ADVERTISEMENT

ಆಳ–ಅಗಲ: ಐಪಿಎಲ್ ಅಕ್ಷಯ ಪಾತ್ರೆ!

ಪ್ರಸಾರ ಹಕ್ಕು ಮಾರಾಟದಿಂದ ₹50 ಸಾವಿರ ಕೋಟಿ ಆದಾಯ ನಿರೀಕ್ಷೆ

ಗಿರೀಶದೊಡ್ಡಮನಿ
Published 25 ಏಪ್ರಿಲ್ 2022, 19:16 IST
Last Updated 25 ಏಪ್ರಿಲ್ 2022, 19:16 IST
ಅಭಿಮಾನಿಗಳ ಸಡಗರ
ಅಭಿಮಾನಿಗಳ ಸಡಗರ   

ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ ಅಕ್ಷಯ ಪಾತ್ರೆಯಂತೆ ಬೆಳೆಯುತ್ತಿದೆ. ಮುಟ್ಟಿದ್ದೆಲ್ಲವೂ ಚಿನ್ನವೆಂಬಂತೆ ವರ್ಷದಿಂದ ವರ್ಷಕ್ಕೆ ಆದಾಯ ಗಳಿಕೆ ಆಗಸಮುಖಿಯಾಗುತ್ತಿದೆ.

ಇದೀಗ ಮುಂದಿನ ವರ್ಷದಿಂದ ಹೊಸದಾಗಿ ನೀಡಲಾಗುವ ಐದು ವರ್ಷಗಳ ಮಾಧ್ಯಮ ಪ್ರಸಾರ ಹಕ್ಕುಗಳ ಆದಾಯದ ಮೇಲೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಕಣ್ಣು ನೆಟ್ಟಿದೆ. ₹ 50 ಸಾವಿರ ಕೋಟಿ ಅದಾಯದ ನಿರೀಕ್ಷೆಯಲ್ಲಿದೆ. ಇದು ಹಿಂದೆಂದಿಗಿಂತಲೂ ಹೆಚ್ಚು. ಹೈಜಂಪ್‌ನಲ್ಲಿ ಒಂದೊಂದೆ ಜಿಗಿತದ ನಂತರ ಸರಳಿನ ಎತ್ತರವನ್ನು ಇಷ್ಟಿಷ್ಟೇ ಏರಿಸಿಕೊಂಡು ಹೋಗುವ ಮಾದರಿಯಲ್ಲಿ ಐಪಿಎಲ್‌ ಪ್ರಸಾರ ಹಕ್ಕುಗಳೂ ಜಿಗಿತ ಕಂಡಿವೆ.

‘ಸುಪ್ರಸಿದ್ಧವಾದ ನಾಟಕ, ಸುಂದರವಾದ ಬ್ಯಾಲೆ ಡ್ಯಾನ್ಸ್‌, ಒಪೆರಾ ಮತ್ತು ನೃತ್ಯಗಳಂತೆಯೇ ಕ್ರಿಕೆಟ್‌ ಕೂಡ ಅಗ್ರಮಾನ್ಯ ನಾಟಕವಾಗಿದೆ. ಮನರಂಜನೆ ಕಣಜ ಇದೆ’ ಎಂದು ಲೇಖಕ ಸಿ.ಎಲ್.ಆರ್. ಜೇಮ್ಸ್‌ ಆರು ದಶಕಗಳ ಹಿಂದೆ ಹೇಳಿದ್ದರು. ಬಹುಶಃ ಈಗಿನ ಕಾಲಘಟ್ಟದಲ್ಲಿ ಅವರು ಇದ್ದಿದ್ದರೆ ‘ಮನರಂಜನೆಯ ಅತಿ ದೊಡ್ಡ ಮಾರುಕಟ್ಟೆ’ ಇದು ಎಂದು ಬಣ್ಣಿಸುತ್ತಿದ್ದರೆನೋ?

