
ಅಹಮದಾಬಾದ್ : ಒಂದೇ ಕ್ರಿಕೆಟ್ ತಂಡದಲ್ಲಿ ಸಹೋದರರು ಆಡುವುದು ಹೊಸದೇನಲ್ಲ. ಆದರೆ ಬೇರೆ ಬೇರೆ ತಂಡಗಳಲ್ಲಿದ್ದು ಎದುರಾಳಿಗಳಾಗಿ ಇಳಿಯುವುದು ಅಪರೂಪ. ಭಾನುವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 8 ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಪಂದ್ಯದಲ್ಲಿ ಸಹೋದರರಾದ ಅಲ್ಬೀ ಮತ್ತು ಮಾರ್ನೆ ಮಾರ್ಕೆಲ್ ಮುಖಾಮುಖಿಯಾಗಲಿದ್ದಾರೆ.
ಅಲ್ಬೀ ಅವರು ದಕ್ಷಿಣ ಆಫ್ರಿಕಾ ತಂಡದ ವಿಶೇಷ ಸಲಹೆಗಾರರಾಗಿದ್ದಾರೆ. ಮಾರ್ನೆ ಭಾರತ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
‘ಇಲ್ಲ. ನಾವಿಬ್ಬರೂ ಮಾತನಾಡುವುದಿಲ್ಲ. ನಮಗಿಂತಲೂ ಅಮ್ಮನಿಗೆ ಹೆಚ್ಚು ಚಿಂತೆ ಇದೆ. ನಮ್ಮಿಬ್ಬರಲ್ಲಿ ಯಾರನ್ನು ಬೆಂಬಲಿಸಬೇಕು ಎಂಬ ಗೊಂದಲದಲ್ಲಿದ್ದಾರೆ’ ಎಂದು ಅಲ್ಬೀ ಹೇಳಿದ್ದಾರೆ.
‘ಅವರು (ಅಲ್ಬೀ) ಮೈದಾನಕ್ಕೆ ಬಂದಿರುವುದನ್ನು ನಾನು ನೋಡಿದೆ. ಆದರೆ ನಾವು ಹೆಚ್ಚು ಮಾತನಾಡಿಲ್ಲ. ಅವರನ್ನು ಇಲ್ಲಿ ನೋಡಲು ಸಂತಸವಾಗುತ್ತಿದೆ’ ಎಂದು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮಾರ್ನೆ ತಮ್ಮ ಅಣ್ಣನ ಬಗ್ಗೆ ಹೇಳಿದರು.
ಹಿಂದಿನಿಂದಲೂ ಕ್ರಿಕೆಟ್ ಅಂಗಳದಲ್ಲಿ ಸಹೋದರರು ಜೊತೆಯಾಗಿ ಆಡಿದ ಕತೆಗಳು ಸಾಕಷ್ಟಿವೆ. ಚಾಪೆಲ್ (ಇಯಾನ್ –ಗ್ರೇಗ್), ವಾ (ಸ್ಟೀವ್–ಮಾರ್ಕ್), ಅಮರನಾಥ್ (ಮೊಹಿಂದರ್, ಸುರೀಂದರ್ ಮತ್ತು ರಾಜೀಂದರ್), ಪಠಾಣ್ ( ಇರ್ಫಾನ್–ಯೂಸುಫ್), ಪಾಂಡ್ಯ (ಹಾರ್ದಿಕ್–ಕೃಣಾಲ್), ಮೊಹಮ್ಮದ್ (ಹನೀಫ್, ಸಾದೀಕ್, ಮುಷ್ತಾಕ್, ವಜೀರ್) ಮತ್ತು ಹ್ಯಾಡ್ಲೀ (ರಿಚರ್ಡ್–ಡೇಲ್) ಪ್ರಮುಖರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.