ADVERTISEMENT

ಇಂಗ್ಲೆಂಡ್ ಸರಣಿ ಆಡಲು ನಿರಾಕರಿಸಿದ್ರಾ ಶಮಿ? ಭಾರತ ತಂಡಕ್ಕೆ ಮರಳುವುದು ಅನುಮಾನ

ಪಿಟಿಐ
Published 10 ನವೆಂಬರ್ 2025, 10:15 IST
Last Updated 10 ನವೆಂಬರ್ 2025, 10:15 IST
<div class="paragraphs"><p>ಮೊಹಮ್ಮದ್ ಶಮಿ</p></div>

ಮೊಹಮ್ಮದ್ ಶಮಿ

   

ನವದೆಹಲಿ: ಭಾರತ ಕ್ರಿಕೆಟ್ ತಂಡ ಕಂಡಂತ ಉತ್ತಮ ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿರುವ ಮೊಹಮ್ಮದ್ ಶಮಿ ಅವರಿಗೆ ಮತ್ತೆ ಟೀಂ ಇಂಡಿಯಾದಲ್ಲಿ ಆಡಲು ಅವಕಾಶ ಸಿಗುವ ಸಾಧ್ಯತೆಗಳು ತೀರಾ ಕಡಿಮೆ. ಸದ್ಯ, ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ 93 ಓವರ್ ಬೌಲಿಂಗ್ ಮಾಡಿದರೂ ಅವರಿಗೆ ಮತ್ತೆ ಭಾರತ ತಂಡದಲ್ಲಿ ಟೆಸ್ಟ್ ಅಥವಾ ಏಕದಿನ ತಂಡದಲ್ಲಿ ಸ್ಥಾನ ಸಿಗುವುದು ಅನುಮಾನವಾಗಿದೆ.

ಭಾರತ ತಂಡದ ಪರ ಕೊನೆಯದಾಗಿ ಇದೇ ವರ್ಷದ ಮಾರ್ಚ್‌ ತಿಂಗಳಿನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ 35 ವರ್ಷ ವಯಸ್ಸಿನ ಶಮಿ ಕಾಣಿಸಿಕೊಂಡಿದ್ದರು.

ADVERTISEMENT

ಸದ್ಯ, ಭಾರತ ಟಿ20 ಹಾಗೂ ಟೆಸ್ಟ್ ತಂಡದಲ್ಲಿ ಪ್ರಸಿದ್ಧ್ ಕೃಷ್ಣ ಮತ್ತು ಆಕಾಶ್ ದೀಪ್ ಗಮನಾರ್ಹ ಪ್ರದರ್ಶನ ನೀಡುತ್ತಿರುವುದಿಂದ ಶಮಿ ವಾಪಸ್ಸಾತಿ ಅನುಮಾನವಾಗಿದೆ. ಆದರೆ, ಶಮಿ ಏಕದಿನ ತಂಡದಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸಬಹುದು.

ಆದರೆ, ಮುಂದಿನ ಏಕದಿನ ವಿಶ್ವಕಪ್ ಇರುವುದು 2027ರಲ್ಲಿ, ಅಷ್ಟರ ಹೊತ್ತಿಗೆ ಶಮಿಯವರಿಗೆ 37 ವರ್ಷ ವಯಸ್ಸಾಗಿರುತ್ತದೆ. ವೃತ್ತಿ ಜೀವನದಲ್ಲಿ ಮೊಣಕಾಲು ನೋವು ಸೇರಿದಂತೆ ಹಲವು ಗಾಯಯದ ಸಮಸ್ಯೆಗಳನ್ನು ಎದುರಿಸಿರುವ ಶಮಿ ಜೊತೆ ವಿಶ್ವಕಪ್ ಆಡಲು ಆಯ್ಕೆ ಸಮಿತಿ ಯೋಚಿಸುತ್ತಾ? ಎಂಬ ಪ್ರಶ್ನೆ ಕೂಡ ಎದುರಾಗಲಿದೆ.