ADVERTISEMENT

2008ರಿಂದ ಆರಂಭವಾದ ಈ ಟೂರ್ನಿ ಈಗ ಕಾರ್ಪೊರೇಟ್ ಸಂಸ್ಥೆಗಳಿಗೆ ಅತ್ಯಂತ ಪ್ರಿಯವಾದ ಮಾಧ್ಯಮ. ಅಬಾಲವೃದ್ಧರಾದಿಯಾಗಿ ಎಲ್ಲರನ್ನೂ ಆಕರ್ಷಿಸುವ ಪ್ರತಿವರ್ಷ ಕೋಟಿ ಕೋಟಿ ಜನರನ್ನು ಒಂದೂವರೆ ತಿಂಗಳು ಹಿಡಿದಿಟ್ಟುಕೊಳ್ಳುವ ‘ಜಾದೂ‘ವನ್ನು ಆದಾಯದಲ್ಲಿ ಪರಿವರ್ತಿಸುವ ಚಾಣಾಕ್ಷತನವನ್ನು ಬಿಸಿಸಿಐ ಮಾಡಿದೆ. ಅದಕ್ಕಾಗಿಯೇ ಜಗತ್ತಿನ ಶ್ರೀಮಂತ ಕ್ರೀಡಾ ಸಂಸ್ಥೆಗಳಲ್ಲಿ ಒಂದಾಗಿದೆ. ಕೊರೊನಾ ಕಾಲಘಟ್ಟದಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾದ ಕ್ರಿಕೆಟ್ ಸಂಸ್ಥೆಗಳು ಆರ್ಥಿಕ ಮುಗ್ಗಟ್ಟಿನಿಂದ ಪರದಾಡಿದ್ದವು. ಆದರೆ, ಬಿಸಿಸಿಐಗೆ ಮಾತ್ರ ಬರುವ ಆದಾಯದಲ್ಲಿ ಒಂದಿಷ್ಟು ಖೋತಾ ಆಗಿದ್ದು ಬಿಟ್ಟರೆ, ನಷ್ಟವೇನೂ ಆಗಿರಲಿಲ್ಲ!

ಇದೀಗ 2023 ರಿಂದ 2027ರ ಅವಧಿಗೆ ಆಹ್ವಾನಿಸಿರುವ ಮಾಧ್ಯಮ ಬಿಡ್‌ನಿಂದ ಅಂದಾಜು ₹ 50 ಸಾವಿರ ಕೋಟಿ ಆದಾಯ ನಿರೀಕ್ಷೆ ಮಾಡುತ್ತಿದೆ. ಸ್ಟಾರ್ ಸ್ಪೋರ್ಟ್ಸ್, ಸೋನಿ, ರಿಲಯನ್ಸ್‌ ಸಮೂಹ, ಅಮೆಜಾನ್ ಪ್ರೈಮ್ ಸಂಸ್ಥೆಗಳೂ ಪೈಪೋಟಿಗಿಳಿದಿವೆ.

ಕ್ರಿಕೆಟ್–ಮಾಧ್ಯಮ ಸಂಬಂಧ: ಕ್ರಿಕೆಟ್‌ ಬೆಳವಣಿಗೆಯಲ್ಲಿ ಮಾಧ್ಯಮಗಳ ಪಾತ್ರ ಬಹುದೊಡ್ಡದು. ಇಂಗ್ಲೆಂಡ್‌ನಲ್ಲಿ ಜನಿಸಿದ ಈ ಕ್ರೀಡೆಯ ಜನಪ್ರಿಯತೆಗೆ ಇಂಗ್ಲಿಷ್ ಬರೆಹಗಾರರ ಕಾಣಿಕೆ ದೊಡ್ಡದು. ನೆವಿಲ್ ಕಾರ್ಡಸ್, ಸಿ.ಎಲ್‌.ಆರ್. ಜೇಮ್ಸ್‌ ಮತ್ತಿತರ ಲೇಖಕರ ಬರಹಗಳು ಇಂದಿಗೂ ಕ್ರಿಕೆಟ್‌ನ ಸೌಂದರ್ಯದ ಪ್ರತೀಕವಾಗಿವೆ. ಟಿವಿಗಳು ಬಂದ ಮೇಲೆ ಕ್ರಿಕೆಟ್ ಮತ್ತು ಮಾಧ್ಯಮ ಬಾಂಧವ್ಯ ಮತ್ತಷ್ಟು ನಿಕಟವಾಯಿತು. ಆದರೆ, ಕ್ರಿಕೆಟ್‌ ಜೊತೆಗೆ ಉಳಿದ ಕ್ರೀಡೆಗಳನ್ನೂ ಅಪಾರವಾಗಿ ಪ್ರೀತಿಸುವ ಯುರೋಪಿಗಿಂತ ಭಾರತದಲ್ಲಿ ಈ ಸಂಬಂಧ ಗಾಢವಾಯಿತು.

