ADVERTISEMENT

ಆಲ್‌ರೌಂಡರ್‌ ಕ್ರಿಸ್ ಮೊರಿಸ್‌: ಯಾರ್ಕರ್ ವೀರ, ಫಿನಿಷರ್ ಈ ಛಲಗಾರ

ಗಳಿಸಿರುವ ಒಟ್ಟು ರನ್‌ 551; ಉರುಳಿಸಿದ ವಿಕೆಟ್‌ ಸಂಖ್ಯೆ 80

ಪಿಟಿಐ
Published 19 ಫೆಬ್ರುವರಿ 2021, 7:37 IST
Last Updated 19 ಫೆಬ್ರುವರಿ 2021, 7:37 IST
ಕ್ರಿಸ್ ಮೊರಿಸ್
ಕ್ರಿಸ್ ಮೊರಿಸ್   

ಚೆನ್ನೈ: ಮೂಲಬೆಲೆ ₹ 1 ಕೋಟಿಯೂ ನಿಗದಿಯಾಗಿಲ್ಲದೇ ಇದ್ದ ಕ್ರಿಸ್ ಮೊರಿಸ್‌ಗೆ ಗುರುವಾರ ನಡೆದ ಐಪಿಎಲ್ ಹರಾಜಿನಲ್ಲಿ ಕೊನೆಗೆ ಲಭಿಸಿದ್ದು ದಾಖಲೆಯ ₹ 16.25ಕೋಟಿ. ವೇಗದ ದಾಳಿಯ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸಬಲ್ಲ ಈ ‘ಎತ್ತರದ’ ಆಟಗಾರ ಅಗತ್ಯ ಬಿದ್ದರೆ ಬ್ಯಾಟ್ ಮೂಲಕವೂ ಉತ್ತರ ನೀಡುವ ಸಾಮರ್ಥ್ಯ ಹೊಂದಿದ್ದಾರೆ.

ದಕ್ಷಿಣ ಆಫ್ರಿಕಾದ ಪ್ರೆಟೋರಿಯಾದಲ್ಲಿ ಏಪ್ರಿಲ್ 30ರಂದು ಜನಿಸಿದ ಮೊರಿಸ್‌ಗೆ ಈಗ 33 ವರ್ಷ ವಯಸ್ಸು. ರಾಷ್ಟ್ರೀಯ ತಂಡದ ಪರ ಎಲ್ಲ ಮಾದರಿಯಲ್ಲೂ ಆಡಿರುವ ಅವರು 2013ರಿಂದ ಐಪಿಎಲ್‌ನಲ್ಲಿ ಕಣಕ್ಕೆ ಇಳಿಯುತ್ತಿದ್ದಾರೆ. ಈ ವರೆಗೆ ಒಟ್ಟು 70 ‍ಪಂದ್ಯಗಳನ್ನು ಆಡಿದ್ದು 551 ರನ್ ಕಲೆ ಹಾಕಿದ್ದಾರೆ. 80 ವಿಕೆಟ್‌ಗಳನ್ನೂ ಉರುಳಿಸಿದ್ದಾರೆ.

‘ಹರಾಜಿಗಿಂತ ಮುನ್ನ ಕ್ರಿಸ್ ಮೊರಿಸ್ ಜೊತೆ ಚರ್ಚೆ ನಡೆಸಿದ್ದೇವೆ. ಅವರ ಆರೋಗ್ಯದ ಕುರಿತು ಸಂಪೂರ್ಣ ಮಾಹಿತಿ ಕಲೆ ಹಾಕಲಾಗಿದ್ದು ದಕ್ಷಿಣ ಆಫ್ರಿಕದಲ್ಲಿ ಬಯೋ ಬಬಲ್‌ನಲ್ಲಿರುವ ಅವರು ದೇಶಿ ಕ್ರಿಕೆಟ್ ಆಡಲು ಸಜ್ಜಾಗಿದ್ದಾರೆ. ಈ ಹಿಂದೆ ರಾಯಲ್ ತಂಡದಲ್ಲಿ ಇದ್ದ ಅವರು ಹರಾಜಿನಲ್ಲಿ ಕೊಂಡುಕೊಂಡ ಮೊತ್ತಕ್ಕೆ ನ್ಯಾಯ ಒದಗಿಸುವ ರೀತಿಯಲ್ಲಿ ಆಡುವ ವಿಶ್ವಾಸವಿದೆ. ಹೀಗಾಗಿ ಅವರ ಮೇಲೆ ಗರಿಷ್ಠ ಹಣ ಹೂಡಲು ಮುಂದಾಗಿದ್ದೆವು’ ಎಂದು ತಂಡದ ಸಿಒಒ ಜೇಕ್ ರೂಚ್ ಮೆಕ್ರಂ ತಿಳಿಸಿದರು.