ರಾಷ್ಟ್ರೀಯ ಆಯ್ಕೆದಾರರು ತಮ್ಮ ಜೊತೆ ಮಾತುಕತೆ ನಡೆಸಿಲ್ಲ ಎಂಬ ಶಮಿ ಹೇಳಿಕೆಯನ್ನು ಬಿಸಿಸಿಐ ತಳ್ಳಿಹಾಕಿದೆ. ‘ಇಂಗ್ಲೆಂಡ್ ಪ್ರವಾಸದ ಸಂದರ್ಭದಲ್ಲಿ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನ ರಾಷ್ಟ್ರೀಯ ಆಯ್ಕೆದಾರರು ಮತ್ತು ಸಹಾಯಕ ಸಿಬ್ಬಂದಿ ಶಮಿ ಅವರ ಫಿಟ್‌ನೆಸ್ ಪರಿಶೀಲಿಸಲು ಹಲವು ಬಾರಿ ಕರೆ ಮಾಡಿದ್ದಾರೆ. ಜಸ್‌ಪ್ರೀತ್ ಬುಮ್ರಾ 3 ಟೆಸ್ಟ್‌ಗಳಿಗಿಂತ ಹೆಚ್ಚು ಪಂದ್ಯಗಳನ್ನು ಆಡಲು ಫಿಟ್ ಇಲ್ಲವಾಗಿದ್ದರಿಂದ ಆಯ್ಕೆ ಸಮಿತಿ ಶಮಿ ತಂಡದ ಭಾಗವಾಗಲು ಬಯಸಿತ್ತು’ ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

‘ಇಂಗ್ಲೆಂಡ್‌ನಂತ ಕಠಿಣ ಪರಿಸ್ಥಿತಿಯಲ್ಲಿ ಶಮಿಯಂತ ಬೌಲರ್ ತಂಡದಲ್ಲಿರುವುದು ಬಹಳ ಮುಖ್ಯವಾಗಿತ್ತು. ಹಾಗಾಗಿ ತಂಡದ ಆಯ್ಕೆಗೂ ಮುನ್ನ ಅವರ ಫಿಟ್‌ನೆಸ್ ಬಗ್ಗೆ ತಿಳಿದುಕೊಳ್ಳಲು ಶಮಿಯವರಿಗೆ ಹಲವು ಬಾರಿ ಕರೆ ಮಾಡಿ ಇಂಗ್ಲೆಂಡ್ ಲಯನ್ಸ್ ವಿರುದ್ಧ ನಡೆಯುವ ಯಾವುದಾದರು ಒಂದು ಪಂದ್ಯದಲ್ಲಿ ಭಾರತ ಎ ಪರ ಕಣಕ್ಕಿಳಿಯುವಂತೆ ವಿನಂತಿಸಲಾಯಿತು. ಆದರೆ ಅವರು ಪ್ರತಿಕ್ರಿಯಿಸಿಲ್ಲ’ ಎಂದಿದ್ದಾರೆ.

‘ಹಾಗಾಗಿ ಶಮಿ ಅವರ ಜೊತೆ ರಾಷ್ಟ್ರೀಯ ಆಯ್ಕೆ ಸಮಿತಿ ಮಾತುಕತೆ ನಡೆಸಿಲ್ಲ ಎಂಬುದು ಸತ್ಯಕ್ಕೆ ದೂರವಾದ ವಿಚಾರ. ಕ್ರೀಡಾ ವಿಜ್ಞಾನಿಗಳ ತಂಡ ಶಮಿಯವರ ವೈದ್ಯಕೀಯ ವರದಿ ಮತ್ತು ಅವರ ಫಿಟ್‌ನೆಸ್ ಹಾಗೂ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿನ ಸವಾಲುಗಳನ್ನು ಎದುರಿಸಲು ಅವರು ಸದೃಢವಾಗಿದ್ದಾರೆಯೇ ಎಂಬುದರ ಸಂಪೂರ್ಣ ಮಾಹಿತಿ ಇಟ್ಟುಕೊಂಡಿದ್ದಾರೆ’ ಎಂದು ಹಿರಿಯ ಅಧಿಕಾರಿ ಹೇಳಿದ್ದಾರೆ.

ರಣಜಿಯಲ್ಲಿ ಬಂಗಾಳ ತಂಡದ ಪರ ಆಡುತ್ತಿರುವ ಶಮಿ ಧೀರ್ಘಾವದಿಯ ಸ್ಪೆಲ್ ಮಾಡುತ್ತಿಲ್ಲ. ಒಂದು ಸ್ಪೆಲ್‌ನಲ್ಲಿ ಅವರು ಕೇವಲ 4 ಓವರ್‌ ಬೌಲಿಂಗ್ ಮಾಡುತ್ತಿದ್ದಾರೆ ಮತ್ತು ಒಂದು ದಿನದಲ್ಲಿ ಹಲವು ಬಾರಿ ವಿರಾಮ ತೆಗೆದುಕೊಳ್ಳುತ್ತಿದ್ದಾರೆ. ಜೊತೆಗೆ ಅವರ ವೇಗ ಕೂಡ ಕಡಿಮೆಯಾಗಿದೆ. ಸರಾಸರಿ ಗಂಟೆಗೆ 130 ಕಿ.ಮೀ.ಗಳಿಗಿಂತ ಹೆಚ್ಚಿಲ್ಲ ಎಂಬುದು ಗಮನಾರ್ಹ ಸಂಗತಿ.