ಅದರಲ್ಲಿಯೂ 1983ರಲ್ಲಿ ಕಪಿಲ್ ದೇವ್ ಬಳಗವು ಏಕದಿನ ವಿಶ್ವಕಪ್ ಜಯಿಸಿದ ನಂತರ ಕ್ರಿಕೆಟ್ ಮಗ್ಗಲು ಬದಲಾಯಿಸಿತು. ಬಹುಕೋಟಿ ಅಭಿಮಾನಿಗಳು ಭಾರತದಲ್ಲಿ ಜನಿಸಿದರು. ಕಪಿಲ್ ಪ್ರಭಾವ ಬಿರುಗಾಳಿಯಂತೆ ಬೀಸಿತು. ಗಲ್ಲಿ ಕ್ರಿಕೆಟ್ ಆರಂಭವಾದವು. ಕ್ರಿಕೆಟ್ ವೀಕ್ಷಿಸಲು ಮನೆಗೊಂದು ಟಿವಿ ತರುವ ಸಂಪ್ರದಾಯ ದೇಶದ ಮಧ್ಯಮವರ್ಗದಲ್ಲಿ ಆರಂಭವಾಯಿತು. 90ರ ದಶಕದಲ್ಲಿ ಸಚಿನ್ ತೆಂಡೂಲ್ಕರ್ ಎಂಬ ಎಳೆಯ ಪ್ರತಿಭೆಯ ಉದಯ ಕ್ರಿಕೆಟ್‌ ಜನಪ್ರಿಯತೆಯನ್ನು ಮತ್ತಷ್ಟು ಉತ್ತುಂಗಕ್ಕೇರಿಸಿತು. ಅಲ್ಲಿಯವರೆಗೆ ವೀಕ್ಷಕ ವಿವರಣೆಗಾಗಿ ಕಿವಿ ಕಚ್ಚಿಕೊಂಡಿದ್ದ ಪಾಕೆಟ್ ರೇಡಿಯೋಗಳು ಮೆಲ್ಲಗೆ ಸ್ಥಾನ ಕಳೆದುಕೊಳ್ಳತೊಡಗಿದವು. ದೂರದರ್ಶನ ವಾಹಿನಿ (ಆಗ ಇದ್ದಿದ್ದು ಅದೊಂದೇ ಚಾನೆಲ್) ಮನೆ ಮತ್ತು ಮನಸ್ಸುಗಳಿಗೆ ಹತ್ತಿರವಾಯಿತು. ಅಗಿನ ರಾಮಾಯಣ ಮತ್ತು ಮಹಾಭಾರತ ಧಾರಾವಾಹಿಗಳಿಗಿಂತಲೂ ಹೆಚ್ಚಿನ ಜನಪ್ರಿಯತೆ ಗಳಿಸಿದ್ದು ಕ್ರಿಕೆಟ್‌. ಟಿವಿ ಸೆಟ್‌ಗಳನ್ನು ಮಾರಾಟ ಮಾಡಲೂ ಎಲೆಕ್ಟ್ರಾನಿಕ್ ಅಂಗಡಿಗಳು, ಕಂಪೆನಿಗಳು ಕ್ರಿಕೆಟ್‌ ಆಟವನ್ನೇ ನೆಚ್ಚಿಕೊಂಡವು. ತಮ್ಮ ಮಳಿಗೆಗಳ ಮುಂದೆ ದೊಡ್ಡ ಗಾಜಿನ ಪೆಟ್ಟಿಗೆಗಳಲ್ಲಿ ಹತ್ತಾರು ಟಿವಿಗಳನ್ನು ಇಟ್ಟು ಕ್ರಿಕೆಟ್ ಪಂದ್ಯದ ನೇರಪ್ರಸಾರ ತೋರಿಸುತ್ತಿದ್ದರು. ಅವುಗಳ ಮುಂದೆ ನೂರಾರು ಜನರು ಮೈಮರೆತು ನಿಂತು ವೀಕ್ಷಿಸುತ್ತಿದ್ದರು. ಕಿಸೆ ಪಿಕ್ ಪಾಕೆಟ್ ಆದರೂ, ಕಾಲುನೋವಾದರೂ ಪ್ರತಿಯೊಂದು ಎಸೆತವನ್ನು ಆನಂದಿಸುವುದನ್ನು ಬಿಡುತ್ತಿರಲಿಲ್ಲ. 1992ರಲ್ಲಿ ಜಾಗತೀಕರಣವೂ ಕ್ರಿಕೆಟ್‌ಗೆ ವರದಾನವಾಯಿತು. ಬಹುರಾಷ್ಟ್ರೀಯ ಕಂಪೆನಿಗಳು ಭಾರತಕ್ಕೆ ಕಾಲಿಟ್ಟವು. ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಪ್ರಚಾರ ಮಾಡಲು ಕ್ರಿಕೆಟ್‌ ದೊಡ್ಡ ವೇದಿಕೆಯಾಗಿ ಕಂಡಿತ್ತು.

