲೆನ್ ಪಂಜಾಬ್ ಕಿಂಗ್ಸ್‌ ತಂಡದಲ್ಲಿದ್ದರು. ಈ ಬಾರಿ ತಂಡಕ್ಕೆ ಸೇರ್ಪಡೆಯಾಗಿರುವ

ನ್ಯೂಜಿಲೆಂಡ್‌ನ 6.9 ಅಡಿ ಎತ್ತರದ ಕೈಲಿ ಜೆಮಿಸನ್ ಕುರಿತು ಮಾತನಾಡಿದ ಹೆಸನ್, ‘ಭಾರತದ ಪಿಚ್‌ಗಳಲ್ಲಿಯೂ ಬೌನ್ಸರ್‌ಗಳನ್ನು ಪರಿಣಾಮಕಾರಿಯಾಗಿ ಪ್ರಯೋಗಿಸಬಲ್ಲ ಸಾಮರ್ಥ್ಯ ಅವರಿಗೆ ಇದೆ. ಅಲ್ಲದೇ ಕೆಲವು ಪಿಚ್‌ಗಳಲ್ಲಿ ಅವರ ಸ್ವಿಂಗ್, ಕಟರ್‌ಗಳೂ ಪರಿಣಾಮಕಾರಿಯಾಗಬಲ್ಲವು. ಬ್ಯಾಟಿಂಗ್‌ನಲ್ಲಿಯೂ ಸಿಕ್ಸರ್‌, ಬೌಂಡರಿ ಸಿಡಿಸುವ ಕಲೆ ಅವರಿಗೆ ಗೊತ್ತಿದೆ. ಇದರಿಂದಾಗಿ ತಂಡಕ್ಕೆ ಅನುಕೂಲವಾಗಲಿದೆ‘ ಎಂದರು.

‘ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈಚೆಗೆ ಬಹಳಷ್ಟು ಯಶಸ್ಸು ಗಳಿಸಿರುವ ಮೊಹಮ್ಮದ್ ಸಿರಾಜ್ ಮತ್ತು ನವದೀಪ್ ಸೈನಿ ಅವರೊಂದಿಗೆ ಜೆಮಿಸನ್ ಇರುವುದರಿಂದಾಗಿ ಬೌಲಿಂಗ್ ವಿಭಾಗವೂ ಬಲಿಷ್ಠವಾಗಿದೆ. ಸೈನಿ ವಿಭಿನ್ನ ರೀತಿಯ ಲೆಂಗ್ತ್‌ ಮತ್ತು ಲೈನ್ ನಲ್ಲಿ ಎಸೆತಗಳನ್ನು ಹಾಕುತ್ತಾರೆ‘ ಎಂದರು.

ಇದೇ ಮೊದಲ ಬಾರಿಗೆ ತಂಡದಲ್ಲಿ ಸ್ಥಾನ ಪಡೆದಿರುವ ಮಧ್ಯಪ್ರದೇಶದ ರಜತ್ ಪಾಟಿದಾರ್ ಮತ್ತು ಕೇರಳದ ಮೊಹಮ್ಮದ್ ಅಜರುದ್ಧೀನ್ ಅವರು ಪ್ರತಿಭಾನ್ವಿತ ಆಟಗಾರರು ಎಂದೂ ಹೇಸನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.