ADVERTISEMENT

ಸಯ್ಯದ್ ಮುಷ್ತಾಕ್ ಅಲಿ T20 ಟೂರ್ನಿ: ಫಿಟ್‌ನೆಸ್ ಅನುಮಾನದ ಬೆನ್ನಲ್ಲೇ ಮಿಂಚಿದ ಶಮಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2024, 14:41 IST
Last Updated 9 ಡಿಸೆಂಬರ್ 2024, 14:41 IST
<div class="paragraphs"><p>ಮೊಹಮ್ಮದ್‌ ಶಮಿ ಬ್ಯಾಟಿಂಗ್‌ ವೈಖರಿ</p></div>

ಮೊಹಮ್ಮದ್‌ ಶಮಿ ಬ್ಯಾಟಿಂಗ್‌ ವೈಖರಿ

   

ಪ್ರಜಾವಾಣಿ ಚಿತ್ರ:ಎಸ್‌.ಕೆ. ದಿನೇಶ್‌

ಬೆಂಗಳೂರು: ಫಿಟ್‌ನೆಸ್‌ ಅನುಮಾನದ ಬೆನ್ನಲ್ಲೇ ಅನುಭವಿ ವೇಗದ ಬೌಲರ್‌ ಮೊಹಮ್ಮದ್‌ ಶಮಿ ಅವರು ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿಯ ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ, ಬಂಗಾಳ ತಂಡವು ಮೂರು ರನ್‌ಗಳಿಂದ ರೋಚಕ ಜಯ ಸಾಧಿಸಿ, ಎಂಟರ ಘಟ್ಟ ಪ್ರವೇಶಿಸಿದೆ.

ADVERTISEMENT

ಮೊಣಕಾಲು ನೋವಿನಿಂದ ಗುಣಮುಖರಾಗಿ ಭಾರತ ಟೆಸ್ಟ್‌ ತಂಡಕ್ಕೆ ಮರಳುವ ನಿರೀಕ್ಷೆಯಲ್ಲಿರುವ 34 ವರ್ಷ ವಯಸ್ಸಿನ ಶಮಿ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ಚಂಡೀಗಢ ವಿರುದ್ಧ ನಡೆದ ಪಂದ್ಯದಲ್ಲಿ 17 ಎಸೆತಗಳಲ್ಲಿ ಅಜೇಯ 32 ರನ್‌ ಸಿಡಿಸಿದ್ದಾರೆ. ಬೌಲಿಂಗ್‌ನಲ್ಲಿ 25 ರನ್ನಿಗೆ ಒಂದು ವಿಕೆಟ್‌ ಮಾತ್ರ ಪಡೆದರೂ, 13 ಡಾಟ್‌ಬಾಲ್‌ಗಳನ್ನು ಹಾಕಿ ಗಮನ ಸೆಳೆದಿದ್ದಾರೆ.

ಮೊದಲು ಬ್ಯಾಟಿಂಗ್‌ ಮಾಡಿದ್ದ ಬಂಗಾಳ ತಂಡವು 114 ರನ್‌ಗೆ 8 ವಿಕೆಟ್‌ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಆತಂಕದಲ್ಲಿತ್ತು. ಈ ಹಂತದಲ್ಲಿ ಬ್ಯಾಟಿಂಗ್‌ಗೆ ಬಂದ ಶಮಿ ವೇಗವಾಗಿ ರನ್ ಸೇರಿಸಿದ್ದರಿಂದ 159 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಲು ಸಾಧ್ಯವಾಯಿತು. ಸಂದೀಪ್‌ ಶರ್ಮಾ ಹಾಕಿದ್ದ 20ನೇ ಓವರ್‌ನಲ್ಲಿ ಶಮಿ 19 ರನ್‌ ಸೂರೆಗೈದರು. ಅವರ ಇನಿಂಗ್ಸ್‌ ಮೂರು ಬೌಂಡರಿ ಮತ್ತು ಎರಡು ಭರ್ಜರಿ ಸಿಕ್ಸರ್‌ ಒಳಗೊಂಡಿತ್ತು.

ಗುರಿಯನ್ನು ಬೆನ್ನಟ್ಟಿದ ಚಂಡೀಗಢ ತಂಡವು ಹೋರಾಟ ತೋರಿದರೂ ನಿಗದಿತ ಓವರ್‌ಗಳಲ್ಲಿ 9 ವಿಕೆಟ್‌ಗೆ 156 ರನ್‌ ಗಳಿಸಿ ಅಲ್ಪ ಅಂತರದಲ್ಲಿ ಸೋತಿತು. ಬಂಗಾಳ ಪರ ಸಾಯನ್ ಘೋಷ್ ನಾಲ್ಕು ವಿಕೆಟ್ ಪಡೆದರೆ, ಕನಿಷ್ಕ್ ಸೇಠ್‌ ಎರಡು ವಿಕೆಟ್‌ ಕಬಳಿಸಿದರು.