1999–2000ನೇ ಇಸವಿಯಲ್ಲಿ ಮ್ಯಾಚ್‌ ಫಿಕ್ಸಿಂಗ್ ಕಳಂಕದಿಂದ ಕ್ರಿಕೆಟ್ ಕಥೆ ಮುಗಿಯಿತು ಎಂದವರು ಬಹಳಷ್ಟು ಜನ. ಆದರೆ ಸೊರಗತೊಡಗಿದ್ದ ಕ್ರಿಕೆಟ್‌ಗೆ ಸೌರವ್‌ ಗಂಗೂಲಿ, ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ, ಶ್ರೀನಾಥ್, ಲಕ್ಷ್ಮಣ್ ಅವರಂತಹ ದಿಗ್ಗಜರು ಜೀವ ತುಂಬಿದರು. ಇದೇ ಹೊತ್ತಿಗೆ ಉಪಗ್ರಹ ತಂತ್ರಜ್ಞಾನದಲ್ಲಿ ಆದ ಬೆಳವಣಿಗೆಯಿಂದ ರೂಪೆರ್ಟ್ ಮುರ್ಡೊಕ್ ತನ್ನ ಸ್ಟಾರ್ ವಾಹಿನಿಗಳ ಗುಚ್ಛದೊಂದಿಗೆ ಭಾರತಕ್ಕೆ ಕಾಲಿಟ್ಟ.

ಕ್ರಿಕೆಟ್ ಮಾಧ್ಯಮ ಹಕ್ಕುಗಳಿಗೆ ದೂರದರ್ಶನಕ್ಕೆ ಪೈಪೋಟಿ ಎದುರಾಯಿತು. ಅದರ ನಂತರದ್ದು ಇತಿಹಾಸ. ಕ್ರಿಕೆಟ್‌ಗಾಗಿಯೇ ಹತ್ತಾರು ಚಾನೆಲ್‌ಗಳು ಹುಟ್ಟಿಕೊಂಡಿವೆ. ದಿನಪೂರ್ತಿ ವಿಶ್ವದ ಮೂಲೆಮೂಲೆಯಲ್ಲಿ ನಡೆಯುವ ಕ್ರಿಕೆಟ್ ತೋರಿಸುತ್ತವೆ. ಸ್ಟಾರ್ ಕ್ರಿಕೆಟ್, ನಿಯೋ ಕ್ರಿಕೆಟ್, ಇಎಸ್‌ಪಿಎನ್. ಸೋನಿ ಸಿಕ್ಸ್ ಅದರಲ್ಲಿ ಪ್ರಮುಖವಾಗಿವೆ. ಬಿಸಿಸಿಐ ಈ ಎಲ್ಲ ಬೆಳವಣಿಗೆಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿಕೊಂಡು ಬೆಳೆಯಿತು.

ಐಪಿಎಲ್ ರಂಗಪ್ರವೇಶವಾದ ಮೇಲಂತೂ ದುಡ್ಡಿನ ಪ್ರವಾಹವೇ ಹರಿದುಬರತೊಡಗಿತು. ಟಿ20 ಕ್ರಿಕೆಟ್‌ನ ಹೊಡಿ ಬಡಿ ಆಟ ಯುವಸಮುದಾಯವನ್ನು ಆಕರ್ಷಿಸಿತು. ಇದು ಟಿವಿ ವಾಹಿನಿಗಳಿಗೆ ವರದಾನವಾಯಿತು. ಮುಸ್ಸಂಜೆಯ ಮನರಂಜನೆಯ ಸಮಯ ಕ್ರಿಕೆಟ್‌ಗೆ ಮೀಸಲಾಯಿತು. ಇದರೊಂದಿಗೆ ಬೇರೆ ಕ್ರೀಡೆಗಳಲ್ಲಿಯೂ ಲೀಗ್ ಪರಂಪರೆ ಆರಂಭವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.