ADVERTISEMENT

IPL 2025 | ವಿದೇಶಿ ಆಟಗಾರರು ಭಾರತಕ್ಕೆ ಹೋಗದಿರಿ ಎಂದ ಮಿಚೇಲ್ ಜಾನ್ಸನ್: ಏಕೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಮೇ 2025, 11:08 IST
Last Updated 16 ಮೇ 2025, 11:08 IST
<div class="paragraphs"><p>ಐಪಿಎಲ್‌ ಲೋಗೊ</p></div>

ಐಪಿಎಲ್‌ ಲೋಗೊ

   

ಪರ್ತ್‌: ವಿದೇಶಿ ಆಟಗಾರರು ಐಪಿಎಲ್‌ನ ಎರಡನೇ ಹಂತದ ಪಂದ್ಯಗಳಲ್ಲಿ ಪಾಲ್ಗೊಳ್ಳದಿರುವುದು ಉತ್ತಮ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮಿಚೇಲ್‌ ಜಾನ್ಸನ್‌ ಹೇಳಿದ್ದಾರೆ.

ಪಹಲ್ಗಾಮ್‌ ಮೇಲಿನ ಉಗ್ರರ ದಾಳಿ ಬಳಿಕ ಭಾರತ–ಪಾಕಿಸ್ತಾನ ಸಂಘರ್ಷ ಉಲ್ಬಣಿಸಿತ್ತು. ಹೀಗಾಗಿ, ಐಪಿಎಲ್‌ ಟೂರ್ನಿಯನ್ನು ಮೇ 9ರಂದು ಒಂದು ವಾರದ ಅವಧಿಗೆ ಮುಂದೂಡಲಾಗಿತ್ತು. ಅದರ ಬೆನ್ನಲ್ಲೇ, ವಿದೇಶಿ ಆಟಗಾರರು ಭಾರತ ತೊರೆದಿದ್ದರು.

ADVERTISEMENT

ಇದೀಗ, ಭಾರತ–ಪಾಕ್‌ ಕದನ ವಿರಾಮ ಘೋಷಿಸಿರುವುದರಿಂದ ಐಪಿಎಲ್‌ ಪುನರಾರಂಭಿಸುವುದಾಗಿ ಬಿಸಿಸಿಐ ಘೋಷಿಸಿದೆ. ಲೀಗ್‌, ಪ್ಲೇಆಫ್‌ ಹಾಗೂ ಫೈನಲ್‌ ಸೇರಿದಂತೆ ಇನ್ನು 17 ಪಂದ್ಯಗಳ ಬಾಕಿ ಇವೆ.

ನಾಳೆ (ಮೇ 17ರಂದು) ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಹಾಗೂ ಕೋಲ್ಕತ್ತ ನೈಟ್‌ರೈಡರ್ಸ್‌ (ಕೆಕೆಆರ್‌) ನಡುವಣ ಸೆಣಸಾಟದೊಂದಿಗೆ ಎರಡನೇ ಹಂತದ ಪಂದ್ಯಗಳಿಗೆ ಚಾಲನೆ ಸಿಗಲಿದೆ. ಆಟಗಾರರನ್ನು ಕಳುಹಿಸುವಂತೆ ಪ್ರಾಂಚೈಸಿಗಳು ಹಾಗೂ ಬಿಸಿಸಿಐ, ವಿದೇಶಿ ಮಂಡಳಿಗಳಿಗೆ ಮನವಿ ಮಾಡಿವೆ.

ಈ ಹೊತ್ತಿನಲ್ಲೇ ಜಾನ್ಸನ್‌ ಅವರು, ವಿದೇಶಿ ಆಟಗಾರರನ್ನುದ್ದೇಶಿಸಿ ಹೇಳಿಕೆ ನೀಡಿದ್ದಾರೆ.

ಸ್ವತಃ ನಿರ್ಧಾರವನ್ನು ಕೈಗೊಳ್ಳುವ ಆಯ್ಕೆಯನ್ನು ಕ್ರಿಕೆಟ್ ಆಸ್ಟ್ರೇಲಿಯಾ ಆಟಗಾರರಿಗೇ ಬಿಟ್ಟಿದ್ದರೂ, ಆ ಆಯ್ಕೆಯು ಹೆಚ್ಚಿನ ಜವಾಬ್ದಾರಿಯಿಂದ ಕೂಡಿರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್‌ನಲ್ಲಿ ಸಾಕಷ್ಟು ದುಡ್ಡು ಹರಿಯುತ್ತಿದೆ. ಅದನ್ನು ಮೀರಿಯೂ ಇದೊಂದು ಆಟವಷ್ಟೇ. ಅದರಲ್ಲೂ ಭಾರತೀಯ ಪ್ರೀಮಿಯರ್ ಲೀಗ್‌ನಿಂದ ಇದು ಇನ್ನಷ್ಟು ಜನಪ್ರಿಯತೆ ಪಡೆದಿದೆ ಎಂದಿದ್ದಾರೆ.

ಮುಂದುವರಿದು, 'ಭಾರತಕ್ಕೆ ಹಿಂದಿರುಗಿ ಟೂರ್ನಿ ಮುಗಿಯುವವರೆಗೆ ಆಡಬೇಕೇ ಎಂಬ ನಿರ್ಧಾರವನ್ನು ನಾನು ಕೈಗೊಳ್ಳುವುದಾದರೆ, ಅದು ಸುಲಭ ನಿರ್ಧಾರವೇ ಆಗಿರುತ್ತದೆ. ನನ್ನ ಪ್ರಕಾರ, ವಾಪಸ್‌ ಹೋಗುವುದು ಬೇಡ. ಜೀವ, ಸುರಕ್ಷತೆ ಅತ್ಯಂತ ಮುಖ್ಯವಾದದ್ದು. ವೇತನದ ಚೆಕ್‌ಗಳಲ್ಲ' ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಐಪಿಎಲ್‌ ನಿಗದಿಯಂತೆ ನಡೆದಿದ್ದರೆ ಮೇ 25ರಂದು ಮುಗಿಯುತ್ತಿತ್ತು. ಆದರೆ, ಪರಿಷ್ಕೃತ ವೇಳಾಪಟ್ಟಿ ಪ್ರಕಾರ ಜೂನ್‌ 3ರಂದು ಫೈನಲ್ ನಿಗದಿಯಾಗಿದೆ. ಜೂನ್ 11ರಿಂದ 15ರವರೆಗೆ ಇಂಗ್ಲೆಂಡ್‌ನ ಲಾರ್ಡ್ಸ್‌ನಲ್ಲಿ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ (ಡಬ್ಲ್ಯುಟಿಸಿ) ಫೈನಲ್ ಪಂದ್ಯ ನಡೆಯಲಿದೆ. ಹೀಗಾಗಿ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ತಂಡದ ಪ್ರಮುಖ ಆಟಗಾರರು ಐಪಿಎಲ್‌ ಉಳಿದ ಅವಧಿಯಲ್ಲಿ ಆಡುವುದು ಅನುಮಾನವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.