ADVERTISEMENT

ಮೋಯಿನ್ ಮೋಡಿಗೆ ಶರಣಾದ ಭಾರತ

ಕ್ರಿಕೆಟ್: ಇಂಗ್ಲೆಂಡ್ ಕೈವಶವಾದ ಸರಣಿ; ವಿರಾಟ್, ಅಂಜಿಂಕ್ಯ ಅರ್ಧಶತಕ ವ್ಯರ್ಥ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2018, 20:12 IST
Last Updated 2 ಸೆಪ್ಟೆಂಬರ್ 2018, 20:12 IST
ಅರ್ಧಶತಕ ಗಳಿಸಿದ ವಿರಾಟ್‌ ಕೊಹ್ಲಿ –ರಾಯಿರ್ಟಸ್‌ ಚಿತ್ರ
ಅರ್ಧಶತಕ ಗಳಿಸಿದ ವಿರಾಟ್‌ ಕೊಹ್ಲಿ –ರಾಯಿರ್ಟಸ್‌ ಚಿತ್ರ   

ಸೌಥಾಂಪ್ಟನ್:ಆಫ್‌ಸ್ಪಿನ್ನರ್ ಮೋಯಿನ್ ಅಲಿ ಸ್ಪಿನ್ ಮೋಡಿಗೆ ಭಾರತ ತಂಡವು ಸೋಲಿನ ಹಾದಿ ಹಿಡಿಯಿತು. ಇಂಗ್ಲೆಂಡ್ ತಂಡವು ಐದು ಪಂದ್ಯಗಳ ಸರಣಿಯನ್ನು 3–1ರಿಂದ ಕೈವಶ ಮಾಡಿಕೊಂಡಿತು.

ಪಂದ್ಯದ ನಾಲ್ಕನೇ ದಿನವಾದ ಭಾನುವಾರದಂದು ಭಾರತ ತಂಡವು ಗೆಲುವಿಗಾಗಿ 245 ರನ್‌ಗಳ ಗುರಿಯನ್ನು ಬೆನ್ನಟ್ಟಿತು. ಅದಕ್ಕುತ್ತರವಾಗಿ ಭಾರತ ತಂಡವು 69.4 ಓವರ್‌ಗಳಲ್ಲಿ 184 ರನ್‌ ಗಳಿಸಿತು. 60 ರನ್‌ಗಳಿಂದ ಸೋತಿತು.

ಶನಿವಾರ ಇಂಗ್ಲೆಂಡ್ ತಂಡವು ಎರಡನೇ ಇನಿಂಗ್ಸ್‌ನಲ್ಲಿ 233 ರನ್‌ಗಳ ಮುನ್ನಡೆ ಗಳಿಸಿತ್ತು. ಭಾನುವಾರ ಈ ಮೊತ್ತಕ್ಕೆ 12 ರನ್‌ ಸೇರಿಸಿದ ತಂಡವು ಆಲೌಟ್ ಆಯಿತು. ಗುರಿ ಬೆನ್ನತ್ತಿದ ಭಾರತಕ್ಕೆ ವೇಗಿಗಳಾದ ಜೇಮ್ಸ್‌ ಆ್ಯಂಡರ್ಸನ್ ಮತ್ತು ಸ್ಟುವರ್ಟ್‌ ಬ್ರಾಡ್ ಬಲವಾದ ಪೆಟ್ಟು ನೀಡಿದರು.

ADVERTISEMENT

ಆರಂಭಿಕ ಬ್ಯಾಟಿಂಗ್ ಜೋಡಿ ಮತ್ತೊಮ್ಮೆ ವೈಫಲ್ಯ ಅನುಭವಿಸಿತು. ನಾಲ್ಕನೇ ಓವರ್‌ನಲ್ಲಿ ಕೆ.ಎಲ್. ರಾಹುಲ್ ಔಟಾದರು. ಏಳು ಎಸೆತಗಳನ್ನು ಆಡಿದ ಅವರು ಖಾತೆ ತೆರೆಯಲಿಲ್ಲ. ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಚೇತೇಶ್ವರ್ ಪೂಜಾರ ಕೇವಲ ಐದು ರನ್‌ ಗಳಿಸಿ ನಿರ್ಗಮಿಸಿದರು.

ಶಿಖರ್ ಧವನ್ (17 ರನ್) ಕೂಡ ಆ್ಯಂಡರ್ಸನ್‌ ಎಸೆತದಲ್ಲಿ ಔಟಾದರು. ಈ ಹಂತದಲ್ಲಿ ಜೊತೆಗೂಡಿದ ವಿರಾಟ್ ಕೊಹ್ಲಿ (58; 130ಎ, 4ಬೌಂಡರಿ) ಮತ್ತು ಅಜಿಂಕ್ಯ ರಹಾನೆ (51; 159ಎ, 1ಬೌಂಡರಿ) ಬೌಲರ್‌ಗಳಿಗೆ ಸವಾಲೊಡ್ಡಿದರು. ಒಂದು ’ಜೀವದಾನ’ ಪಡೆದಿ್ದ ಕೊಹ್ಲಿ ತಂಡವನ್ನು ಜಯದತ್ತ ಮುನ್ನಡೆಸುವ ಭರವಸೆ ಮೂಡಿಸಿದ್ದರು. ಇಬ್ಬರೂ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 101 ರನ್‌ ಸೇರಿಸಿದರು.

ಮೋಯಿನ್ ಅಲಿ ಅವರ ಕೆಳಮಟ್ಟದ ಎಸೆತವನ್ನು ಸ್ವೀಪ್ ಮಾಡುವ ಯತ್ನದಲ್ಲಿ ವಿರಾಟ್ ಕೊಹ್ಲಿ ಅವರ ಕೈಗವಸುಗಳಿಗೆ ತಾಕಿದ ಚೆಂಡು ಅಲಸ್ಟೇರ್ ಕುಕ್ ಕೈಸೇರಿತು. ಈ ಬಾರಿ ವಿರಾಟ್ ತೆಗೆದುಕೊಂಡ ಡಿಆರ್‌ಎಸ್‌ ಫಲ ನೀಡಲಿಲ್ಲ. ನಂತರ ಬಂದ ಹಾರ್ದಿಕ್ ಪಾಂಡ್ಯ ಸೊನ್ನೆ ಸುತ್ತಿದರು. ರಿಷಭ್ ಪಂತ್ (18‌) ಮತ್ತು ಆರ್. ಅಶ್ವಿನ್ (25 ರನ್) ಅವರಿಬ್ಬರನ್ನು ಬಿಟ್ಟರೆ ಉಳಿದವರು ಹೋರಾಟ ತೋರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.