ಇದೇ 11ರಂದು ಬೆಂಗಳೂರಿನಲ್ಲಿ ನಡೆಯುವ ಕ್ವಾರ್ಟರ್‌ ಫೈನಲ್‌ನಲ್ಲಿ ಬಂಗಾಳ ತಂಡವು, ಬರೋಡಾ ತಂಡವನ್ನು ಎದುರಿಸಲಿದೆ. ಬರೋಡಾ, ಬಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ನೇರವಾಗಿ ಎಂಟರ ಘಟ್ಟ ಪ್ರವೇಶಿಸಿತ್ತು.

ಸಂಕ್ಷಿಪ್ತ ಸ್ಕೋರ್‌

ಬಂಗಾಳ: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 159 (ಕರಣ್ ಲಾಲ್ 33, ವೃತ್ತಿಕ್ ಚಟರ್ಜಿ 28, ಪ್ರದೀಪ್ತ ಪ್ರಮಾಣಿಕ್ 30, ಮೊಹಮ್ಮದ್‌ ಶಮಿ ಔಟಾಗದೇ 32; ಜಗಜಿತ್ ಸಿಂಗ್ 21ಕ್ಕೆ 4, ರಾಜ್‌ ಬಾವಾ 27ಕ್ಕೆ 2)

ಚಂಡೀಗಢ: 20 ಓವರ್‌ಗಳಲ್ಲಿ 9ಕ್ಕೆ 156 (ರಾಜ್‌ ಬಾವಾ 32, ಪ್ರದೀಪ್‌ ಯಾದವ್‌ 27; ಸಾಯನ್ ಘೋಷ್ 30ಕ್ಕೆ 4, ಕನಿಷ್ಕ್ ಸೇಠ್‌ 35ಕ್ಕೆ 2).

ಫಲಿತಾಂಶ: ಬಂಗಾಳ ತಂಡಕ್ಕೆ 3 ರನ್‌ಗಳ ಜಯ

ಟೆಸ್ಟ್‌ಗೆ ಇನ್ನೂ ಸಿದ್ಧವಾಗದ ಶಮಿ?

ಬೆಂಗಳೂರು: ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ ಬೌಲರ್ ಒಬ್ಬ ನಾಲ್ಕು ಓವರುಗಳನ್ನು ಮಾಡಬೇಕಾಗಿದ್ದು ಮೊಹಮದ್‌ ಶಮಿ ಪಂದ್ಯದುದ್ದಕ್ಕೂ ಫಿಟ್‌ ಆಗಿದ್ದಂತೆ ಕಂಡರು. ಆದರೆ ಟೆಸ್ಟ್‌ ಪಂದ್ಯದಲ್ಲಿ ಅವರು ಜಸ್‌ಪ್ರೀತ್ ಬೂಮ್ರಾ ಜೊತೆ ಹೆಚ್ಚಿನ ಬೌಲಿಂಗ್ ಮಾಡಬೇಕಾಗುತ್ತದೆ.

ಕನಿಷ್ಠ 3 ಅಥವಾ 4 ಸ್ಪೆಲ್‌ಗಳ 20 ಓವರುಗಳನ್ನಾದರೂ ಮಾಡುವ ಅಗತ್ಯ ಬೀಳುತ್ತದೆ. ಜೊತೆಗೆ ಫೀಲ್ಡಿಂಗ್‌ನಲ್ಲೂ ಇರಬೇಕಾಗುತ್ತದೆ. ಅವರು ಫಿಟ್‌ ಎಂಬ ಪ್ರಮಾಣಪತ್ರ ದೊರೆತ ತಕ್ಷಣ ಅವರನ್ನು ತಂಡಕ್ಕೆ ಆಯ್ಕೆ ಮಾಡಲು ರಾಷ್ಟ್ರೀಯ ಆಯ್ಕೆಗಾರರು ಮನಸ್ಸು ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಬಿಸಿಸಿಐ ಮೊಗಸಾಲೆಯಲ್ಲಿ ನಡೆಯುತ್ತಿರುವ ಚರ್ಚೆಯ ಪ್ರಕಾರ ಸ್ವತಃ ವೇಗದ ಬೌಲರ್‌ ಅವರೇ ‘ನಾನು ಟೆಸ್ಟ್‌ ಪಂದ್ಯ ಆಡಲು ಇನ್ನೂ ಸಿದ್ಧಗೊಂಡಿಲ್ಲ’ ಎಂದು ಎನ್‌ಸಿಎ ವೈದ್ಯಕೀಯ ತಂಡಕ್ಕೆ ಹೇಳಿದ್ದಾರೆ.

ಬೌಲಿಂಗ್‌ ವೇಳೆ ತಮಗೆ ಏನೂ ಸಮಸ್ಯೆಯಾಗುತ್ತಿಲ್ಲ. ಆದರೆ ಪಂದ್ಯದ ನಂತರ ಮೊಣಕಾಲು ಭಾಗದಲ್ಲಿ ಊತ ಕಾಣಿಸಿಕೊಳ್ಳುತ್ತಿದೆ ಎಂದು ಅವರು ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಅಡಿಲೇಡ್‌ ಪಂದ್ಯದ ನಂತರ ನಾಯಕ ರೋಹಿತ್ ಶರ್ಮಾ ಇದೇ ಮಾತನ್ನು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.