ADVERTISEMENT

ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಐಪಿಎಲ್ ಅಭಿಯಾನ ಆರಂಭಿಸಿದ ಮೊರಿಸ್ ನಂತರ ರಾಜಸ್ಥಾನ ರಾಯಲ್ಸ್ ಪರ ಆಡಿದ್ದಾರೆ. ಛಲ ಬಿಡದ ಆಟಗಾರ ಎಂದೇ ಖ್ಯಾತಿ ಪಡೆದಿದ್ದಾರೆ. ಆದ್ದರಿಂದ ಚುಟುಕು ಕ್ರಿಕೆಟ್‌ನಲ್ಲಿ ಹೆಸರು ಮಾಡಿದ್ದಾರೆ. ಹಿಂದಿನ ಕೆಲವು ಆವೃತ್ತಿಗಳಲ್ಲಿ ಡೆಲ್ಲಿ ತಂಡಕ್ಕೆ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ದೊಡ್ಡ ಕಾಣಿಕೆ ನೀಡಿದ್ದಾರೆ. ಡೆತ್‌ ಓವರ್‌ಗಳಲ್ಲಿ ಯಾರ್ಕರ್‌ಗಳ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸಿರುವ ಮೊರಿಸ್ ಕೆಲವು ‍ಪಂದ್ಯಗಳಲ್ಲಿ ‘ಫಿನಿಷರ್’ ಪಾತ್ರವನ್ನೂ ವಹಿಸಿದ್ದಾರೆ.

2013ರ ನಂತರ ಮುಂದಿನ ಆವೃತ್ತಿಯಲ್ಲಿ ಮೊರಿಸ್ ಆಡಿರಲಿಲ್ಲ. 2015ರಿಂದ ಕಳೆದ ಬಾರಿಯ ವರೆಗೂ ಆಡಿದ್ದಾರೆ. ಅತಿ ಹೆಚ್ಚು, 16 ಪಂದ್ಯಗಳಲ್ಲಿ ಆಡಿದ್ದು 2013ರಲ್ಲಿ. ಆ ವರ್ಷ ಕೇವಲ 14 ರನ್ ಗಳಿಸಿದ್ದ ಅವರು 15 ವಿಕೆಟ್ ಉರುಳಿಸಿದ್ದಾರೆ. 2015 ಮತ್ತು 2016ರ ಆವೃತ್ತಿಯಲ್ಲಿ ಕ್ರಮವಾಗಿ 11 ಮತ್ತು 12 ಪಂದ್ಯಗಳನ್ನು ಆಡಿದ್ದಾರೆ. 2015ರಲ್ಲಿ 76 ರನ್ ಮತ್ತು 13 ವಿಕೆಟ್ ಗಳಿಸಿದ್ದ ಅವರು ನಂತರದ ವರ್ಷ 195 ರನ್ ಮತ್ತು 13 ವಿಕೆಟ್ ಗಳಿಸಿ ಮಿಂಚಿದರು.

ಮುಂದಿನ ನಾಲ್ಕು ಆವೃತ್ತಿಗಳಲ್ಲಿ ಕ್ರಮವಾಗಿ 9,4,9,9 ಪಂದ್ಯಗಳನ್ನು ಆಡಿದ್ದು 154, 46, 32 ಮತ್ತು 34 ರನ್‌ ಗಳಿಸಿದ್ದಾರೆ. ಕ್ರಮವಾಗಿ 12, 3, 13 ಮತ್ತು 11 ವಿಕೆಟ್‌ಗಳೂ ಅವರ ಪಾಲಾಗಿವೆ.

21 ಬಾರಿ ನಾಟೌಟ್ ಆಗಿರುವ ಕ್ರಿಸ್ ಮೊರಿಸ್ ಒಟ್ಟು 551 ರನ್ ಗಳಿಸಿದ್ದು ಅಜೇಯ 82 ಅವರ ಗರಿಷ್ಠ ಗಳಿಕೆ. ಎರಡು ಅರ್ಧಶತಕಗಳನ್ನೂ ಗಳಿಸಿದ್ದಾರೆ. ಒಟ್ಟು 80 ವಿಕೆಟ್ ಉರುಳಿಸಿದ್ದು 23ಕ್ಕೆ4 ವಿಕೆಟ್ ಅವರ ಶ್ರೇಷ್ಠ ಬೌಲಿಂಗ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.